ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ: ಸಿಬಿಐ ಮರು ತನಿಖೆಗೆ ಹೈಕೋರ್ಟ್ ನಕಾರ

Update: 2021-01-28 09:28 GMT

ಬೆಂಗಳೂರು, ಜ.28: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಎಸ್‌ಡಿಎಂ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಮೃತ ವಿದ್ಯಾರ್ಥಿನಿ ತಂದೆ ಚಂದಪ್ಪಗೌಡ ಪ್ರಕರಣದ ಮರು ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಆರೋಪಿ ಸಂತೋಷ್ ರಾವ್ ವಿರುದ್ಧ ಈಗಾಗಲೇ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಬಳಿಕ ಸಿಬಿಐ ತನಿಖೆ ನಡೆಸಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಸಂತೋಷ್ ರಾವ್ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಈ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಸಿಬಿಐ ನಡೆಸಿರುವ ತನಿಖೆ ಸಮರ್ಪಕ ಮತ್ತು ನ್ಯಾಯಬದ್ಧವಾಗಿದೆ. ಧೀರಜ್ ಜೈನ್, ಉದಯ್ ಜೈನ್ ಹಾಗೂ ಮಲ್ಲಿಕ್ ಜೈನ್ ಎಂಬವರ ವಿರುದ್ಧ ಸಂಶಯ ವ್ಯಕ್ತಪಡಿಸಿ, ಅರ್ಜಿದಾರರು ಮರು ತನಿಖೆಗೆ ಕೋರಿದ್ದಾರೆ. ಆದರೆ, ಸಂಶಯ ಋಜುವಾತುಪಡಿಸುವ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ. ಅಲ್ಲದೆ, ಒಮ್ಮೆ ಸಿಬಿಐ ತನಿಖೆ ನಡೆಸಿರುವ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ರಕರಣವನ್ನು ಮರು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅದೇ ರೀತಿ ಪ್ರಕರಣದಲ್ಲಿ ತಮ್ಮನ್ನು ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸಿ ಸಮನ್ಸ್ ಜಾರಿಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಧೀರಜ್ ಜೈನ್, ಉದಯ್ ಜೈನ್ ಹಾಗೂ ಮಲ್ಲಿಕ್ ಜೈನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ.

ನೇರವಾಗಿ ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸಿರುವುದು ಸರಿಯಲ್ಲ. ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸುವ ಮೊದಲು ಅವರ ವಾದ ಆಲಿಸಿದ ಬಳಿಕ ತೀರ್ಮಾನಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿರುವ ಹೈಕೋರ್ಟ್, ಮೂವರು ಹೆಚ್ಚುವರಿ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ರದ್ದುಪಡಿಸಿತು.

ಏನಿದು ಪ್ರಕರಣ

ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾ, 2012ರ ಅ.9 ರಂದು ಕಾಣೆಯಾಗಿದ್ದಳು. ಆ ಕುರಿತು ಆಕೆಯ ತಂದೆ ಚಂದ್ರಪ್ಪಗೌಡ ಅದೇ ದಿನ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಅ.10 ರಂದು ಸೌಜನ್ಯಾ ಶವ ಪತ್ತೆಯಾಗಿತ್ತು. ಇದೇ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ಸದಸ್ಯರ ಹೆಸರು ಕೇಳಿ ಬಂದಿತ್ತು. ಅದರ ಪರಿಣಾಮ ಸರಕಾರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News