ಗಣರಾಜ್ಯೋತ್ಸವ ಪೆರೇಡ್ ಟ್ಯಾಬ್ಲೋದಲ್ಲಿ ರಾಮ ಮಂದಿರ ಪ್ರತಿಕೃತಿ

Update: 2021-01-23 06:52 GMT

ಹೊಸದಿಲ್ಲಿ,ಜ.23: ಈ ವರ್ಷದ ಗಣರಾಜ್ಯೋತ್ಸವ ದಿನದ ಪೆರೇಡ್ ಭಾಗವಾಗಿ ಉತ್ತರ ಪ್ರದೇಶವು ಅಯ್ಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮ ಮಂದಿರದ ಪ್ರತಿಕೃತಿಯನ್ನೂ ಹೊಂದಿರಲಿದೆ. ಇದರ ಹೊರತಾಗಿ ಪ್ರಾಚೀನ ಅಯ್ಯೋಧ್ಯೆಯ ಪರಂಪರೆಯನ್ನು ಬಿಂಬಿಸುವ, ದೀಪೋತ್ಸವದ ಚಿತ್ರಣ ಹಾಗೂ ರಾಮಾಯಣದ ವಿವಿಧ ಕಥಾನಕಗಳನ್ನು ಬಿಂಬಿಸುವ ಕಲಾಕೃತಿಗಳು ಈ ಟ್ಯಾಬ್ಲೋ ಭಾಗವಾಗಲಿದೆ.

ಈ ಆಕರ್ಷಕ ಟ್ಯಾಬ್ಲೋದಲ್ಲಿ ಕುಳಿತಿರುವ ಭಂಗಿಯಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಕೃತಿ ಎದುರಿನ ಭಾಗದಲ್ಲಿದ್ದರೆ, ಟ್ಯಾಬ್ಲೋದ ಹಿಂದಿನ ಭಾಗದಲ್ಲಿ ರಾಮ ಮಂದಿರದ ಪ್ರತಿಕೃತಿಯಿದೆ.

ಇಬ್ಬರು ಮಹಿಳಾ ನೃತ್ಯಗಾತಿಯರನ್ನೊಳಗೊಂಡ ಕಲಾವಿದರ ತಂಡವೊಂದು ಈ ಟ್ಯಾಬ್ಲೋದ ಜತೆಗೆ ಸಾಗಲಿದ್ದು ಅವರಲ್ಲೊಬ್ಬ ಶ್ರೀ ರಾಮನ ವೇಷ ಧರಿಸಿರುತ್ತಾನೆ ಎಂದು ವರದಿ ತಿಳಿಸಿದೆ.

ಮಣ್ಣಿನ ಹಣತೆಗಳನ್ನು ಬೆಳಗಿಸಿ ಅಯ್ಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಚಿತ್ರಣವನ್ನು ಟ್ಯಾಬ್ಲೋದ ಒಂದು ಬದಿಯಲ್ಲಿ ನೀಡಲಾಗಿದ್ದರೆ, ಶ್ರೀ ರಾಮ ನಿಷದರಾಜನನ್ನು ಆಲಂಗಿಸುವ, ಶಬರಿ ನೀಡಿದ ಬುಗರಿ ಹಣ್ಣು ತಿನ್ನುವ, ಅಹಿಲ್ಯಾಳ ಮೋಕ್ಷ, ಹನುಮಂತ ಸಂಜೀವಿನಿಯನ್ನು ತರುವ ಚಿತ್ರಣ, ಜಟಾಯು-ರಾಮ ಸಂವಾದ, ಅಶೋಕ ವಾಟಿಕಾ ಮತ್ತಿತರ ದೃಶ್ಯಗಳನ್ನು ಬಿಂಬಿಸುವ  ಕಲಾಕೃತಿಗಳು ಈ ಟ್ಯಾಬ್ಲೋದಲ್ಲಿವೆ.

ಗಣತಂತ್ರ ದಿನದ ಪೆರೇಡ್‍ನಲ್ಲಿ ಭಾಗವಹಿಸಲಿರುವ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳ ಪ್ರದರ್ಶನ ದಿಲ್ಲಿ ಕ್ಯಾಂಟೋನ್ಮೆಂಟ್‍ನಲ್ಲಿ ಶುಕ್ರವಾರ ಸಾಂಸ್ಕೃತಿಕ ಶಿಬಿರದ ಅಂಗವಾಗಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News