ಲಸಿಕೆ ನೀಡಿಕೆ ಅಭಿಯಾನಕ್ಕೆ ಪ್ರಧಾನಿ ಶನಿವಾರ ಚಾಲನೆ

Update: 2021-01-14 18:31 GMT

ಹೊಸದಿಲ್ಲಿ,ಜ.14: ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನಕ್ಕೆ ಜ.16ರಂದು ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ. ಆಯ್ದ ಲಸಿಕೆ ನೀಡಿಕೆ ಕೇಂದ್ರಗಳಲ್ಲಿ ಮೊದಲ ದಿನ ಲಸಿಕೆಗಳನ್ನು ಸ್ವೀಕರಿಸುವ ಕೆಲವು ಆರೋಗ್ಯ ಕಾರ್ಯಕರ್ತರೊಂದಿಗೆ ಮೋದಿಯವರು ವೀಡಿಯೊ ಲಿಂಕ್ ಮೂಲಕ ಸಂವಾದವನ್ನೂ ನಡೆಸಲಿದ್ದಾರೆ ಎಂದು ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು.

ಕೋವಿಡ್-19 ಲಸಿಕೆಯ ಪೂರೈಕೆ ಮತ್ತು ವಿತರಣೆಯ ನೈಜ ಸಮಯದ ನಿಗಾಕ್ಕಾಗಿ ರೂಪಿಸಲಾಗಿರುವ ಕೋ-ವಿನ್ ಆ್ಯಪ್‌ಗೂ ಮೋದಿಯವರು ಚಾಲನೆ ನೀಡುವ ಸಾಧ್ಯತೆಯಿದೆ ಎಂದು ಅವು ಹೇಳಿದವು.

ದೇಶದಲ್ಲಿಯ ಒಟ್ಟು 2,934 ಲಸಿಕೆ ನೀಡಿಕೆ ಕೇಂದ್ರಗಳ ಪೈಕಿ ಸೀಮಿತ ಸಂಖ್ಯೆಯ ಕೇಂದ್ರಗಳನ್ನು ಆಯ್ಕೆಮಾಡಲಾಗಿದ್ದು,ಅಲ್ಲಿಂದ ಫಲಾನುಭವಿಗಳು ಪ್ರಧಾನಿ ಜೊತೆ ಸಂವಾದ ನಡೆಸಬಹುದು ಮತ್ತು ಇದಕ್ಕಾಗಿ ಎಲ್ಲ ಐಟಿ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಈ ಕೇಂದ್ರಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಈ ಮೂಲಗಳು ತಿಳಿಸಿದವು. ಪ್ರಧಾನಿವರೊಂದಿಗೆ ಸಂವಾದಕ್ಕೆ ತಾವು ಸಿದ್ಧರಾಗಿದ್ದೇವೆ ಎಂದು ದಿಲ್ಲಿಯ ಏಮ್ಸ್ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಗಳ ಅಧಿಕಾರಿಗಳು ಹೇಳಿದರು.

ಮೊದಲ ದಿನ 2,934 ಕೇಂದ್ರಗಳಲ್ಲಿ ಸುಮಾರು ಮೂರು ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆಯನ್ನು ಪಡೆಯಲಿದ್ದಾರೆ. ಪ್ರತಿ ಕೇಂದ್ರವು ದಿನವೊಂದಕ್ಕೆ ಗರಿಷ್ಠ 100 ಫಲಾನುಭವಿಗಳಿಗೆ ಲಸಿಕೆಗಳನ್ನು ನೀಡಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಲಸಿಕೆ ಪಡೆಯಲು ಕೋ-ವಿನ್ ಆ್ಯಪ್‌ನಲ್ಲಿ ಹೆಸರುಗಳನ್ನು ನೋಂದಾಯಿಸಿಕೊಂಡಿರುವ ಆರೋಗ್ಯ ಕಾರ್ಯಕರ್ತರಲ್ಲಿ ವೈದ್ಯರು ಮತ್ತು ನರ್ಸ್‌ಗಳು ಮಾತ್ರವಲ್ಲ, ಸ್ವಚ್ಛತಾ ಕಾರ್ಮಿಕರು,ಆ್ಯಂಬುಲನ್ಸ್ ಚಾಲಕರೂ ಒಳಗೊಂಡಿದ್ದು,50 ವರ್ಷಕ್ಕೂ ಮೇಲ್ಪಟ್ಟವರು ಸೇರಿದಂತೆ ಮಿಶ್ರ ವಯೋಮಾನದವರಾಗಿದ್ದಾರೆ.

 ಮೊದಲ ಹಂತದಲ್ಲಿ ಖರೀದಿ ಮಾಡಲಾಗಿರುವ ಎಲ್ಲ 1.65 ಕೋಟಿ ಕೋವಿಡ್-19 ಲಸಿಕೆ ಡೋಸ್‌ಗಳನ್ನು ಆರೋಗ್ಯ ಕಾರ್ಯಕರ್ತರ ಸಂಖ್ಯೆಗೆ ಅನುಗುಣವಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಲಸಿಕೆ ಡೋಸ್‌ಗಳ ಹಂಚಿಕೆಯಲ್ಲಿ ಯಾವುದೇ ರಾಜ್ಯದ ವಿರುದ್ಧ ತಾರತಮ್ಯದ ಪ್ರಶ್ನೆಯೇ ಇಲ್ಲ. ಇದು ಲಸಿಕೆಯ ಆರಂಭಿಕ ಪೂರೈಕೆಯಾಗಿದ್ದು ಮುಂಬರುವ ವಾರಗಳಲ್ಲಿ ನಿರಂತರವಾಗಿ ಮರುಪೂರೈಕೆಯಾಗುತ್ತಿರುತ್ತದೆ. ಹೀಗಾಗಿ ಲಸಿಕೆ ಪೂರೈಕೆಯಲ್ಲಿ ಕೊರತೆಯಾಗಬಹುದು ಎಂಬ ಆತಂಕವು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಸಚಿವಾಲಯವು ಗುರುವಾರ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News