ಮೂರನೇ ಟೆಸ್ಟ್: ಪ್ರೇಕ್ಷಕರಿಗೆ ಅವಕಾಶ

Update: 2021-02-02 14:22 GMT

 ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್‌ಗೆ ಶೇ 50ರಷ್ಟು ಆಸನ ಲಭ್ಯ ಅಹಮದಾಬಾದ್, ಫೆ.1: ಇಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಟೇಡಿಯಂನಲ್ಲಿ ಫೆ.24ರಿಂದ 28ರ ತನಕ ನಡೆಯಲಿರುವ ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ನ ಪ್ರತ್ಯಕ್ಷ ವೀಕ್ಷಣೆಗೆ ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ಅವಕಾಶ ನೀಡಲಾಗುವುದು.

ಕೋವಿಡ್-19 ಕಾರಣದಿಂದಾಗಿ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅನುಮತಿ ನಿರಾಕರಿಸಿದ ಬಳಿಕ ಇದೀಗ ಮೊದಲ ಬಾರಿಗೆ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ತೆರಳಲು ಅವಕಾಶ ದೊರೆಯಲಿದೆ. ಮೂರನೇ ಟೆಸ್ಟ್ 1,10,000 ಪ್ರೇಕ್ಷಕರಿಗೆ ಆಸನಗಳ ಸಾಮರ್ಥ್ಯವಿರುವ ಮೊಟೆರಾದ ಹೊಸ ಕ್ರೀಡಾಂಣದಲ್ಲಿ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ಮಂದಿ ಗಣ್ಯರು ಟೆಸ್ಟ್ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ.

  ಪತ್ರಕರ್ತರಿಗೂ ಎರಡು ಟೆಸ್ಟ್ ಪಂದ್ಯಗಳ ವರದಿ ಮಾಡಲು ಕ್ರೀಡಾಂಗಣದ ಪ್ರೆಸ್ ಬಾಕ್ಸ್‌ಗೆ ತೆರಳಲು ಅವಕಾಶ ಇದೆ. ಆದರೆ ಪತ್ರಿಕಾಗೋಷ್ಠಿಗಳು ವರ್ಚುವಲ್ ಆಗಿಯೇ ನಡೆಯಲಿವೆ.

  *ಎರಡನೇ ಟೆಸ್ಟ್‌ಗೆ ಶೇ 50 ಪ್ರೇಕ್ಷಕರಿಗೆ ಅವಕಾಶ: ಚೆನ್ನೈನ ಎಂ.ಎ.ಚಿದಂಬರಮ್ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಫೆ.13ರಂದು ಆರಂಭವಾಗುವ ಎರಡನೇ ಟೆಸ್ಟ್‌ನ ನೇರ ವೀಕ್ಷಣೆಗೆ ಕ್ರೀಡಾಂಗಣ ಸಾಮರ್ಥ್ಯದ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿ) ಸೋಮವಾರ ನಿರ್ಧಾರ ಕೈಗೊಂಡಿದೆ.

ಈ ಹಿಂದೆ ಮೊದಲ ಎರಡು ಟೆಸ್ಟ್‌ಗಳನ್ನು ಪ್ರೇಕ್ಷರಿಲ್ಲದೆ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ಈ ನಿರ್ಧಾರದಲ್ಲಿ ಸ್ವಲ್ಪ ಬದಲವಣೆ ಮಾಡಲಾಗಿದೆ. ಚೆನ್ನೈನ ಎಂ.ಎ. ಚಿದಂಬರಮ್ ಸ್ಟೇಡಿಯಂನಲ್ಲಿ 50,000 ಆಸನಗಳ ಸಾಮರ್ಥ್ಯವಿದೆ. ಇದರಿಂದಾಗಿ 25 ಸಾವಿರ ಮಂದಿ ಪ್ರೇಕ್ಷಕರಿಗೆ ಸುರಕ್ಷತಾ ಶಿಷ್ಟಾಚಾರಗಳಿಗೆ ಒಳಪಟ್ಟು ಕ್ರಿಕೆಟ್ ಕ್ರೀಡಾಂಗಣಕ್ಕೆ ತೆರಳಲು ಅವಕಾಶ ಇದೆ.

 ಮೊದಲ ಟೆಸ್ಟ್ ಫೆ.5ರಂದು ಇದೇ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದ್ದು, ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಅವಕಾಶ ನೀಡುವ ಮುನ್ನ ತಯಾರಿಗೆ ಸಮಯವಕಾಶದ ಕೊರೆತೆಯ ಕಾರಣದಿಂದಾಗಿ ಮೊದಲ ಟೆಸ್ಟ್‌ಗೆ ಪ್ರೇಕ್ಷಕರಿಗೆ ಅವಕಾಶ ಇಲ್ಲ. ಪ್ರೇಕ್ಷಕರಿಲ್ಲದೆ ಮೊದಲ ಟೆಸ್ಟ್ ನಡೆಯಲಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯನ್ನು ಪ್ರೇಕ್ಷಕರಿಲ್ಲದೆ ನಡೆಸಬೇಕು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News