ಟ್ರಂಪ್ ಆಳ್ವಿಕೆಯ ವಿವಾದಿತ ಕ್ರಮಗಳಿಗೆ ಬೈಡನ್ ಗುಡ್‌ಬೈ

Update: 2021-01-21 17:17 GMT

ವಾಶಿಂಗ್ಟನ್,ಜ.21: ಅಮೆರಿಕದ ನೂತನ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಕೆಲವೇ ತಾಸುಗಳಲ್ಲಿ ಜೋ ಬೈಡನ್, ಕೆಲವು ಮುಸ್ಲಿಂ ಹಾಗೂ ಅಫ್ರಿಕ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವಾಸ ನಿಷೇಧ ರದ್ದತಿ, ಪ್ಯಾರಿಸ್ ಒಡಂಬಡಿಕೆಗೆ ಮರುಸೇರ್ಪಡೆ, ಮೆಕ್ಸಿಕೋ ಗಡಿಗೋಡೆ ನಿರ್ಮಾಣ ಸ್ಥಗಿತ, ವಲಸೆ ನಿಯಾಮವಳಿಗಳಲ್ಲಿ ಸುಧಾರಣೆ ಸೇರಿದಂತೆ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಬುಧವಾರ ಮಧ್ಯಾಹ್ನವಿಡೀ ಶ್ವೇತಭವನದ ಓವಲ್ ಹೌಸ್‌ನಲ್ಲಿ ಬಿಡುವಿಲ್ಲದೆ ಕಾರ್ಯನಿರತರಾಗಿದ್ದ ಬೈಡನ್ ಅವರು, ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರಾಧಿಯಲ್ಲಿ ಕೈಗೊಂಡಿದ್ದ ಈ ವಿವಾದಾತ್ಮಕ ಕ್ರಮಗಳನ್ನು ರದ್ದುಪಡಿಸಿ, ಆದೇಶ ಹೊರಡಿಸಿದ್ದಾರೆ.

ಅಮೆರಿಕ ಪೌರತ್ವ ಕಾಯ್ದೆಯಲ್ಲಿ ಸುಧಾರಣೆ, ಅನಧಿಕೃತ ವಲಸಿಗರು ನಿರಾಳ, ಗ್ರೀನ್‌ಕಾರ್ಡ್ ನಿಯಮಾವಳಿಗಳ ಸರಳೀಕರಣ

ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಅನಧಿಕೃತ ವಲಸಿಗರಿಗೆ ಶಾಸನಾತ್ಮಕ ಸ್ಥಾನಮಾನ ಹಾಗೂ ಪೌರತ್ವಕ್ಕೆ ಅವಕಾಶ ನೀಡುವಂತಹ ವಲಸಿಗರ ಕಾನೂನಿನಲ್ಲಿ ಪ್ರಮುಖ ತಿದ್ದುಪಡಿಯನ್ನು ಕೋರುವ ವಿಧೇಯಕವನ್ನು ಜೋ ಬೈಡನ್ ಅಮೆರಿಕ ಕಾಂಗ್ರೆಸ್‌ನ ಅಂಗೀಕಾರಕ್ಕಾಗಿ ಕಳುಹಿಸಿದ್ದಾರೆ. ಅಮೆರಿಕದಲ್ಲಿ ಪ್ರಸಕ್ತ 1.10 ಕೋಟಿಗೂ ಅಧಿಕ ಅನಧಿಕೃತ ವಲಸಿಗರು ವಾಸಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ.

ಈ ವಿಧೇಯಕದಿಂದಾಗಿ ಅಮೆರಿಕದ ಹೊರಗೆ ನೆಲೆಸಿರುವ ವಲಸಿಗ ಕುಟುಂಬಗಳು ಗ್ರೀನ್‌ಕಾರ್ಡ್‌ಗಾಗಿ ಕಾಯಬೇಕಾದ ಸಮಯವು ಕಡಿತಗೊಳ್ಳಲಿದೆ.

2021ರ ಅಮೆರಿಕ ಪೌರತ್ವ ಕಾಯ್ದೆ ಎಂದು ಕರೆಯಲಾಗುವ ಈ ವಿಧೇಯಕವು ವಲಸೆ ನೀತಿಯಲ್ಲಿ ಭಾರೀ ಸುಧಾರಣೆಯನ್ನು ತರಲಿದೆ. ಮಾತ್ರವಲ್ಲದೆ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳಿಗಾಗಿ ವಿವಿಧ ದೇಶಗಳ ಜನರಿಗೆ ನಿಗದಿಪಡಿಸಲಾದ ಮಿತಿಯನ್ನು ಕೂಡಾ ರದ್ದುಪಡಿಸಲಿದೆ. ಬೈಡನ್ ಸರಕಾರದ ಈ ನಿರ್ಧಾರದಿಂದಾಗಿ ಭಾರತದ ಸಾವಿರಾರು ಐಟಿ ವೃತ್ತಿಪರರಿಗಿ ಭಾರೀ ಪ್ರಯೋಜನವಾಗಲಿದೆ. ಪ್ರಸಕ್ತ ಅಮೆರಿಕದಲ್ಲಿ ಕಾನೂನುಬದ್ಧವಾಗಿ ಖಾಯಂ ವಾಸ್ತವ್ಯವನ್ನು ಪಡೆಯಲು ದಶಕಗಳ ಕಾಲ ಕಾಯಬೇಕಾದಂತಹ ಪರಿಸ್ಥಿತಿಯಿತ್ತು.

ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ಸೇರಿದಂತೆ ಉನ್ನತ ಪದವಿಗಳನ್ನು ಪಡೆದ ಪದವೀಧರರಿಗೆ ಅಮೆರಿಕದಲ್ಲಿ ಉಳಿದುಕೊಳ್ಳಲು ನೆರವಾಗಲಿದೆ. ನೂತನ ವಲಸೆ ಕಾನೂನಿಂದಾಗಿ ಕಡಿಮೆ ಆದಾಯದ ವಲಯಗಳ ಕಾರ್ಮಿಕರಿಗೂ ಹಸಿರು ಕಾರ್ಡ್‌ಗನ್ನು ಪಡೆಯಲು ಸಾಧ್ಯವಾಗಲಿದೆ.

ಪ್ಯಾರಿಸ್ ಒಡಂಬಡಿಕೆಗೆ ಅಮೆರಿಕ ಮರು ಸೇರ್ಪಡೆ

 ನೂತನ ಅಧ್ಯಕ್ಷ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುವ ಹೋರಾಟದಲ್ಲಿ ಅಮೆರಿಕವನ್ನು ಮರುಸೇರ್ಪಡೆಗೊಳಿಸುವ ಆದೇಶಕ್ಕೆ ಅಂಕಿತ ಹಾಕಿದ್ದಾರೆ.

 ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರಾವಧಿಯಲ್ಲಿ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿದ್ದರು. ತೈಲ, ನೈಸರ್ಗಿಕ ಅನಿಲ ಹಾಗೂ ಕಲ್ಲಿದ್ದಲಿನ ಬಳಕೆಯಿಂದ ಹೊರಹೊಮ್ಮುವ ಇಂಗಾಲಾಮ್ಲದ ಮಟ್ಟವನ್ನು ನಿಯಂತ್ರಿಸುವ ಕಾನೂನುಗಳನ್ನು ಟ್ರಂಪ್ ಆಡಳಿತಾವಧಿಯಲ್ಲಿ ಸಡಿಲಿಸಲಾಗಿತ್ತು.

  ಜಗತ್ತಿನಲ್ಲಿ ಇಂಗಾಲಾಮ್ಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಹಾಗೂ ಪೆಟ್ರೋಲ್‌ನಂತಹ ಪಳೆಯುಳಿಕೆ ಜನ್ಯ ಇಂಧನಳ ಬಳಕೆಯಿಂದ ಉಂಟಾಗುವ ವಾತಾವರಣ ಮಾಲಿನ್ಯದ ಮೇಲೆ ನಿಗಾವಿರಿಸುವ ಪ್ಯಾರಿಸ್ ಒಡಂಬಡಿಕೆಗೆ ಈವರೆಗೆ 195ಕ್ಕೂ ಅಧಿಕ ರಾಷ್ಟ್ರಗಳು ಸಹಿಹಾಕಿವೆ.

ಇಂಗಾಲಾಮ್ಲದ ಹೊರಸೂಸುವಿಕೆಯಲ್ಲಿ ಚೀನಾ ಜಗತ್ತಿನಲ್ಲೇ ಒಂದನೇ ಸ್ಥಾನದಲ್ಲಿದ್ದರೆ, ಅಮೆರಿಕವು ದ್ವಿತೀಯ ಸ್ಥಾನಿಯಾಗಿದೆ.

ಪ್ಯಾರಿಸ್ ಒಡಂಬಡಿಕೆಗೆ ಮರುಸೇರ್ಪಡೆಗೊಳ್ಳುವ ಜೋ ಬೈಡನ್ ಅವರ ನಿರ್ಧಾರವು ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಸದೃಢಗೊಳಿಸಲಿದೆಯೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಬುಧವಾರ ತಿಳಿಸಿದ್ದಾರೆ.

ಅಮೆರಿಕ-ಮೆಕ್ಸಿಕೋ ಗಡಿಗೋಡೆ ನಿರ್ಮಾಣ ಸ್ಥಗಿತ

ದಕ್ಷಿಣ ಅಮೆರಿಕದಿಂದ ಅಕ್ರಮ ವಲಸೆಯನ್ನು ತಡೆಯುವುದಕ್ಕಾಗಿ ಅಮೆರಿಕದ ಮೆಕ್ಸಿಕೊ ಗಡಿಯುದ್ದಕ್ಕೂ ಉಕ್ಕಿನ ಗೋಡೆಯ ನಿರ್ಮಾಣವನ್ನು ಸ್ಥಗಿತಗೊಳಿಸಿ ಅಧ್ಯಕ್ಷ ಜೋ ಬೈಡನ್ ಬುಧವಾರ ಆದೇಶ ಹೊರಡಿಸಿದ್ದಾರೆ. ಆ ಮೂಲಕ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿದ್ದಾರೆ.

ಮೆಕ್ಸಿಕೋ ಗಡಿಗೋಡೆ ನಿರ್ಮಾಣಕ್ಕಾಗಿ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೀಸಲಿರಿಸಿರುವ 10 ಶತಕೋಟಿ ಡಾಲರ್ ಹಣವನ್ನು ರಕ್ಷಣಾ ಇಲಾಖೆಗಳ ಖಾತೆಯಿಂದ ಹಿಂಪಡೆಯುವುದಕ್ಕೂ ತುರ್ತು ಆದೇಶಕ್ಕೆ ಬೈಡನ್ ಸಹಿಹಾಕಿದ್ದಾರೆ

ಅಮೆರಿಕ-ಮೆಕ್ಸಿಕೊ ಗಡಿಗೋಡೆ ನಿರ್ಮಾಣವು ಅಮೆರಿಕದ ಇತಿಹಾಸದಲ್ಲೇ, ಅತ್ಯಂತ ದುಬಾರಿ ವೆಚ್ಚದ ಸರಕಾರಿ ಮೂಲಸೌಕರ್ಯ ಯೋಜನೆಯೆಂದು ಪರಿಗಣಿಸಲಾಗಿದೆ.

 ಅಮೆರಿಕದ ತೆರಿಗೆ ಪಾವತಿದಾರರ ಹಣವನ್ನು ಗಡಿಗೋಡೆಯ ನಿರ್ಮಾಣಕ್ಕೆ ಬಳಕೆಯಾಗಬಾರದೆಂಬುದು ನನ್ನ ಆಡಳಿತದ ನೀತಿಯಾಗಿದೆ ಎಂದು ಬೈಡೆನ್ ಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.

ಅಮೆರಿಕವು ವಲಸಿಗರನ್ನು ಸ್ವಾಗತಿಸುವ ಸ್ಥಳವಾಗಿ ಮಾಡುವುದಾಗಿಯೂ ಬೈಡನ್ ಭರವಸೆ ನೀಡಿದ್ದಾರೆ. ಮೆಕ್ಸಿಕೋ ಗಡಿಗೋಡೆಯ ನಿರ್ಮಾಣಕ್ಕಾಗಿ ಮೀಸಲಿರಿಸಲಾದ ನಿಧಿಯನ್ನು 60 ದಿನಗಳೊಳಗೆ ಹಿಂದಕ್ಕೆ ಕಳುಹಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸುವಂತೆಯೂ ಬೈಡನ್ ಫೆಡರಲ್ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.

ಕೋವಿಡ್-19 ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ಅಮೆರಿಕದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಕೋವಿಡ್ ಮಹಾಮಾರಿಯ ನಿಯಂತ್ರಣಕ್ಕಾಗಿ ಸರಣಿ ತುರ್ತು ಕ್ರಮಗಳನ್ನು ಬೈಡನ್ ಅಧಿಕಾರಕ್ಕೇರಿದ ಮೊದಲ ದಿನವೇ ಘೋಷಿಸಿದ್ದಾರೆ. ಕೋವಿಡ್ ನಿಯಂತ್ರಣ ಕ್ರಮಗಳಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ತುರ್ತುಕ್ರಮಗಳಿಗೆ ಬೈಡನ್ ಅಂಗೀಕಾರ ನೀಡಿದ್ದಾರೆ.

 ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸುವುದು, ಕೋವಿಡ್ ವ್ಯಾಕ್ಸಿನ್ ವಿತರಣೆಯಲ್ಲಿ ಸಮನ್ವಯತೆಯನ್ನು ಸಾಧಿಸಲು ಕೋವಿಡ್ ವಿರೋಧಿ ಕಾರ್ಯಾಚರಣೆ ಪಡೆಯನ್ನು ರೂಪಿಸಲು ಅವರು ನಿರ್ಧರಿಸಿದ್ದಾರೆ. ಕೋವಿಡ್ ಹಾವಳಿಯ ಹಿನ್ನೆಲೆಯಲ್ಲಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಿದ್ಯಾಭ್ಯಾಸ ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಲು ಅವರು ಕ್ರಮಗಳನು ಕೈಗೊಂಡಿದ್ದಾರೆ.

ಜನಾಂಗೀಯ ಸಮಾನತೆ, ಲಿಂಗಭೇದ ನಿವಾರಣೆ

ಜನಾಂಗೀಯ ಸಮಾನತೆಗೆ ಉತ್ತೇಜನ, ಉದ್ಯೋಗ ಕ್ಷೇತ್ರಗಳಲ್ಲಿ ಲಿಂಗಭೇದ ನಿಲುವುಗಳನ್ನು ತೊಲಗಿಸುವುದು, ಅಧಿಕೃತ ದಾಖಲೆಗಳಿಲ್ಲದ ನಿರಾಶ್ರಿತರ ಸಂರಕ್ಷಣೆ, ಅಮೆರಿಕ ಕಾಂಗ್ರೆಸ್ (ಸಂಸತ್)ನ ಪ್ರತಿನಿಧಿಗಳ ಸಂಖ್ಯೆಯನ್ನು ಪರಿಷ್ಕರಣೆ, ಜನಗಣತಿಯಲ್ಲಿ ಪೌರತ್ವವಿಲ್ಲದವರನ್ನೂ ಒಳಪಡಿಸುವುದು ಸೇರಿದಂತೆ ವಿವಿಧ ಸುಧಾರಣಾ ಕ್ರಮಗಳಿಗೂ ಬೈಡನ್, ತನ್ನ ಅಧ್ಯಕ್ಷೀಯ ಅಧಿಕಾರದ ಮೊದಲ ದಿನದಂದು ಅಂಗೀಕಾರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News