ಕೊನೆಯ ಕ್ಷಣದಲ್ಲಿ ಶಾಸಕ ಮುನಿರತ್ನ ಕೈತಪ್ಪಿದ ಮಂತ್ರಿ ಸ್ಥಾನ

Update: 2021-01-13 14:46 GMT

ಬೆಂಗಳೂರು, ಜ. 13: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್.ನಗರ) ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಮತಗಳಿಂದ ಆಯ್ಕೆಯಾಗಿದ್ದ ಶಾಸಕ ಮುನಿರತ್ನ ಅವರಿಗೆ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದೆ.

ಬುಧವಾರ ವಿಧಾನಸೌಧದಲ್ಲೇ ನೂತನ ಸಚಿವರ ಪಟ್ಟಿಯನ್ನು ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದು, ಏಳು ಮಂದಿಗೆ ಸಚಿವ ಸ್ಥಾನ ನೀಡಲಾಗುವುದೆಂದು ಪ್ರಕಟಿಸಿದರು. ಆದರೆ, ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕ ಮುನಿರತ್ನ ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದಾರೆ.

ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಿತರಾಗಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರೆನ್ನಲಾದ ಶಾಸಕ ಮುನಿರತ್ನ ಏಕಾಏಕಿ ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನಸೇವಕ ಸಮಾವೇಶದಲ್ಲಿ ಕಾಣಿಸಿಕೊಂಡರು. ಯಾರೊಂದಿಗೂ ಮಾತನಾಡದೆ, ಯಾವುದೇ ಪ್ರತಿಕ್ರಿಯೆ ನೀಡದೆ ಹಿಂದಿರುಗಿದರು.

‘ನಕಲಿ ಗುರುತಿನ ಚೀಟಿ' ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಬಿಜೆಪಿ ಮುಖಂಡ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ 2018ರ ಬಿಜೆಪಿ ಅಭ್ಯರ್ಥಿ ಮುನಿರಾಜ್ ಗೌಡ ಪ್ರಕರಣ ದಾಖಲಿಸಿದ್ದು ವಿಚಾರಣೆ ಬಾಕಿ ಇದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ಮುಜುಗರದಿಂದ ತಪ್ಪಿಸಿಕೊಳ್ಳಲು ಮುನಿರತ್ನ ಅವರಿಗೆ ಸದ್ಯಕ್ಕೆ ಸಂಪುಟದಲ್ಲಿ ಸ್ಥಾನ ನೀಡಿಲ್ಲ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಸ್ಥಾನದ ಭರವಸೆ: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕ ಮುನಿರತ್ನ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ ಸಿಎಂ ಯಡಿಯೂರಪ್ಪ, ನಿಮಗೆ ಸಚಿವ ಸ್ಥಾನ ನೀಡುವುದು ನಿಶ್ಚಿತ. ಸದ್ಯಕ್ಕೆ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಸಮಾಧಾನಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News