ಹದಿಹರೆಯದ ಯುವತಿ ಮೇಲೆ ಅತ್ಯಾಚಾರ; ತಂದೆ- ಮಗಳ ಸಹಿತ ಮೂವರ ಹತ್ಯೆ

Update: 2021-02-04 03:58 GMT

ಕೋರ್ಬಾ (ಛತ್ತೀಸ್‌ಗಢ), ಫೆ.4: ಹದಿನಾರು ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಸಂತ್ರಸ್ತೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿರುವ ಪೈಶಾಚಿಕ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಸಂತ್ರಸ್ತೆಯ ತಂದೆ ಹಾಗೂ ನಾಲ್ಕು ವರ್ಷದ ಮೊಮ್ಮಗಳನ್ನು ಕೂಡಾ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಲೆಮ್ರು ಪೊಲೀಸ್ ಠಾಣೆ ವ್ಯಾಪ್ತಿಯ ಗಧುಪ್ರೋದಾ ಗ್ರಾಮದಲ್ಲಿ ಈ ಘಟನೆ ಜನವರಿ 29ರಂದು ನಡೆದಿದ್ದರೂ, ಈ ಘಟನೆ ಮಂಗಳವಾರವಷ್ಟೇ ಬೆಳಕಿಗೆ ಬಂದಿದೆ. ಆರು ಮಂದಿ ಆರೋಪಿಗಳನ್ನು ಈ ಸಂಬಂಧ ಬಂಧಿಸಲಾಗಿದೆ ಎಂದು ಕೋರ್ಬಾ ಎಸ್ಪಿ ಅಭಿಷೇಕ್ ಮೀನಾ ವಿವರ ನೀಡಿದ್ದಾರೆ.

ಮೃತ ವ್ಯಕ್ತಿ ಬರ್‌ಪಾನಿ ಗ್ರಾಮದವರಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಸಂತರಾಮ್ ಮುಜಾವರ್ (45) ಎಂಬಾತನ ಮನೆಯಲ್ಲಿ ಜಾನುವಾರು ಮೇಯಿಸುವ ಕೆಲಸಕ್ಕೆ ಕಳೆದ ಜುಲೈನಲ್ಲಿ ಸೇರಿದ್ದರು. ಜನವರಿ 29ರಂದು ಮುಜಾವರ್ ತನ್ನ ಬೈಕ್‌ನಲ್ಲಿ ಈ ವ್ಯಕ್ತಿ, 16 ವರ್ಷದ ಪುತ್ರಿ ಹಾಗೂ 4 ವರ್ಷದ ಮೊಮ್ಮಗುವನ್ನು ಗ್ರಾಮಕ್ಕೆ ಬಿಟ್ಟುಬರಲು ಹೊರಟಿದ್ದ. ದಾರಿಮಧ್ಯದಲ್ಲಿ ಕೊರಾಯ್ ಎಂಬ ಗ್ರಾಮದಲ್ಲಿ ಬೈಕ್ ನಿಲ್ಲಿಸಿ ಆರೋಪಿ ಮದ್ಯಸೇವನೆ ಮಾಡಿದ್ದ. ಆ ಬಳಿಕ ಇತರ ಆರೋಪಿಗಳೂ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ.

ಮೂವರನ್ನೂ ದಟ್ಟಕಾಡಿನ ಮಧ್ಯೆ ಬೆಟ್ಟದ ತಪ್ಪಲಿಗೆ ಕರೆದೊಯ್ದ ಆರೋಪಿಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಬಳಿಕ ಎಲ್ಲರನ್ನೂ ಕಲ್ಲಿನಿಂದ ಜಜ್ಜಿ ಸಾಯಿಸಿ, ಮೃತದೇಹಗಳನ್ನು ಕಾಡಿನಲ್ಲಿ ಎಸೆದು ಪರಾರಿಯಾಗಿದ್ದರೆನ್ನಲಾಗಿದೆ. ಮೃತ ವ್ಯಕ್ತಿಯ ಪುತ್ರ, ತಂದೆ ನಾಪತ್ತೆಯಾದ ಬಗ್ಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಮೃತರು ಪಹಾಡಿ ಕೊರವ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳ ಅನ್ವಯ ಕೊಲೆ, ಸಾಮೂಹಿಕ ಅತ್ಯಾಚಾರ, ಎಸ್ಸಿ/ಎಸ್ಟಿ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News