ಮ್ಯಾನ್ಮಾರ್ ಕ್ಷಿಪ್ರಕ್ರಾಂತಿ : ಇಂದು ಭದ್ರತಾ ಮಂಡಳಿ ತುರ್ತು ಸಭೆ

Update: 2021-02-02 04:27 GMT
ಸೂ ಕಿ

ನ್ಯೂಯಾರ್ಕ್ : ಮ್ಯಾನ್ಮಾರ್ ಸೇನೆ ದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಬಿಕಟ್ಟಿನ ಬಗ್ಗೆ ಚರ್ಚಿಸಲು ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಲಾಗಿದೆ.

ಮ್ಯಾನ್ಮಾರ್ ಬೆಳವಣಿಗೆ, ಆಗ್ನೇಯ ಏಷ್ಯಾ ದೇಶದ ಪ್ರಜಾಸತ್ತಾತ್ಮಕ ಸುಧಾರಣೆಗಳಿಗೆ ಇದು ದೊಡ್ಡ ಹೊಡೆತ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟ್ರೆಸ್ ಅಭಿಪ್ರಾಯಪಟ್ಟಿದ್ದಾರೆ.

ಈ ತಿಂಗಳು ಮಂಡಳಿಯ ಅಧ್ಯಕ್ಷರಾಗಿರುವ ಬ್ರಿಟನ್‌ನ ವಿಶ್ವಸಂಸ್ಥೆ ರಾಯಭಾರಿ ಬರ್ಬರಾ ವುಡ್‌ವರ್ಡ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ನವೆಂಬರ್ 8ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಎತ್ತಿ ಹಿಡಿಯಲು ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸೂ ಕಿ ಹಾಗೂ ಸೇನೆ ಬಂಧಿಸಿರುವ ಇತರ ನಾಯಕರ ಸುರಕ್ಷಿತ ಬಿಡುಗಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಹೇಳಿಕೆ ನೀಡಿದ್ದಾರೆ. ಆಂಗ್ ಸಾನ್ ಸೂ ಕಿ ನೇತೃತ್ವದ ಪಕ್ಷ ಮ್ಯಾನ್ಮಾರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಸಾಧಿಸಿತ್ತು.

"ತಕ್ಷಣಕ್ಕೆ ಯಾವುದೇ ನಿರ್ದಿಷ್ಟ ಪರಿಹಾರ ಕ್ರಮಗಳು ನಮ್ಮ ಮುಂದಿಲ್ಲ" ಎಂದು ಪರೋಕ್ಷವಾಗಿ ದಿಗ್ಬಂಧನ ವಿಧಿಸುವ ಸುಳಿವು ನೀಡಿದರು.
ಮ್ಯಾನ್ಮಾರ್ ರಾಜಧಾನಿಯ ಅಧಿಕಾರಿಗಳನ್ನು ಸಂಪರ್ಕಿಸಲು ಮತ್ತು ಬಂಧಿತ ನಾಯಕರ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀನ್ ಡ್ಯುಜಾರಿಕ್ ಹೇಳಿಕೆ ನೀಡಿದ್ದಾರೆ.

ಅಂದಾಜು 6 ಲಕ್ಷ ರೊಹಿಂಗ್ಯಾಗಳು ಉತ್ತರ ರಖೀನ್ ರಾಜ್ಯದಲ್ಲಿದ್ದು, 1.20 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲಿ ಇದ್ದು, ಸೇನಾ ಕಾರ್ಯಾ ಚರಣೆಯು ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗಬಹುದು ಎಂದು ಡ್ಯುಜಾರಿಕ್ ಭೀತಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News