ಸಯ್ಯದ್ ಮುಷ್ತಾಕ್ ಅಲಿ ತಮಿಳುನಾಡು ಚಾಂಪಿಯನ್

Update: 2021-02-02 14:22 GMT

ಅಹಮದಾಬಾದ್, ಫೆ.1: ತಮಿಳುನಾಡು ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬರೋಡವನ್ನು 7 ವಿಕೆಟ್‌ಗಳ ಅಂತರದಲ್ಲಿ ಮಣಿಸಿ ಎರಡನೇ ಬಾರಿಗೆ ಚಾಂಪಿಯನ್‌ಪಟ್ಟವನ್ನಲಂಕರಿಸಿದೆ.

 ಈ ಮೊದಲು ತಮಿಳುನಾಡು 2006-07ರಲ್ಲಿ ಮೊದಲ ಬಾರಿ ಮುಷ್ತಾಕ್ ಅಲಿ ಟ್ರೋಫಿ ಚಾಂಪಿಯನ್ ಆಗಿತ್ತು. 2011-12 ಮತ್ತು 2013-14ರ ಚಾಂಪಿಯನ್ ಬರೋಡ ಈ ಬಾರಿ ರನ್ನರ್ಸ್‌ ಆಪ್ ಆಗಿ ಅಭಿಯಾನವನ್ನು ಕೊನೆಗೊಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬರೋಡ ತಂಡ ಎರಡಗೈ ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್(20ಕ್ಕೆ 4) ದಾಳಿಗೆ ಸಿಲುಕಿ 9 ವಿಕೆಟ್ ನಷ್ಟದಲ್ಲಿ 120 ರನ್ ಗಳಿಸಿತ್ತು.

ವಿಷ್ಣು ಸೋಲಂಕಿ(49), ಅತಿಥ್ ಶೇಟ್ (29) ನೆರವಿನಲ್ಲಿ ಬರೋಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.

ಗೆಲುವಿಗೆ 121 ರನ್‌ಗಳ ಸವಾಲನ್ನು ಪಡೆದ ತಮಿಳುನಾಡು ತಂಡ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 123 ರನ್ ಗಳಿಸಿ ಗೆಲುವಿನ ದಡ ಸೇರಿತು. ಮಣಿಮಾರನ್ ಸಿದ್ಧಾರ್ಥ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

   ಆರಂಭಿಕ ಬ್ಯಾಟ್ಸ್‌ಮನ್ ಸಿ.ಹರಿನಿಶಾಂತ್(35) ಮತ್ತು ಬಾಬಾ ಅಪರಾಜಿತ್(ಔಟಾಗದೆ 29) ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಹರಿನಿಶಾಂತ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ನಾರಾಯಣ್‌ಜಗದೀಶನ್(14) ಬೇಗನೆ ಔಟಾದರು. ಲುಕ್ಮಾನ್ ಮೆರಿವಾಲ್ (34ಕ್ಕೆ 1) ಬರೋಡ ಪರ ಮೊದಲ ಯಶಸ್ಸು ಗಳಿಸಿದರು.

ಎರಡನೇ ವಿಕೆಟ್‌ಗೆ ನಿಶಾಂತ್ ಮತ್ತು ಬಾಬಾ ಅಪರಾಜಿತ್ ಎರಡನೇ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದರು. 12ನೇ ಓವರ್‌ನಲ್ಲಿ ಮಧ್ಯಮ ವೇಗಿ ಬಾಬಾಶಫಿ ಪಠಾಣ್ ಅವರು ನಿಶಾಂತ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. 67ಕ್ಕೆ 2ನೇ ವಿಕೆಟ್ ಕಳೆದುಕೊಂಡ ತಮಿಳುನಾಡು ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ 16 ಎಸೆತಗಳಲ್ಲಿ 22 ರನ್ ಸೇರಿಸಿದರು. 16.1 ಓವರ್‌ಗಳಲ್ಲಿ 101 ರನ್‌ಗಳಿಗೆ ತಮಿಳುನಾಡು 3ನೇ ವಿಕೆಟ್ ಕಳೆದುಕೊಂಡಿತು.

  ಮುಂದೆ 23 ಎಸೆತಗಳಲ್ಲಿ 20 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ ತಮಿಳುನಾಡು ಪರ ಅಪರಾಜಿತ್ ಮತ್ತು ಶಾರುಖ್ ಖಾನ್(7 ಎಸೆತಗಳಲ್ಲಿ 18ರನ್) ಜೊತೆಯಾಗಿ 11 ಎಸೆತಗಳಲ್ಲಿ 22 ರನ್ ಸೇರಿಸಿ ತಮಿಳುನಾಡು ತಂಡವನ್ನು ಗೆಲುವಿನ ದಡ ಸೇರಿಸಿದರು.

 ಸಂಕ್ಷಿಪ್ತ ಸ್ಕೋರ್

ಬರೋಡ 20 ಓವರ್‌ಗಳಲ್ಲಿ 120/9( ವಿಷ್ಣು ಸೋಲಂಕಿ 49, ಅತಿಥ್ ಶೇಟ್ 29; ಎಂ.ಸಿದ್ಧಾರ್ಥ್ 20ಕ್ಕೆ 4).

ತಮಿಳುನಾಡು 18 ಓವರ್‌ಗಳಲ್ಲಿ 123/3(ಸಿ. ಹರಿ ನಿಶಾಂತ್ 35, ಬಾಬಾ ಅಪರಾಜಿತ್ ಔಟಾಗದೆ 29).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News