ಅಧಿಕಾರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್

Update: 2021-01-19 16:42 GMT

ಬೆಂಗಳೂರು, ಜ.19: ಪರಿಸರ ಸಂರಕ್ಷಣೆ ಕಾಯ್ದೆ ರೂಪಿಸುವಾಗ ಸಂಸತ್ತು ಹೊರ ದೇಶದ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದೆ ಎಂದು ಲಿಖಿತ ಆಕ್ಷೇಪಣೆ ಸಲ್ಲಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ದಂಡ ವಿಧಿಸುವುದಾಗಿ ಹೈಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಪರಿಸರ ಪರಿಣಾಮ ಅಧ್ಯಯನ(ಇಐಎ) ಹೊರಗಿಡಲು ಮುಂದಾಗಿರುವ ಸರಕಾರದ ಕ್ರಮ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಾದಿಸಿದ ವಕೀಲ ಉದಯ್ ಹೊಳ್ಳ ಅವರು, ಪಿಐಎಲ್‍ಗೆ ಆಕ್ಷೇಪಣೆ ಸಲ್ಲಿಸುವ ವೇಳೆ ಅಂತಹ ಹೇಳಿಕೆ ದಾಖಲಿಸಿರುವುದು ಸರಿ ಎನ್ನಿಸುವುದಿಲ್ಲ. ತ್ವರಿತವಾಗಿ ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ಹಾಗೆ ಹೇಳಲಾಗಿದೆ. ಇದರಲ್ಲಿ ಅಧಿಕಾರಿಗಳ ಪಾತ್ರವಿಲ್ಲ. ಹೀಗಾಗಿಯೇ, ಲಿಖಿತ ಆಕ್ಷೇಪಣೆ ಸಲ್ಲಿಸಿದ ವಕೀಲರನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಕೀಲರು ಹೇಳಿಕೆಯನ್ನು ತಯಾರು ಮಾಡಿದರು ಎಂದು ಹೇಳುತ್ತೀರಿ. ಅಂತಹ ಹೇಳಿಕೆಗೆ ಅಧಿಕಾರಿ ಹೇಗೆ ಸಹಿ ಮಾಡಿದರು. ವಕೀಲರು ಸಿದ್ದಪಡಿಸಿದ ಹೇಳಿಕೆಗೆ ಸಹಿ ಮಾಡಿದ ಮೇಲೆ ಅಧಿಕಾರಿ ಜವಾಬ್ದಾರರಾಗುತ್ತಾರೆ. ಇಂಥ ಆರೋಪ ಮಾಡಿದ್ದಕ್ಕೆ ಸೂಕ್ತ ಸ್ಪಷ್ಟನೆ ನೀಡದಿದ್ದರೆ ಅಧಿಕಾರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

ಉದಯ್ ಹೊಳ್ಳ ಅವರು ಮನವಿ ಮಾಡಿ, ಅಕ್ಷೇಪಣೆಗೆ ಸಂಬಂಧಿಸಿದಂತೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡುವಂತೆ ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠ, ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News