ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯ ಸೆನಟ್‌ಗೆ ಹಸ್ತಾಂತರ

Update: 2021-01-26 18:12 GMT

ವಾಶಿಂಗ್ಟನ್, ಜ. 26: ಅಮೆರಿಕದ ಸಂಸತ್ ಭವನದ ಮೇಲೆ ದಾಳಿ ನಡೆಸಲು ತನ್ನ ಬೆಂಬಲಿಗರನ್ನು ಛೂಬಿಟ್ಟಿರುವುದಕ್ಕಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವಾಗ್ದಂಡನೆಗೆ ಗುರಿಪಡಿಸುವ ನಿರ್ಣಯವನ್ನು ಅಮೆರಿಕ ಸಂಸತ್‌ನ ಘಟಕವಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಇನ್ನೊಂದು ಘಟಕವಾಗಿರುವ ಸೆನೆಟ್‌ಗೆ ಸೋಮವಾರ ಹಸ್ತಾಂತರಿಸಿದೆ.

ಇದರೊಂದಿಗೆ, ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಜಿ ಅಧ್ಯಕ್ಷರೋರ್ವರ ವಾಗ್ದಂಡನೆಗೆ ಕ್ಷಣಗಣನೆ ಆರಂಭವಾಗಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಒಂಬತ್ತು ಸದಸ್ಯರು, ಜನವರಿ 6ರಂದು ಟ್ರಂಪ್ ಬೆಂಬಲಿಗರು ದಾಂಧಲೆಗೈದ ಅದೇ ಸಭಾಂಗಣಗಳ ಮೂಲಕ ವೌನವಾಗಿ ನಡೆದುಕೊಂಡು ಹೋಗಿ ಸೆನೆಟ್‌ಗೆ ಹಸ್ತಾಂತರಿಸಿದರು.

ಡೆಮಾಕ್ರಟಿಕ್ ಪಕ್ಷದ ಪ್ರಾಬಲ್ಯವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಜನವರಿ 13ರಂದು ಟ್ರಂಪ್ ವಿರುದ್ಧ ಎರಡನೇ ಬಾರಿಗೆ ವಾಗ್ದಂಡನೆ ವಿಧಿಸಲಾಗಿತ್ತು. ಅಮೆರಿಕದ ಅಧ್ಯಕ್ಷರೊಬ್ಬರು ಎರಡು ಬಾರಿ ವಾಗ್ದಂಡನೆಗೆ ಒಳಗಾಗಿರುವುದು ಅಮೆರಿಕದ ಇತಿಹಾಸದಲ್ಲೇ ಮೊದಲು.

ಸೆನೆಟ್ ವಾಗ್ದಂಡನೆ ಪ್ರಕ್ರಿಯೆಯನ್ನು ಫೆಬ್ರವರಿ 8ರಿಂದ ಕೈಗೆತ್ತಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News