ಎಐಎಡಿಎಂಕೆ ನಾಯಕಿ ಶಶಿಕಲಾ ಆಸ್ಪತ್ರೆಯಿಂದ ಬಿಡುಗಡೆ

Update: 2021-01-31 14:07 GMT

ಬೆಂಗಳೂರು, ಜ.31: ಕೊರೋನ ಸೋಂಕಿಗೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ.ಶಶಿಕಲಾ ನಟರಾಜನ್, ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಿಂದ ರವಿವಾರ ಬಿಡುಗಡೆ ಆಗಿದ್ದಾರೆ.

ಅವರ ಕೋವಿಡ್ ವರದಿ ನೆಗಟಿವ್ ಬಂದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ರವಿವಾರ ಬೆಳಗ್ಗೆ ಅವರನ್ನು ಆಸ್ಪತ್ರೆಯಿಂದ ಕಳುಹಿಸಿಕೊಟ್ಟು, ಕೊರೋನ ಮಾರ್ಗಸೂಚಿ ಅನ್ವಯ 10 ದಿನಗಳ ಕಾಲ ಗೃಹ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಿದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ ಅವರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆದರೆ, ಇತ್ತೀಚೆಗಷ್ಟೇ ಅವರಿಗೆ ಕೊರೋನ ಸೋಂಕು ತಗುಲಿತ್ತು. ಹೀಗಾಗಿ, ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಿಕ್ಷೆ ಅವಧಿ ಮುಗಿದಿದ್ದರಿಂದ ಇತ್ತೀಚೆಗಷ್ಟೇ ಶಶಿಕಲಾ ಜೈಲಿನಿಂದ ಜ. 27ರಂದು ಬಿಡುಗಡೆ ಆಗಿದ್ದರು. ಆದರೆ, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿತ್ತು. ಇದೀಗ ಚೇತರಿಸಿಕೊಂಡಿದ್ದ ಶಶಿಕಲಾ ಬಿಡುಗಡೆಗೆ ವೈದ್ಯರು ಅನುಮತಿ ನೀಡಿದ್ದರು. ಅದರಂತೆ ರವಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಆಸ್ಪತ್ರೆಗೆ ಬಂದಿದ್ದ ಕುಟುಂಬದವರು ಹಾಗೂ ಸಂಬಂಧಿಕರು, ತಮ್ಮ ಕಾರಿನಲ್ಲೇ ಶಶಿಕಲಾ ಕರೆದೊಯ್ದರು. 10 ಜನ ಖಾಸಗಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಅವರ ಭದ್ರತೆಯಲ್ಲೇ ಶಶಿಕಲಾ, ಆಸ್ಪತ್ರೆಯಿಂದ ಹೋದರು. ಆಸ್ಪತ್ರೆ ಸುತ್ತಲೂ 300ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿ, ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News