ರೈತ ಆಂದೋಲನದ ನಾಲ್ವರು ನಾಯಕರನ್ನು ಕೊಲೆ ಮಾಡುವ ಷಡ್ಯಂತ್ರ ಬಯಲು

Update: 2021-01-23 18:29 GMT

ಚಂಡೀಗಢ: ನಾಲ್ವರು ರೈತ ಮುಖಂಡರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಎನ್ನಲಾದ ಯುವಕನೊಬ್ಬನನ್ನು ಸಿಂಘು ಗಡಿಯಲ್ಲಿ ರೈತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. 

ತಾವು ಹಿಡಿದ ಯುವಕನ ಮುಖ ಮುಚ್ಚಿ ಮಾಧ್ಯಮದ ಮುಂದೆ ಪ್ರಸ್ತುತಪಡಿಸಿದ ರೈತ ಮುಖಂಡರು ಆ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದರು.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮತ್ತು ಗಣರಾಜ್ಯೋತ್ಸವ ದಿನದಂದು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ಪರೇಡ್‌ನಲ್ಲಿ ಹಿಂಸೆ ಹುಟ್ಟುಹಾಕುವ ವ್ಯವಸ್ಥಿತ ಸಂಚಿನ ಭಾಗ ಎಂದು ಬಂಧಿತ ಯುವಕ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಯುವತಿಗೆ ಕೀಟಲೆ ಮಾಡುತ್ತಿದ್ದ ಆರೋಪವನ್ನು ನಿರಾಕರಿಸಿದಾಗ ರೈತರು ನನ್ನನ್ನು ಬಂಧಿಸಿದ್ದಾಗಿ ಯುವಕ ಹೇಳಿದ್ದಾನೆ.

ಮಾಧ್ಯಮದ ಜತೆ ಮಾತನಾಡಿದ ಯುವಕ, ರೈತರ ಪ್ರತಿಭಟನೆಯಲ್ಲಿ ಹಿಂಸೆ ಪ್ರಚೋದಿಸಲು ಇಬ್ಬರು ಯುವತಿಯರು ಸೇರಿದಂತೆ ಹತ್ತು ಮಂದಿಯ ತಂಡವನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾನೆ. ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ ತಮಗೆ ತರಬೇತಿ ನೀಡಿದ್ದಾಗಿ ಆತ ಹೇಳಿದ್ದಾನೆ. ಆದರೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಯಾವುದೇ ಪೊಲೀಸ್ ಅಧಿಕಾರಿಯನ್ನು ಯುವಕ ಗುರುತಿಸಿಲ್ಲ ಎಂದು ಮೂಲಗಳು ಹೇಳಿವೆ.

ಪ್ರತಿಭಟನೆ ವೇಳೆ ಗುಂಡು ಹಾರಿಸಲು 10 ಮಂದಿಯ ತಂಡಕ್ಕೆ ಸೂಚಿಸಲಾಗಿತ್ತು. ಪ್ರತಿಭಟನಾ ನಿರತ ರೈತರ ಪೈಕಿ ಒಬ್ಬರು ಗುಂಡು ಹಾರಿಸಿದ ಭಾವನೆ ಪೊಲೀಸರಲ್ಲಿ ಮೂಡಿಸುವುದು ಉದ್ದೇಶವಾಗಿತ್ತು ಎಂದು ಯುವಕ ಹೇಳಿಕೊಂಡಿದ್ದಾನೆ.

2016ರ ಜಾಟ್ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲೂ ತನ್ನ ಪಾತ್ರ ಇತ್ತು ಎಂದು ಯುವಕ ಒಪ್ಪಿಕೊಂಡಿದ್ದಾನೆ. ಕರ್ನಾಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಲಾಠಿ ಚಾರ್ಜ್‌ನಲ್ಲೂ ತಾನು ಪಾಲ್ಗೊಂಡಿದ್ದಾಗಿ ಆತ ಹೇಳಿದ್ದಾನೆ.

ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಭೇದಿಸುವ ದೊಡ್ಡ ಸಂಚು ನಡೆದಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.

"ಈ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಉದ್ದೇಶಿಸಲಾಗಿತ್ತು. ಜನವರಿ 26ರಂದು ಅವರು ಪೊಲೀಸರತ್ತ ಗುಂಡು ಹಾರಿಸಲು ಸೂಚಿಸಲಾಗಿತ್ತು. ಈ ಮೂಲಕ ಪ್ರತಿಭಟನಾಕಾರರೇ ಪೊಲೀಸರತ್ತ ಗುಂಡು ಹಾರಿಸಿದಂತೆ ಭಾವನೆ ಮೂಡಿಸುವುದು ಉದ್ದೇಶವಾಗಿತ್ತು. ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಸಲುವಾಗಿ ರಾಷ್ಟ್ರಧ್ವಜವನ್ನು ಕಿತ್ತುಹಾಕುವ ಉದ್ದೇಶವನ್ನೂ ಅವರು ಹೊಂದಿದ್ದರು" ಎಂದು ರೈತ ಮುಖಂಡರೊಬ್ಬರು ಆಪಾದಿಸಿದರು.

ಒಂದಲ್ಲ ಒಂದು ರೀತಿಯಲ್ಲಿ ನಾಲ್ವರು ರೈತ ಮುಖಂಡರನ್ನು ಗುರಿ ಮಾಡುವಂತೆ ಸೂಚಿಸಲಾದ ನಾಲ್ವರು ರೈತ ಮುಖಂಡರ ಚಿತ್ರಗಳನ್ನೂ ಯುವಕ ಗುರುತಿಸಿದ್ದಾನೆ. ಜನವರಿ 23ರ ಬಳಿಕ ಯಾವುದೇ ಕ್ಷಣದಲ್ಲಿ ಈ ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದ ಎಂದು ಅವರು ವಿವರಿಸಿದರು.

ಬಂಧಿತ ಯುವಕನ ವಿಚಾರಣೆ ಮುಗಿಯುವವರೆಗೆ ಏನನ್ನೂ ಹೇಳಲಾಗದು: ಖಟ್ಟರ್

ಜ.23: ರೈತ ಮುಖಂಡರ ಹತ್ಯೆಗೆ ಷಡ್ಯಂತ್ರ ರೂಪಿಸಿದ ಆರೋಪದಲ್ಲಿ ಬಂಧಿತನಾಗಿರುವ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ತನಿಖೆ ಮುಗಿಯುವವರೆಗೆ ಏನನ್ನೂ ಹೇಳಲಾಗದು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಶನಿವಾರ ಹೇಳಿದ್ದಾರೆ. ಪೊಲೀಸರ ತನಿಖೆ ಪ್ರಗತಿಯಲ್ಲಿದೆ. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಂದಿನಂತೆ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಖಟ್ಟರ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News