ಬಝ್ಮೆ ನಿಸ್ವಾನ್ ಟ್ರಸ್ಟ್ ವತಿಯಿಂದ 1.20 ಕೋಟಿ ರೂ. ವಿದ್ಯಾರ್ಥಿ ವೇತನ ವಿತರಣೆ

Update: 2021-02-06 15:06 GMT

ಬೆಂಗಳೂರು, ಫೆ.6: ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪದವಿ ಪೂರ್ವ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 3200 ವಿದ್ಯಾರ್ಥಿನಿಯರಿಗೆ 1.20 ಕೋಟಿ ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಹುಸ್ನಾ ಶರೀಫ್ ತಿಳಿಸಿದರು.

ಶನಿವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ವಿದ್ಯಾರ್ಥಿನಿಯರಿಗೆ ಸಾಂಕೇತಿಕವಾಗಿ ವಿದ್ಯಾರ್ಥಿವೇತನ ಚೆಕ್ ವಿತರಿಸಿದ ಬಳಿಕ ಅವರು ಮಾತನಾಡಿದರು.

ಕಳೆದ ಸಾಲಿನ ಡಿ.1ರಂದು ಆನ್‍ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ಕೆ ಚಾಲನೆ ನೀಡಿ, 15 ದಿನ ಕಾಲಾವಕಾಶ ನೀಡಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಶೇ.30ರಷ್ಟು ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ಸಾಲಿನಲ್ಲಿ 1.50 ಕೋಟಿ ರೂ.ಗಳ ವಿದ್ಯಾರ್ಥಿವೇತನ ನೀಡಲಾಗಿತ್ತು. ಈ ಸಾಲಿನಲ್ಲಿ 1.20 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡುವ ಉದ್ದೇಶದಿಂದ ವೇದಿಕೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐದು ಮಂದಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನದ ಚೆಕ್ ವಿತರಣೆ ಮಾಡಲಾಗಿದೆ. ಉಳಿದ ಎಲ್ಲ ವಿದ್ಯಾರ್ಥಿನಿಯರಿಗೆ ಅವರ ಬ್ಯಾಂಕ್ ಖಾತೆಗಳಿಗೆ ಆನ್‍ಲೈನ್ ಮೂಲಕ ಹಣ ಜಮೆ ಮಾಡಲಾಗಿದೆ ಎಂದು ಹುಸ್ನಾ ಶರೀಫ್ ತಿಳಿಸಿದರು.

ಪದವಿಪೂರ್ವ ಹಾಗೂ ಡಿಪ್ಲೊಮಾದ 1450, ಪದವಿ ಕೋರ್ಸುಗಳ 1656, ಸ್ನಾತಕೋತ್ತರ ಕೋರ್ಸುಗಳ 94 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಪ್ರತಿವರ್ಷ ಸರಾಸರಿ 3500ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗುತ್ತಿದ್ದವು. ಆದರೆ, ಈ ಬಾರಿ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಹಲವಾರು ಮಂದಿ ಹೆಣ್ಣುಮಕ್ಕಳು 10 ಹಾಗೂ 12ನೆ ತರಗತಿಯಲ್ಲಿ ಉತ್ತೀರ್ಣರಾಗಿದ್ದರೂ ಆರ್ಥಿಕ ಸಂಕಷ್ಟದಿಂದಾಗಿ ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್‍ನ ಖಜಾಂಚಿ ಡಾ.ಅನ್ವರ್ ಬಾಸಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News