ಬ್ರಿಸ್ಬೇನ್ ಟೆಸ್ಟ್: ಆಸೀಸ್ 369ಕ್ಕೆ ಆಲೌಟ್, ಭಾರತಕ್ಕೆ ಆರಂಭಿಕ ಆಘಾತ

Update: 2021-01-16 03:48 GMT

ಬ್ರಿಸ್ಬೇನ್, ಜ.16: ಇಲ್ಲಿನ ಗಾಬಾ ಸ್ಟೇಡಿಯಂನಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 369 ರನ್‌ಗಳಿಗೆ ಆಲೌಟ್ ಆಗಿದೆ. ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ 11 ರನ್ ಗಳಿಸುವಷ್ಟರಲ್ಲಿ 1 ವಿಕೆಟ್ ಕಳೆದುಕೊಂಡಿದೆ. 

ಮೊದಲ ದಿನ ಉತ್ತಮ ಪ್ರದರ್ಶನ ತೋರಿ ದೊಡ್ಡ ಮೊತ್ತದತ್ತ ಕಣ್ಣಿಟ್ಟಿದ್ದ ಆಸ್ಟ್ರೇಲಿಯಾ ತಂಡವನ್ನು ಎರಡನೇ ದಿನ ಭಾರತದ ಬೌಲರ್‌ಗಳು ಕಟ್ಟಿಹಾಕಿದರು. ಟಿಮ್ ಪೈನ್ (40) ಅವರು ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಕ್ಯಾಮರೂನ್ ಗ್ರೀನ್ (47) ಮೊದಲ ಟೆಸ್ಟ್ ಆಡುತ್ತಿರುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್‌ಗೆ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್ ಉರುಳುತ್ತಿದ್ದಂತೆ ಭಾರತೀಯ ಬೌಲರ್‌ಗಳು ಅತಿಥೇಯ ತಂಡದ ಬಾಲಂಗೋಚಿಗಳನ್ನು ಅಗ್ಗಕ್ಕೆ ಪೆವಿಲಿಯನ್‌ಗೆ ಕಳುಹಿಸಿದರು.

ಭಾರತದ ಪರ ಟಿ.ನಟರಾಜನ್ (78ಕ್ಕೆ 3), ಶಾರ್ದೂಲ್ ಠಾಕೂರ್ (94ಕ್ಕೆ 3) ಮತ್ತು ವಾಷಿಂಗ್ಟನ್ ಸುಂದರ್ (89ಕ್ಕೆ 3) ಪರಿಣಾಮಕಾರಿ ಪ್ರದರ್ಶನ ತೋರಿದರು. ಮೊಹ್ಮದ್ ಸಿರಾಜ್ 77 ರನ್‌ಗಳಿಗೆ 1 ವಿಕೆಟ್ ಕಿತ್ತರು.

ಬಳಿಕ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಕಮಿನ್ಸ್ ಆರಂಭಿಕ ಆಘಾತವಿಕ್ಕಿದ್ದಾರೆ. ತಂಡ 11 ರನ್ ಗಳಿಸಿದ್ದಾಗ ಭರವಸೆಯ ಆರಂಭಿಕ ಬ್ಯಾಟ್ಸ್ ಮ್ಯಾನ್ ಶುಭಮನ್ ಗಿಲ್(7 ರನ್) ವಿಕೆಟ್ ಪಡೆದರು. ಸದ್ಯ 12 ಓವರ್ ಗಳಿಗೆ 29 ರನ್ ಗಳಿಸಿದ್ದು, ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಬ್ಯಾಟಿಂಗ್ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News