ರಾಜ್ಯಕ್ಕೆ ಮೊದಲ ಹಂತದಲ್ಲಿ 6.48 ಲಕ್ಷ ಡೋಸ್ ಲಸಿಕೆ ಬಂದಿದೆ: ಸಚಿವ ಡಾ.ಕೆ.ಸುಧಾಕರ್

Update: 2021-01-12 14:38 GMT

ಬೆಂಗಳೂರು, ಜ.12: ರಾಜ್ಯಕ್ಕೆ ಮೊದಲ ಹಂತದಲ್ಲಿ 54 ಬಾಕ್ಸ್ ಗಳಲ್ಲಿ 6.48 ಲಕ್ಷ ಡೋಸ್ ಕೊರೋನ ಲಸಿಕೆ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮಂಗಳವಾರ ಕೊರೋನ ಲಸಿಕೆ ಆನಂದರಾವ್ ವೃತ್ತದ ಸಂಗ್ರಹ ಕೇಂದ್ರಕ್ಕೆ ಬಂದ ಬಳಿಕ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

6.48 ಲಕ್ಷ ಡೋಸ್ 54 ಬಾಕ್ಸ್ ಗಳಲ್ಲಿ ಬಂದಿದ್ದು, ಉತ್ತಮವಾಗಿ ಪ್ಯಾಕೇಜ್ ಮಾಡಿ ತರಲಾಗಿದೆ. ನಿರ್ದಿಷ್ಟ ತಾಪಮಾನದಲ್ಲಿ ತಂದ ಲಸಿಕೆಯನ್ನು ಸಂಗ್ರಹ ಕೇಂದ್ರದಲ್ಲಿ ಇಡಲಾಗಿದೆ. ನಾಳೆ ಬೆಳಗಾವಿಗೆ 1.40 ಲಕ್ಷ ಡೋಸ್ ಲಸಿಕೆ ಬರಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಪ್ರಧಾನಿ ಮೋದಿ, ಕಂಪನಿಗಳಿಗೆ ಸಹಕಾರ ನೀಡಿರುವುದರಿಂದ ಕೇವಲ 210 ರೂ.ಗೆ ಲಸಿಕೆ ದೊರೆಯುತ್ತಿದೆ. ಕೊರೋನ ನಿಯಂತ್ರಣಕ್ಕೆ ಶ್ರಮಿಸಿದ ಎಲ್ಲ ಸಿಬ್ಬಂದಿ ಜನವರಿ 16ರಿಂದ ಆರಂಭವಾಗುವ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಇದಕ್ಕಾಗಿ ಮಾರ್ಗಸೂಚಿ ನೀಡಲಾಗುವುದು ಎಂದು ಸುಧಾಕರ್ ತಿಳಿಸಿದರು.

ಇನ್ನೂ ನಾಲ್ಕು ಕಂಪನಿಗಳು ಲಸಿಕೆ ತಯಾರಿಸಲಿವೆ. ಅದು ಬಂದ ಬಳಿಕ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತದೆ. ಲಸಿಕೆಗಳನ್ನು ಸುರಕ್ಷಿತವಾಗಿ ತಂದು ದಾಸ್ತಾನು ಮಾಡುವ ಅನುಭವ ನಮ್ಮ ಸಿಬ್ಬಂದಿಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯಕ್ಷಮತೆ ಮೇಲೆ ಯಾರಿಗೂ ಅಪನಂಬಿಕೆ ಬೇಡ. ಎಲ್ಲ ಪ್ರಕ್ರಿಯೆಗಳು ನಿಯಮದಂತೆ ನಡೆಯುತ್ತಿವೆ ಎಂದು ಅವರು ಹೇಳಿದರು.

2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಲಸಿಕೆ ನೀಡಲಿದ್ದು, ಎಲ್ಲರಿಗೂ ತರಬೇತಿ ನೀಡಲಾಗಿದೆ. ಅಡ್ಡಪರಿಣಾಮಗಳು ಬರಲು ಸಾಧ್ಯವೇ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡುವ ಸ್ಥಳದಲ್ಲಿ ನಿಗಾ ಇರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಬಾಕ್ಸ್ ಬಹಳ ಭಾರವಾಗಿದ್ದು, ಸಿಬ್ಬಂದಿಯೊಬ್ಬರ ಕೈ ತಪ್ಪಿ ಸ್ವಲ್ಪ ಜಾರಿದೆ. ಇದರಿಂದ ಏನೂ ಸಮಸ್ಯೆಯಾಗಿಲ್ಲ. ಆತಂಕ ಬೇಡ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News