ಸಣ್ಣ ರೈತರಿಗೆ ಹೆಚ್ಚಿನ ಹವಾಮಾನ ಪರಿಹಾರ ನಿಧಿ ಅಗತ್ಯ: ವಿಶ್ವಸಂಸ್ಥೆ

Update: 2021-01-23 18:30 GMT

ಪ್ಯಾರಿಸ್ (ಫ್ರಾನ್ಸ್), ಜ. 23: ಹಸಿವೆ ಮತ್ತು ಅಸ್ಥಿರತೆಯನ್ನು ನಿವಾರಿಸುವುದಕ್ಕಾಗಿ ಜಗತ್ತಿನಾದ್ಯಂತ ಇರುವ ಸಣ್ಣ ರೈತರಿಗೆ ನೀಡಲಾಗುವ ಹವಾಮಾನ ಬದಲಾವಣೆ ನಿಧಿಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ವಿಶ್ವಸಂಸ್ಥೆ ಶನಿವಾರ ಹೇಳಿದೆ.

‘‘ಹವಾಮಾನ ಬದಲಾವಣೆಯಲ್ಲಿ ಸಣ್ಣ ರೈತರ ಪಾತ್ರ ಏನೂ ಇಲ್ಲ. ಆದರೆ ಅದರ ಪರಿಣಾಮಗಳ ಹೆಚ್ಚಿನದನ್ನು ಅನುಭವಿಸುವುದು ಅವರೇ’’ ಎಂದು ಅಂತರ್‌ರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (ಐಎಫ್‌ಎಡಿ)ಯ ಅಧ್ಯಕ್ಷ ಗಿಲ್ಬರ್ಟ್ ಎಫ್. ಹೌಂಗ್‌ಬೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ನಿಧಿಯು ಗಣನೀಯ ಪ್ರಮಾಣದಲ್ಲಿ ಹೆಚ್ಚದಿದ್ದರೆ, ಹಸಿವು ಮತ್ತು ಜಾಗತಿಕ ಅಸ್ಥಿರತೆ ಭಾರೀ ಪ್ರಮಾಣದಲ್ಲಿ ಹೆಚ್ಚುವುದು’’ ಎಂದು ಅವರು ಹೇಳಿದ್ದಾರೆ.

  ನೆದರ್‌ಲ್ಯಾಂಡ್ಸ್‌ನಲ್ಲಿ ಜನವರಿ 25 ಮತ್ತು 26ರಂದು ನಡೆಯಲಿರುವ ‘ಹವಾಮಾನ ಹೊಂದಾಣಿಕೆ ಶೃಂಗಸಮ್ಮೇಳನ’ಕ್ಕೆ ಪೂರ್ವಭಾವಿಯಾಗಿ ವಿಶ್ವಸಂಸ್ಥೆಯ ಘಟಕ ಸಂಸ್ಥೆ ಈ ಎಚ್ಚರಿಕೆ ನೀಡಿದೆ.

 ಆಹಾರ ಭದ್ರತೆಗೆ ಹವಾಮಾನ ಬದಲಾವಣೆ ಒಡ್ಡಿರುವ ಬೆದರಿಕೆಯನ್ನು ಕಡಿಮೆ ಮಾಡಲು, ವಾತಾವರಣದ ಉಷ್ಣತೆ ಹೆಚ್ಚಿಸುವ ಅನಿಲಗಳ ಮಟ್ಟವನ್ನು ತಗ್ಗಿಸಲು ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಒಂದು ಕೋಟಿಗೂ ಹೆಚ್ಚಿನ ಜನರಿಗೆ ನೆರವು ನೀಡಲು ‘ಎಎಸ್‌ಎಪಿ+’ ಎಂಬ ಹೆಸರಿನ 500 ಮಿಲಿಯ ಡಾಲರ್ (ಸುಮಾರು 3,650 ಕೋಟಿ ರೂಪಾಯಿ) ನಿಧಿಯೊಂದನ್ನು ಈ ಸಮ್ಮೇಳನದಲ್ಲಿ ಸ್ಥಾಪಿಸುವ ಉದ್ದೇಶವನ್ನು ಐಎಫ್‌ಎಡಿ ಹೊಂದಿದೆ.

ಈ ನಿಧಿಗೆ ದೇಣಿಗೆ ನೀಡುವುದಾಗಿ ಆಸ್ಟ್ರಿಯ, ಜರ್ಮನಿ, ಐರ್‌ಲ್ಯಾಂಡ್ ಮತ್ತು ಖತರ್ ಈಗಾಗಲೇ ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News