ಜಮ್ಮು ಕಾಶ್ಮೀರದಲ್ಲಿ ಇನ್ನೂ 183 ಮಂದಿ ಬಂಧನದಲ್ಲಿದ್ದಾರೆ: ಕೇಂದ್ರದ ಮಾಹಿತಿ

Update: 2021-02-04 18:59 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಒಂದೂವರೆ ವರ್ಷದ ಬಳಿಕವೂ ಅಲ್ಲಿ 183 ಮಂದಿ ಇನ್ನೂ ಬಂಧನದಲ್ಲಿದ್ದಾರೆ ಎಂದು ಕೇಂದ್ರ ಸರಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

2019ರ ಆಗಸ್ಟ್‌ನಿಂದ ಜಮ್ಮು ಕಾಶ್ಮೀರದಲ್ಲಿ ಸೆರೆಯಲ್ಲಿರುವ ಅಥವಾ ಗೃಹ ಬಂಧನದಲ್ಲಿರುವ ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಬಗ್ಗೆ ಮಾಹಿತಿ ನೀಡುವಂತೆ ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಗೃಹ ಇಲಾಖೆಯ ಸಹಾಯಕ ಸಚಿವ ಜಿ ಕಿಶನ್ ರೆಡ್ಡಿ, 2019ರ ಆಗಸ್ಟ್ 1ರಿಂದ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರಿಗೆ ಆಶ್ರಯ, ನೆರವು ನೀಡುವವರು, ಕಲ್ಲೆಸೆಯುವವರು ಸೇರಿದಂತೆ 613 ಜನರನ್ನು ವಿವಿಧ ಸಂದರ್ಭಗಳಲ್ಲಿ ಬಂಧಿಸಲಾಗಿದೆ. ಪರಿಶೀಲನೆ ಮತ್ತು ಪರಿಸ್ಥಿತಿಯನ್ನು ಗಮನಿಸಿ ಇವರಲ್ಲಿ 430 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

 ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಖಾತರಿ ಪಡಿಸಲು ಮುನ್ನೆಚ್ಚರಿಕೆಯ ಬಂಧನ ಎಂಬ ಕ್ರಮವನ್ನು ಕೈಗೊಳ್ಳಲಾಗಿದೆ. ಈಗ ಅಲ್ಲಿ ಯಾರನ್ನೂ ಗೃಹ ಬಂಧನದಲ್ಲಿ ಇರಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News