ವಿಶ್ವ ಆರೋಗ್ಯ ಸಂಸ್ಥೆಯಿಂದ ಅತಿ ಹೆಚ್ಚು ಡೋಸ್ ಲಸಿಕೆ ಭಾರತಕ್ಕೆ

Update: 2021-02-05 15:33 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 5: ವಿಶ್ವ ಆರೋಗ್ಯ ಸಂಸ್ಥೆಯ ‘ಕೋವ್ಯಾಕ್ಸ್’ ಕಾರ್ಯಕ್ರಮದ ಮೂಲಕ, ಮೊದಲ ಹಂತದ ವಿತರಣೆಯಲ್ಲಿ ಭಾರತವು ಗರಿಷ್ಠ ಸಂಖ್ಯೆಯ ಕೋವಿಡ್-19 ಲಸಿಕಾ ಡೋಸ್‌ಗಳನ್ನು ಪಡೆಯಲಿದೆ.

ಪ್ರಸಕ್ತ ಭಾರತದಲ್ಲಿ ಲಸಿಕೆಯ ಬೇಡಿಕೆಗಿಂತ ಪೂರೈಕೆಯು ಅಧಿಕವಾಗಿರುವ ಹೊರತಾಗಿಯೂ, ದೇಶವು 9.72 ಕೋಟಿ ಡೋಸ್‌ಗಳನ್ನು ಸ್ವೀಕರಿಸಲಿದೆ.

ಅಭಿವೃದ್ಧಿಶೀಲ ದೇಶಗಳಿಗೆ ಕೋವಿಡ್-19 ಲಸಿಕೆಗಳ ನ್ಯಾಯೋಚಿತ ವಿತರಣೆಯನ್ನು ಖಾತರಿಪಡಿಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಆರಂಭಿಸಿರುವ ‘ಕೋವ್ಯಾಕ್ಸ್’ ಕಾರ್ಯಕ್ರಮದ ಮೂಲಕ ಮೊದಲ ಹಂತದಲ್ಲಿ 33.72 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗುತ್ತದೆ. ಲಸಿಕೆಗಳ ಪೂರೈಕೆಯು ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ.

ದೇಶಗಳ ಜನಸಂಖ್ಯೆಯ ಆಧಾರದಲ್ಲಿ ಲಸಿಕೆಗಳ ಡೋಸ್‌ಗಳ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಭಾರತದ ಬಳಿಕ, ಎರಡನೇ ಅತಿ ಹೆಚ್ಚು, ಅಂದರೆ 1.72 ಕೋಟಿ ಡೋಸ್ ಲಸಿಕೆ ಪಾಕಿಸ್ತಾನಕ್ಕೆ ಹೋಗಲಿದೆ. ನೈಜೀರಿಯ 1.6 ಕೋಟಿ ಡೋಸ್ ಲಸಿಕೆ ಪಡೆದರೆ, ಇಂಡೋನೇಶ್ಯವು 1.37 ಕೋಟಿ ಡೋಸ್ ಪಡೆಯಲಿದೆ. ಉತ್ತರ ಕೊರಿಯವು 20 ಲಕ್ಷ ಡೋಸ್‌ಗಳು ಸಿಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News