ದುರುದ್ದೇಶ ಪೂರ್ವಕ ನ್ಯಾಯ ವಿಳಂಬ

Update: 2021-02-04 07:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದಲ್ಲಿ ‘ನ್ಯಾಯ ವಿಳಂಬ’ ಎಂಬ ಪದ ಹೊಸತೇನೂ ಅಲ್ಲ. ನ್ಯಾಯಕ್ಕೆ ಜೋಡಿ ಪದವಾಗಿ ವಿಳಂಬವನ್ನು ಬಳಸುತ್ತಾ ಬಂದಿದ್ದೇವೆ. ‘ನ್ಯಾಯಾಲಯದಲ್ಲಿ ಗೆದ್ದವನು ಸೋತ, ಸೋತವನು ಸತ್ತ’ ಗಾದೆಯೇ, ಈ ದೇಶದಲ್ಲಿ ನ್ಯಾಯವೆನ್ನುವುದು ಅದೆಷ್ಟು ದುಬಾರಿ ಎನ್ನುವುದನ್ನು ವಿವರಿಸುತ್ತದೆ. ಈ ದೇಶದಲ್ಲಿರುವ ನ್ಯಾಯಾಲಯಗಳ ಕೊರತೆ, ನ್ಯಾಯಾಧೀಶರ ಕೊರತೆ, ಭ್ರಷ್ಟಾಚಾರ, ವಕೀಲರ ತಂತ್ರಗಾರಿಕೆ ಇವೆಲ್ಲವೂ ನ್ಯಾಯ ವಿಳಂಬಕ್ಕೆ ಸಾಮಾನ್ಯ ಕಾರಣಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ, ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದ ಉಚ್ಚ ಮತ್ತು ಅತ್ಯುಚ್ಚ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಿಳಂಬದ ಹಿಂದಿರುವುದು ಇಂತಹ ಸಾಮಾನ್ಯ ಕಾರಣಗಳಲ್ಲ. ಅದರ ಹಿಂದೆ ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎನ್ನುವುದನ್ನು ಸಾಮಾಜಿಕ ಹೋರಾಟಗಾರರು, ಸಂವಿಧಾನ ತಜ್ಞರು ಆರೋಪಿಸುತ್ತಿದ್ದಾರೆ. ಇಲ್ಲೆಲ್ಲ ನ್ಯಾಯಕ್ಕಾಗಿ ಕಟಕಟೆಯ ಮುಂದೆ ನಿಂತಿರುವುದು ಈ ದೇಶದ ಸಂವಿಧಾನವಾಗಿದೆ.

ಕೇಂದ್ರ ಸರಕಾರದ ಕೆಲವು ರಾಜಕೀಯ ಕ್ರಮಗಳು ಸಂವಿಧಾನವನ್ನು ಉಲ್ಲಂಘಿಸಿವೆ ಎನ್ನುವುದನ್ನು ಮುಂದಿಟ್ಟುಕೊಂಡು ಹಲವು ನಾಯಕರು ಸುಪ್ರೀಂಕೋರ್ಟ್‌ನ ಮೆಟ್ಟಿಲು ಹತ್ತಿದ್ದಾರೆ. ಸಂವಿಧಾನದ ಅಳಿವು ಉಳಿವಿಗೆ ಸಂಬಂಧಿಸಿದ ಪ್ರಕರಣಗಳು ಇವಾಗಿರುವುದರಿಂದ ನ್ಯಾಯಾಲಯ ಅತ್ಯಂತ ತುರ್ತಾಗಿ ಇವುಗಳನ್ನು ವಿಚಾರಣೆಗೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ನ್ಯಾಯಾಲಯಗಳು ಉದ್ದೇಶಪೂರ್ವಕವಾಗಿ ವಿಳಂಬ ನೀತಿಯನ್ನು ಅನುಸರಿಸುತ್ತಿವೆ ಎಂದು ತಜ್ಞರು ಆರೋಪಿಸುತ್ತಿದ್ದಾರೆ ಮಾತ್ರವಲ್ಲ, ಈ ಕುರಿತಂತೆ ಸುಪ್ರೀಂಕೋರ್ಟ್ ಗೆ ಪತ್ರವನ್ನೂ ಬರೆದಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ದೊರಕಿಸಿಕೊಟ್ಟಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬೆನ್ನಲ್ಲೇ ಹಲವಾರು ರಾಜಕಾರಣಿಗಳು, ಹೋರಾಟಗಾರರು ಹಾಗೂ ನ್ಯಾಯವಾದಿಗಳ ಸಾಮೂಹಿಕ ಬಂಧನವಾಯಿತು.

ಅಷ್ಟೇ ಅಲ್ಲದೆ ಕಟ್ಟುನಿಟ್ಟಿನ ಲಾಕ್‌ಡೌನ್ ಹೇರಲಾಯಿತು ಹಾಗೂ ಸಾಮೂಹಿಕ ಸಂವಹನಗಳನ್ನು ಸ್ಥಗಿತಗೊಳಿಸಲಾಯಿತು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಸಂಸದರು, ಮಾಜಿ ಉನ್ನತ ಸರಕಾರಿ ಅಧಿಕಾರಿಗಳು ಸೇರಿದಂತೆ ಕಾಶ್ಮೀರಿ ನಾಗರಿಕರು ಮತ್ತು ವಿವಿಧ ಸಂಘಟನೆಗಳು ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದರು. ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದ್ದರೂ ಕೇಂದ್ರ ಸರಕಾರವು ಸಂವಿಧಾನದ 370ನೇ ವಿಧಿಯ ಎಲ್ಲಾ ಅಂಶಗನ್ನು ಕಿತ್ತೆಸೆಯುತ್ತಲೇ ಮುಂದುವರಿಯಿತು. ಇತ್ತ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳು ನನೆಗುದಿಗೆ ಬಿದ್ದವು. ನ್ಯಾಯಾಲಯದ ಈ ವಿಳಂಬ ನೀತಿ ಕಾಶ್ಮೀರಿಗಳಲ್ಲಿ ನ್ಯಾಯ ವ್ಯವಸ್ಥೆಯ ಕುರಿತಂತೆ ಅಪನಂಬಿಕೆಗಳನ್ನು ಬಿತ್ತುತ್ತಿದೆ. ಕಾಶ್ಮೀರದಲ್ಲಿ ಉಗ್ರವಾದ ಬೆಳೆಯಬಾರದು ಎಂದಾದರೆ, ನ್ಯಾಯ ವ್ಯವಸ್ಥೆಯ ಕುರಿತಂತೆ ಅಲ್ಲಿನ ಜನರಲ್ಲಿ ನಂಬಿಕೆಯನ್ನು ಬೆಳೆಸಬೇಕು. ಆದರೆ ಕಾಶ್ಮೀರದ ವಿದ್ಯಮಾನಗಳ ಕುರಿತಂತೆ ನ್ಯಾಯಾಲಯ ಅನುಸರಿಸುತ್ತಿರುವ ನೀತಿ ಕಾಶ್ಮೀರೀಗಳಲ್ಲಿ ಭ್ರಮನಿರಸನವನ್ನು ಉಂಟು ಮಾಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಷ್ಟ್ರವ್ಯಾಪಿಯಾಗಿ ಶಾಂತಿಯುತವಾಗಿ ಹಾಗೂ ಪ್ರಜಾತಾಂತ್ರಿಕವಾಗಿ ಪ್ರತಿಭಟನೆ ನಡೆಯುತ್ತಿದ್ದ ಹೊರತಾಗಿಯೂ, ಆ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 140 ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ಕುರುಡುತನವನ್ನು ಪ್ರದರ್ಶಿಸಿತು. ಈ ಅರ್ಜಿಗಳು ಇನ್ನೂ ಸುಪ್ರೀಂಕೋರ್ಟ್‌ನ ಲ್ಲಿ ವಿಚಾರಣೆಗೆ ಬಾಕಿಯುಳಿದಿವೆೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಕ್ಷಿಪ್ರ ಹಾಗೂ ನಿರ್ಣಾಯಕ ಕ್ರಮವನ್ನು ದೇಶದ ಲಕ್ಷಾಂತರ ಪ್ರಜೆಗಳು ನಿರೀಕ್ಷಿಸುತ್ತಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿಯವರು ಸಿಎಎ ಒಂದು ತುರ್ತು ವಿಚಾರಣೆಗೆ ಬರಬೇಕಾದ ವಿಷಯವಲ್ಲವೆಂದು ಭಾವಿಸಿದಂತಿದೆ. ಆದರ ಬದಲು ಶಬರಿಮಲೆಯ ಧಾರ್ಮಿಕ ಆಚಾರವಿಚಾರಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥಕ್ಕೆ ಆದ್ಯತೆ ನೀಡಿತು. ಅಷ್ಟೇ ಅಲ್ಲದೆ ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಶಿಬಿರಗಳನ್ನು ತೆಗೆದುಹಾಕುವ ವಿಷಯಕ್ಕೆ ಸಂಬಂಧಿಸಿ ಆತುರವನ್ನು ಪ್ರದರ್ಶಿಸಿತು. ಇದೀಗ ಹೇಬಿಯಸ್ ಕಾರ್ಪಸ್ ಅರ್ಜಿಗಳ ಬಗೆಗೂ ಸುಪ್ರೀಂಕೋರ್ಟ್ ಅದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ.

ನಾಗರಿಕರ ಸ್ವಾತಂತ್ರವನ್ನು ನಿರ್ಬಂಧಿಸುವ ಸರಕಾರದ ಸರ್ವಾಧಿಕಾರಕ್ಕೆ ಮೂಗುದಾರವನ್ನು ಹಾಕುವಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಪ್ರಮುಖ ಅಸ್ತ್ರವಾಗಿದೆ. ಅಕ್ರಮವಾಗಿ ನಾಗರಿಕರನ್ನು ಬಂಧಿಸುವುದರ ವಿರುದ್ಧ ತ್ವರಿತವಾದ ಪರಾಮರ್ಶೆ ನಡೆಸುವುದನ್ನು ಖಾತರಿಪಡಿಸುವುದೇ ಹೇಬಿಯಸ್ ಕಾರ್ಪಸ್‌ನ ಮೂಲಭೂತ ಉದ್ದೇಶವಾಗಿದೆ. ಯಾಕೆಂದರೆ ಬದುಕುವ ಹಕ್ಕಿನ ಜೊತೆಜೊತೆಗೆ ಸ್ವಾತಂತ್ರ ಕೂಡಾ ಅತ್ಯಂತ ಅಮೂಲ್ಯವಾದ ಮೂಲಭೂತ ಹಕ್ಕುಗಳೆಂದು ಪರಿಗಣಿಸಲಾಗಿದೆ.ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಕಾಶ್ಮೀರದಲ್ಲಿ ತನ್ನ ಪಕ್ಷದ ಮಾಜಿ ಶಾಸಕರಾದ ಮುಹಮ್ಮದ್ ತರಿಗಾಮಿ ಅವರನ್ನು ಸುಪ್ರೀಂಕೋರ್ಟ್ ಮುಂದೆ ಹಾಜರುಪಡಿಸುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು ಮತ್ತು ಅನಾರೋಗ್ಯ ಪೀಡಿತರಾದ ಅವರನ್ನು ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಬೇಕೆಂದು ಮನವಿ ಮಾಡಿದ್ದರು.ಅದೇ ರೀತಿ, ಕಾಶ್ಮೀರದ ಕಾನೂನು ವಿದ್ಯಾರ್ಥಿ ಅಲೀಮ್ ಸೈಯದ್ ಮುಹಮ್ಮದ್ ಅವರು ಆನಂತನಾಗ್‌ನಲ್ಲಿ ತನ್ನ ಪಾಲಕರ ಅಕ್ರಮ ಬಂಧನದ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿದ್ದರು. ತನ್ನ ಹೆತ್ತವರನ್ನು ಸುಪ್ರೀಂಕೋರ್ಟ್‌ನ ಮುಂದೆ ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಅವರು ಕೋರಿದ್ದರು.ಆದಾಗ್ಯೂ ಸುಪ್ರೀಂಕೋರ್ಟ್ ಈ ಬಂಧನಗಳು ಕಾನೂನುಬದ್ಧವೇ ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ. ತರಿಗಾಮಿ ಅಥವಾ ಸೈಯದ್ ಅವರ ಪಾಲಕರ ಬಂಧನದ ಕುರಿತ ವಿಚಾರಣೆಯು ಈಗಲೂ ನ್ಯಾಯಾಲಯದಲ್ಲಿ ನನೆಗುದಿಯಲ್ಲಿದೆ.

ಅದೇ ರೀತಿ ಹಾಥರಸ್‌ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವರದಿಗಾರಿಕೆಗೆ ತೆರಳಿದ್ದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್‌ರನ್ನು ಉತ್ತರಪ್ರದೇಶ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ (ಯುಎಪಿಎ)ಯಡಿ ಬಂಧಿಸಿದ್ದರು. ಅವರ ಬಂಧನವನ್ನು ಪ್ರಶ್ನಿಸಿ ಕೇರಳದ ಕಾರ್ಯನಿರತ ಪತ್ರಕರ್ತರ ಸಂಘವು ಸುಪ್ರೀಂಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿತ್ತು. ಕೆಯುಡಬ್ಲುಜೆ ಪರವಾಗಿ ಹಾಜರಾದ ಸಿಬಲ್ ಅವರು ಕಪ್ಪನ್‌ರನ್ನು ಭೇಟಿಯಾಗಲು ಅವರ ವಕೀಲರಿಗೆ ಅವಕಾಶ ನೀಡಬೇಕೆಂದು ಕೋರಿದ್ದರು.ಆದರೆ ಸುಪ್ರೀಂಕೋರ್ಟ್ ಪರಿಹಾರ ನೀಡುವ ಬದಲು, ‘ತಾವು ಈ ಬಗ್ಗೆ ಅಲಹಾಬಾದ್ ಹೈಕೋರ್ಟ್‌ಗೆ ತೆರಳುವ ಮುಂದೆ ಸರ್ವೋಚ್ಚ ನಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೀರಿ’ ಎಂದು ತಕರಾರು ತೆಗೆಯಿತು. ಆದರೆ ರಿಪಬ್ಲಿಕ್‌ಟಿವಿಯ ಮಾಲಕ-ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅತ್ಯಂತ ತ್ವರಿತವಾಗಿ ಆದೇಶಗಳನ್ನು ನೀಡಿತ್ತು.

ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ವಿವಿಧ ಆರೋಪಗಳಲ್ಲಿ ಮಹಾರಾಷ್ಟ್ರ ಪೊಲೀಸರು ಅರ್ನಬ್ ಅವರನ್ನು ಬಂಧಿಸಿದ್ದರು. ಇದರ ವಿರುದ್ಧ ಅರ್ನಬ್ ಸುಪ್ರೀಂಕೋರ್ಟ್‌ಗೆ ಸಂವಿಧಾನದ 32ನೇ ವಿಧಿಯಡಿ ನೇರವಾಗಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಯಿತು. ಆರ್ನಬ್ ಬಂಧನಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ‘‘ಪೌರರ ಸ್ವಾತಂತ್ರವನ್ನು ರಕ್ಷಿಸಲು ಸರ್ವೋಚ್ಚ ನ್ಯಾಯಾಲಯವೊಂದು ಇದೆ ಎಂಬುದನ್ನು ರಾಜ್ಯಗಳು ಮನಗಾಣಬೇಕು’’ ಎಂದು ಹೇಳಿತ್ತು. ಇಲ್ಲಿ ಮೂಡುವ ಪ್ರಶ್ನೆಯೇನೆಂದರೆ ಒಂದು ವರ್ಗದ ಜನರು ಇನ್ನೊಂದು ವರ್ಗದ ಜನರಿಗಿಂತ ನ್ಯಾಯವನ್ನು ಪಡೆಯಲು ಹೆಚ್ಚು ಯೋಗ್ಯತೆಯುಳ್ಳವರೇ ಎಂಬುದಾಗಿದೆ. ಮೇಲಿನೆಲ್ಲ ಉದಾಹರಣೆಗಳಿಂದ ಒಂದು ಸ್ಪಷ್ಟವಾಗುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ಸದ್ಯಕ್ಕೆ ನಡೆಯುತ್ತಿರುವುದನ್ನು ನ್ಯಾಯ ವಿಳಂಬವೆಂದು ಕರೆದು ಸುಮ್ಮನಿರುವಂತಿಲ್ಲ. ಇದು ಉದ್ದೇಶಪೂರ್ವಕವಾಗಿ ಸಂಭವಿಸುತ್ತಿರುವ ನ್ಯಾಯ ವಿಳಂಬ. ನ್ಯಾಯವನ್ನು ನೀಡಬಾರದು ಎನ್ನುವ ಉದ್ದೇಶದಿಂದಲೇ ಈ ವಿಳಂಬಗಳು ನಡೆಯುತ್ತಿವೆ. ‘ಇತ್ತೀಚೆಗೆ ನ್ಯಾಯಾಲಯದ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಹಾಗೆ ಮಾತನಾಡುವವರ ಸಂಖ್ಯೆ ಹೆಚ್ಚುವುದಕ್ಕೂ, ನ್ಯಾಯ ನೀಡುವಿಕೆಗೆ ಸಂಬಂಧಿಸಿ ತನ್ನ ಇತ್ತೀಚಿನ ಕಾರ್ಯ ವಿಧಾನಗಳಿಗೂ ಏನಾದರೂ ಸಂಬಂಧವಿದೆಯೇ ಎನ್ನುವುದನ್ನು ಮೊದಲು ನ್ಯಾಯ ವ್ಯವಸ್ಥೆ ತಾಳೆ ಹಾಕಿ ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News