ರಶ್ಯ: ಪ್ರತಿಪಕ್ಷ ನಾಯಕನ ಬಿಡುಗಡೆಗೆ ಆಗ್ರಹಿಸಿ ಬೃಹತ್ ಧರಣಿ

Update: 2021-01-23 18:02 GMT

ಮಾಸ್ಕೋ (ರಶ್ಯ), ಜ. 23: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅವರ ಸಾವಿರಾರು ಬೆಂಬಲಿಗರು ದೇಶಾದ್ಯಂತ ಶನಿವಾರ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಪೊಲೀಸರು 1,000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದರು ಹಾಗೂ ಪ್ರತಿಭಟನಕಾರರನ್ನು ಚದುರಿಸಲು ಬಲಪ್ರಯೋಗಿಸಿದರು.

ರವಿವಾರ ಜರ್ಮನಿಯಿಂದ ರಶ್ಯಕ್ಕೆ ವಾಪಸಾದ ನವಾಲ್ನಿಯನ್ನು ಮಾಸ್ಕೋ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿತ್ತು. ಬಳಿಕ, ಅಮಾನತಿಲ್ಲಿಡಲಾದ ಶಿಕ್ಷೆಗೆ ಸಂಬಂಧಿಸಿ ಜೈಲಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರನ್ನು ನ್ಯಾಯಾಲಯವೊಂದು ಒಂದು ತಿಂಗಳ ಅವಧಿಗೆ ಜೈಲಿಗೆ ಕಳುಹಿಸಿದೆ.

ಆಗಸ್ಟ್ ತಿಂಗಳಲ್ಲಿ ವಿಷಪ್ರಾಶನಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ನವಾಲ್ನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬರ್ಲಿನ್‌ಗೆ ಕರೆದೊಯ್ಯಲಾಗಿತ್ತು. ರಶ್ಯದ ಭದ್ರತಾ ಏಜಂಟ್‌ಗಳು ನವಾಲ್ನಿಯ ಒಳ ಉಡುಪಿನಲ್ಲಿ ಸೇನೆಯಲ್ಲಿ ಬಳಸಲಾಗುವ ಮಾರಕ ರಾಸಾಯನಿಕವನ್ನು ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಮಧ್ಯ ಮಾಸ್ಕೋದಲ್ಲಿ 40,000ಕ್ಕೂ ಅಧಿಕ ಮಂದಿ ಧರಣಿ ನಡೆಸಿದರು. ಇದು ಇತ್ತೀಚಿನ ವರ್ಷಗಳಲ್ಲೇ ಅತಿ ದೊಡ್ಡ ಧರಣಿಯಾಗಿದೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನವಾಲ್ನಿ ಪತ್ನಿಯ ಬಂಧನ

ನನ್ನ ಗಂಡ ಕರೆ ನೀಡಿದ ಸರಕಾರ ವಿರೋಧಿ ಪ್ರದರ್ಶನದಲ್ಲಿ ಭಾಗವಹಿಸಿದ ನನ್ನನ್ನು ಬಂಧಿಸಲಾಗಿದೆ ಎಂದು ಅಲೆಕ್ಸಿ ನವಾಲ್ನಿಯ ಪತ್ನಿ ಯೂಲಿಯಾ ನವಾಲ್ನಿಯು ಶನಿವಾರ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News