‘ಕುಂದಾಪ್ರ ಕನ್ನಡ ನಿಘಂಟು’ ಎಂಬ ಕೈಮರ
ಒಂದು ಬದುಕಿನ ಎಲ್ಲಾ ವ್ಯಾಪಾರದ ವಿವರಗಳೂ ಉದಾ: ಕೃಷಿ, ಅಡುಗೆ, ಆಚರಣೆಗಳೆಲ್ಲಾ ಸ್ಥಳೀಯ ನೆಲದ ಚೌಕಟ್ಟಿನಲ್ಲಿ ಭಾಷೆಯ ಮೂಲಕವೂ ಭಿನ್ನವಾಗಿ ಅರಳುತ್ತವೆ. ಮೂಲದಲ್ಲಿ ಸಾಮ್ಯ ಕಂಡಾಗಲೂ ಸ್ಥಳೀಯ ವಿವರಗಳ ವ್ಯತ್ಯಾಸ ಯಾವುದೇ ಸಾಂಸ್ಕೃತಿಕ ಸ್ವಾಯತ್ತತೆಯ, ಪರಾಮರ್ಶೆಯ ಸಂಕೇತ. ಈ ಸ್ಥಳೀಯತೆ ಅಎಷ್ಟು ಸಾಂದ್ರವಾಗಿರುತ್ತದೆ ಅಂದರೆ ಒಂದು ಪದವನ್ನು ಶಿಷ್ಟ ಭಾಷೆಯ ಯಾವ ಪದವೂ ಸ್ಥಳಾಂತರಗೊಳಿಸಲು ಸಾಧ್ಯವೇ ಇಲ್ಲ. ಈ ಅರ್ಥ ಸಿರಿವಂತಿಕೆ ನಮ್ಮನ್ನು ಸ್ಥಳೀಯವಾದದ್ದರ ಅನನ್ಯತೆಯನ್ನು ನೋಡುವಂತೆ ಒತ್ತಾಯಿಸುತ್ತದೆ.
ಪಂಜು ಗಂಗೊಳ್ಳಿ ಮತ್ತು ಗೆಳೆಯರು ಸಂಪಾದಿಸಿರುವ ‘ಕುಂದಾಪ್ರ ಕನ್ನಡ ನಿಘಂಟು’ ಎಂಬ ಶಬ್ದಕೋಶ ಟ್ರಿಗರ್ ಮಾಡಿದ ಬೌದ್ಧಿಕ ರೋಮಾಂಚನವನ್ನು ಇತ್ತೀಚೆಗೆ ನಾನು ಅನುಭವಿಸಿಲ್ಲ. ಹಿಂದೆ ಕೊಳಂಬೆ ಪುಟ್ಟಣ್ಣ ಗೌಡರ ಅಚ್ಚಗನ್ನಡ ಪದಕೋಶವನ್ನು ತೇಜಸ್ವಿ ಪ್ರಕಟಿಸಿದಾಗ ನನ್ನಲ್ಲಿ, ‘‘ನಿಮ್ಮೂರವ್ರ ಅಲ್ವಾ? ನಮ್ಮ ಬೀಗರು. ನಮ್ ಭಾವ ಚಿದಾನಂದ ಅದರ ಹಸ್ತಪ್ರತಿಯನ್ನು ಸಂಕೋಚದಲ್ಲಿ ತಂದು ಕೊಟ್ಟಾಗ ನಾನು ಅನುಭವಿಸಿದ ಐ್ಞಠಿಛ್ಝ್ಝಿಛ್ಚಿಠ್ಠಿಚ್ಝ ಟ್ಚ ಕಳೆದ 25 ವಷರ್ಗಳಲ್ಲಿ ಅನುಭವಿಸಿರಲಿಲ್ಲ’’ ಎಂದಿದ್ದರು. ಅದಾಗಿ ಕಾಲು ಶತಮಾನ ಕಳೆಯಿತು. ಪಂಜು ಮತ್ತು ಗೆಳೆಯರು ಅಂತಹ ಒಂದು ಆಘಾತ ಮತ್ತು ರೋಮಾಂಚನ ನೀಡಿದ್ದಾರೆ.
ಈ ಪದಕೋಶ ಸಂಗ್ರಹಿಸಿದವರು ಯಾರೂ ವೃತ್ತಿಪರ ತಜ್ಞರಲ್ಲ. ಕಣ್ಣಾಡಿಸಿ, ಓದಿ ಬರೆಯುತ್ತಿರುವ ನಾನೂ ಅಲ್ಲ! ಆದರೆ ಇದರ ಪ್ರಾಮುಖ್ಯತೆ ಎದೆಗಿಳಿಯಲು ತಜ್ಞರ ಮಾರ್ಗದರ್ಶನ ಬೇಕಿಲ್ಲ. ಇದು ಒಂದು ಸಾಮಾಜಿಕ, ಸಾಂಸ್ಕೃತಿಕ, ಮಾನವಶಾಸ್ತ್ರೀಯ ಒಳನೋಟವನ್ನು ಒಂದು ಭೌಗೋಳಿಕ ವ್ಯಾಪ್ತಿಯ ಸಮುದಾಯದ ಬಗ್ಗೆ ಒದಗಿಸುತ್ತದೆ.
ಭಾಷೆಯ ಬಲುದೊಡ್ಡ ಶಕ್ತಿ ಇರುವುದು ಅದರ ಜಾತ್ಯತೀತ ಗುಣದಲ್ಲಿ. ಹತ್ತು ಹಲವು ಭಿನ್ನ ಜಾತಿ/ ಸಮುದಾಯಗಳು ನಿತ್ಯ ಜೀವನದಲ್ಲಿ ಕೊಡು-ಕೊಳು ನಡೆಸುತ್ತಾ ಒಂದು ಸಂವಾದ ಮತ್ತು ಸುಖ-ದುಃಖ ಹಂಚಿಕೊಳ್ಳುವ ಬಗೆ ಇದೆಯಲ್ಲಾ, ಆ ಪ್ರಕ್ರಿಯೆಯನ್ನು ಪ್ರಾದೇಶಿಕ ಭಾಷೆಗಳು ಸದಾ ಸಾದರಪಡಿಸಿವೆ. ಒಂದು ಪದದ ವ್ಯತ್ಪತ್ತಿ, ಬಳಕೆಯನ್ನು ಯಾರಾದರೂ ಬೆನ್ನು ಹತ್ತಿ ನೋಡಿದರೆ ಒಂದೊಂದರ ಮೂಲವೂ ಒಂದೊಂದು ಸಮುದಾಯದ ಎದೆಯ ಬಳಿ ಬಂದು ನಿಲ್ಲುತ್ತದೆ. ಈ ಸ್ವೀಕರಣ ಗುಣವೇ ಸಂವಾದ ಮತ್ತು ಬಾಂಧವ್ಯ ಬೆಳೆದಿದ್ದಕ್ಕೆ ಪುರಾವೆ.
ಒಂದು ಬದುಕಿನ ಎಲ್ಲಾ ವ್ಯಾಪಾರದ ವಿವರಗಳೂ ಉದಾ: ಕೃಷಿ, ಅಡುಗೆ, ಆಚರಣೆಗಳೆಲ್ಲಾ ಸ್ಥಳೀಯ ನೆಲದ ಚೌಕಟ್ಟಿನಲ್ಲಿ ಭಾಷೆಯ ಮೂಲಕವೂ ಭಿನ್ನವಾಗಿ ಅರಳುತ್ತವೆ. ಮೂಲದಲ್ಲಿ ಸಾಮ್ಯ ಕಂಡಾಗಲೂ ಸ್ಥಳೀಯ ವಿವರಗಳ ವ್ಯತ್ಯಾಸ ಯಾವುದೇ ಸಾಂಸ್ಕೃತಿಕ ಸ್ವಾಯತ್ತತೆಯ, ಪರಾಮರ್ಶೆಯ ಸಂಕೇತ. ಈ ಸ್ಥಳೀಯತೆ ಎಂಬುದು ತನ್ನ ಸಾಂದರ್ಭಿಕ ವಿವರಗಳಲ್ಲಿ ಎಷ್ಟು ಸಾಂದ್ರವಾಗಿರುತ್ತದೆ ಅಂದರೆ ಒಂದು ಪದವನ್ನು ಶಿಷ್ಟ ಭಾಷೆಯ ಯಾವ ಪದವೂ ಸ್ಥಳಾಂತರಗೊಳಿಸಲು ಸಾಧ್ಯವೇ ಇಲ್ಲ. ಈ ಅರ್ಥ ಸಿರಿವಂತಿಕೆ ನಮ್ಮನ್ನು ಸ್ಥಳೀಯವಾದದ್ದರ ಅನನ್ಯತೆಯನ್ನು ನೋಡುವಂತೆ ಒತ್ತಾಯಿಸುತ್ತದೆ.
ಇದು ಯಜಮಾನ ಸಂಸ್ಕೃತಿ ಮತ್ತು ಅದು ಯಜಮಾನಿಕೆ ನಡೆಸಲು ಬಳಸುವ ಭಾಷೆಗೆ ಎಸೆಯುವ ಸವಾಲು ಕೂಡಾ.
ಇಂತಹ ಪದಕೋಶ ನಮ್ಮಲ್ಲಿ ಇನ್ನೂ ಆಗದಿರುವ ಖಟ್ಚಜಿಚ್ಝ ಚ್ಞಠಿಜ್ಟಟಟ್ಝಟಜ ್ಟಛಿಛಿಚ್ಟ್ಚ ಬಗ್ಗೆ ಬೆಟ್ಟು ತೋರಿಸಿ ಆ ಕ್ಷೇತ್ರದಲ್ಲಿ ಇರುವ ಉದಾಸೀನವನ್ನು ಬೆತ್ತಲೆಗೊಳಿಸಿದೆ. ಹಿಂದೆ ಒಮ್ಮೆ ಉತ್ತರ ಕನ್ನಡದ ಕೆಲವು ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಸ್ಥಳೀಯ ಸಮುದಾಯಗಳು ಬಳಸುವ ಪದಭಂಡಾರವನ್ನು ದಾಖಲಿಸಲು ಸಲಹೆ ಮಾಡಿದ್ದೆ. ಗಿಡ, ಮರ, ಹಕ್ಕಿ, ಪ್ರಾಣಿ, ಜಲಚರ, ಅಡುಗೆ, ಒಂದೇ ಎರಡೇ.. ಗೆಳೆಯ ವಿಠಲ ಭಂಡಾರಿಯವರು ತಮ್ಮ ವಿದ್ಯಾರ್ಥಿಗಳ ಮೂಲಕ ಇಂತಹ ಒಂದು ಸಂಗ್ರಹ ಮಾಡಿದ್ದಾರೆ. ಅದು ಪ್ರಕಟವಾಗಿಲ್ಲ ಅನ್ನಿಸುತ್ತೆ.
ಈ ಪದಭಂಡಾರವೆಂದರೆ ಸಾಂಸ್ಕೃತಿಕ ಸಿರಿವಂತಿಕೆಯ ಭಂಡಾರವೆಂದೇ ಅರ್ಥ. ಒಂದು ವಿಶಿಷ್ಟ ಜೀವನ ಶೈಲಿ, ಭೌಗೋಳಿಕ ಚೌಕಟ್ಟಿನ ಒಳಗೆ ಒಂದು ಸಾಮುದಾಯಿಕ ಜೀವನ ರೂಪುಗೊಂಡ ರೀತಿಯ ದಾಖಲೆ. ಆದರೆ ಶಿಕ್ಷಣ ಇದನ್ನು ಹೇಗೆ ಹೊರಗಿಡುತ್ತದೆ ಎಂಬುದನ್ನೂ ಗಮನಿಸಬೇಕು. ನಾವು ಇಂಗ್ಲಿಷ್ ಬಗ್ಗೆ ಮಾತಾಡುತ್ತೇವೆ. ಆದರೆ ಸ್ವತಃ ಕನ್ನಡ ಇಂತಹ ಒಂದು ಯಜಮಾನನ ಕೆಲಸ ಮಾಡಿದೆ. ಶಿಷ್ಟ ಕನ್ನಡದ ಪಠ್ಯ ಮಾದರಿ ಹೇಗಿದೆಯೆಂದರೆ ತರಗತಿಯಲ್ಲಿ ಪಠ್ಯ ಕನ್ನಡವನ್ನು ವಿಧೇಯವಾಗಿ ಒಪ್ಪಿಸುವ ಹುಡುಗ ತರಗತಿಯ ಹೊರಗಿನ ಸಾಮಾಜಿಕ ಬಯಲಿನಲ್ಲಿ ಬಳಸುವ ಪದಗಳೇ ಬೇರೆ. ಈ ಪದಗಳಾವುವೂ ಶಿಕ್ಷಣದ ಒಳಗೆ ಬಾರದಂತೆ ಶಿಕ್ಷಕರು (ಅಂದರೆ ನಮ್ಮ ವ್ಯವಸ್ಥೆ) ಸಮರ್ಥ ತಡೆಗೋಡೆಯಾಗಿ ಕೆಲಸ ಮಾಡಿದ್ದಾರೆ. ಹಲವು ಬಾರಿ ನಾನು ಡಾ. ಶಿವರಾಮ ಕಾರಂತರು ಕೊಟ್ಟ ಉದಾಹರಣೆಯನ್ನು ಉಲ್ಲೇಖಿಸಿದ್ದೇನೆ. ದ.ಕ.ದ ವಿದ್ಯಾರ್ಥಿ ತರಗತಿಯೊಳಗೆ ಅ= ಅಳಿಲು ಅಂತ ರಾಗವಾಗಿ ಓದಿ ಹೊರಬಂದರೆ ಅದನ್ನೇ ನೋಡಿ, ‘‘ಓ ಕುಂಡಚ್ಚಾ..!’’ ಅಂತ ಉದ್ಗರಿಸುತ್ತಾನೆ. ತರಗತಿಯೊಳಗೆ ಅದನ್ನು ಬಳಸುವಂತಿಲ್ಲ! ಅಂದರೆ ಸ್ಥಳೀಯ ಪದಗಳೆಲ್ಲಾ ಕೀಳರಿಮೆಯ ಭಯದಲ್ಲಿ ಕ್ಲಾಸಿನಿಂದಾಚೆ ಉಳಿದು ಅವು ಕನ್ನಡದ ತೆಕ್ಕೆಗೂ ಬಾರದೇ ಹೋದವು.
ಇದು ಕಾಲಾಂತರದಲ್ಲಿ ಒಂದು ಭಾಷೆ-ಸಂಸ್ಕೃತಿಗೆ ತರುವ ಊನ ಊಹಿಸಲಸಾಧ್ಯ. ಹತ್ತಾರು ಭಾಷೆಗಳ ಸ್ಥಿತಿ ಹೇಗಾಗಿದೆಯೆಂದರೆ ಅದನ್ನು ಆಡುವ ಮಂದಿಯ ಸಂಖ್ಯೆ ಮೂರಂಕಿ ಒಳಗೆ ಇರುವ ಉದಾಹರಣೆಗಳು ಸಾಕಷ್ಟಿವೆ.
ಇನ್ನೊಂದು ಅಂಶ ನಮ್ಮ ಸಂಸ್ಕೃತಿಯ ವ್ಯಕ್ತ ರೂಪವಾಗಿ ಹರಡಿದ್ದ ಪದಗಳೆಲ್ಲಾ ಜಾಗ ಕಳೆದುಕೊಂಡು ಕೊನೆಗೂ ಎಲ್ಲೋ ಒಂದೆಡೆ ಆಶ್ರಯ ಪಡೆಯುತ್ತವೆ. ಇಂತಹ ದ್ವೀಪಗಳೇ ಭಾಷೆಯ ಕೊಂಡಿಗಳನ್ನು ಬೆಸೆದು ಪುನರುಜ್ಜೀವನಗೊಳಿಸಲು ಇರುವ ಸರಪಳಿ ಕೊಂಡಿಗಳು. ನಾನು ನನ್ನ ಅಂಕಣಕ್ಕೆ ‘ಅಗೇಡಿ’ ಎಂಬ ಪದ ಬಳಸಿದಾಗ ಬಹಳಷ್ಟು ಮಂದಿ ಅದರ ಅರ್ಥವೇನು ಎಂದು ಕೇಳಿದ್ದರು. ಅಗೇಡಿ ಅಂದರೆ ಸಸಿ ಮಡಿ, ನರ್ಸರಿ! ನಾನು ಗಮನಿಸಿದ ಹಾಗೆ ಶಿವರಾಮ ಕಾರಂತರು ಮತ್ತು ತೇಜಸ್ವಿ ಅದನ್ನು ಬಳಸಿದ್ದಾರೆ. ಕಾರಂತರು ಬಳಸಿದ್ದು ವಿಶೇಷ ಅಲ್ಲ, ಅವರು ಬರೆದ ಕಾಲಕ್ಕೆ ಕುಂದಾಪುರ ಸುತ್ತ ಮುತ್ತಲು ಆ ಪದ ಚಾಲ್ತಿಯಲ್ಲಿತ್ತು. ತೇಜಸ್ವಿಯವರು ಮಾಯಾಲೋಕದಲ್ಲಿ ಈ ಪದ ಬಳಸಿದ್ದಾರೆ. ಅದು ಅವರ ಸ್ಮತಿ ಕೋಶದಿಂದ ಬಂತಾ, ಇಲ್ಲಾ ಸ್ಥಳೀಯವಾಗಿ ಚಾಲ್ತಿಯಲ್ಲಿದೆಯೇ ಎಂದು ಅವರನ್ನು ಕೇಳಲು ಸಾಧ್ಯವಾಗಲಿಲ್ಲ. ಕಲ್ಕುಳಿ ವಿಠಲ ಹೆಗ್ಡೆಯವರು ಮಲೆನಾಡಿನ ಭತ್ತದ ಕೃಷಿಯ ಪದಭಂಡಾರವನ್ನು ಲೀಲಾಜಾಲವಾಗಿ ಹೇಳಿ ನನ್ನನ್ನು ಕಕ್ಕಾವಿಕ್ಕಿಯಾಗಿಸಿದ್ದರು. ಈ ಪದಗಳೆಂದರೆ ಕೇವಲ ಪದಗಳಲ್ಲ. ಸಾಂಸ್ಕೃತಿಕ ಸ್ಮತಿಯ ಭಾಗ. ವಿಸ್ಮತಿಗೆ ಸಂದು ಹೋದಂತೆ ಕಾಣುವ ಈ ಪದಗಳನ್ನು, ನುಡಿಗಟ್ಟುಗಳನ್ನು ಪುನರುಜ್ಜೀವಿಸುವುದೆಂದರೆ ಒಂದು ಲೋಕ ದೃಷ್ಟಿ, ಒಳನೋಟಗಳನ್ನು ಮರಳಿ ಪಡೆಯುವುದು ಎಂದರ್ಥ.
ಈ ನಿಘಂಟನ್ನು ಸುಮ್ಮನೆ ರ್ಯಾಂಡಮ್ ಆಗಿ ಪುಟ ತಿರುವಿದಾಗ ಸಿಗುವ ಪದಗಳೂ ಒಂದು ವಿಶಿಷ್ಟ ಲೋಕವನ್ನೇ ಅನಾವರಣಗೊಳಿಸುತ್ತವೆ. ಈ ಪದಗಳನ್ನು ನೋಡಿ:
ಅಡ್ಡ್ ಮೋಳ್ಸ್ (ಕ್ರಿ): ಗದ್ದೆ ಉಳುವಾಗ ಸುತ್ತು ಪೂರ್ಣಗೊಳಿಸುವ ಮೊದಲೇ ಎತ್ತು/ಕೋಣವನ್ನು ಅಡ್ಡ ತಿರುಗಿಸುವುದು; (ವ್ಯಂಗ್ಯಾರ್ಥದಲ್ಲಿ) ಭರವಸೆ ಕೊಟ್ಟು ಬಳಿಕ ನಿರಾಕರಿಸು; ವಿಶ್ವಾಸ ದ್ರೋಹ ಮಾಡು
ಕಂಚಿ: ಮದುವೆಯಲ್ಲಿ ಮದುಮಕ್ಕಳಿಗೆ ಕೊಟ್ಟಹಣದ ರೂಪದ ಉಡುಗೊರೆಯನ್ನು ಸಂಗ್ರಹಿಸಿಡಲು ಇಡುವ ಪಾತ್ರೆ; ಚಿತೆ ಹೂಡಲು ನೆಲದಲ್ಲಿ ಹೊಂಡ ತೋಡಿದ ನಂತರ ಅದರ ಮೇಲೆ ಅಡ್ಡಕ್ಕೆ ಇಡುವ 6-7 ಅಡಿ ಉದ್ದದ ದಪ್ಪಗಾತ್ರದ ಮರದ ತುಂಡುಗಳು
ಗುಂಬ್ರಿ(ನಾ): ಹಾರಿಕೆಯ ಮಾತು; ಸುಳ್ಳು ಮಾತು,ಬೊಗಳೆ
ಕಂಚಿ ಎಂಬ ಪದ ನೋಡಿ; ಒಂದೇ ಪದ, ಮದುವೆಯ ಉಡುಗೊರೆ ಪಾತ್ರವಾಗಿಯೂ, ಸತ್ತಾಗ ಚಿತೆ ತಯಾರು ಮಾಡುವ ಪರಿಕರದ ಪದವಾಗಿಯೂ ಬಳಕೆಯಾಗುವಲ್ಲೇ ಒಂದು ಲೋಕ ದೃಷ್ಟಿಯ ವ್ಯಂಗ್ಯ ಅಡಗಿದೆ. ಈ ನಿಘಂಟಿನ ಪುಟಪುಟಗಳಲ್ಲೂ ಇಂತಹ ಒಂದು ಕಲಿಕೆಯ ಭಂಡಾರ ಇದೆ. ನಿಘಂಟು ಒಂದು ನಮ್ಮ ಅರಿವನ್ನು ಹೆಚ್ಚಿಸುವ ಕೃತಿಯಾಗಿಯೂ ಇರುತ್ತದೆ ಎಂಬ ಪ್ರಜ್ಞೆ ನಮ್ಮಲ್ಲಿ ಹೊರಟು ಹೋಗಿದೆ!!
ಇನ್ನೊಂದೆಡೆ, ಸಾಂಸ್ಥಿಕವಾಗಿ ನಾಡು-ನುಡಿ, ಶಿಕ್ಷಣದ ಉಸ್ತುವಾರಿಯ ಯಜಮಾನಿಕೆ ಪಡೆದಿರುವ ಕರ್ನಾಟಕದ ವಿಶ್ವವಿದ್ಯಾನಿಲಯಗಳು, ಸಂಸ್ಥೆಗಳು ಹೇಗಿವೆಯೆಂದರೆ ಹೊಸ ಪದಗಳನ್ನು ಸೇರಿಸಲೂ ಒಂದು ಯುಗ ತೆಗೆದುಕೊಳ್ಳುವ ಮಟ್ಟಿಗೆ ಇವೆ. ಅದೇ ಇಂಗ್ಲಿಷ್‌ನ ಪದಕೋಶಗಳು ಪ್ರತೀ ವರ್ಷ ಎಷ್ಟು ಚುರುಕಾಗಿ ಹೊಸ ಪದಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತವೆಂದರೆ ಚಟ್ನಿ ಇತ್ಯಾದಿ ಇಂಗ್ಲಿಷ್ ಪದಕೋಶ ಸೇರಿ ಹತ್ತಾರು ವರ್ಷ ಸಂದಿವೆ.
ಬದ್ಧತೆ ಎಂಬುದು ಬೌದ್ಧಿಕ ಚುರುಕುತನ ಮತ್ತು ವ್ಯವಸ್ಥಿತ ಕೆಲಸದಿಂದ ಅರ್ಥಪೂರ್ಣವಾಗುವುದು. ನಮ್ಮ ಸಂಸ್ಥೆಗಳು ಈ ಅರ್ಥದಲ್ಲಿ ಅಸಂಗತಗೊಂಡಿವೆ. ಈ ನಿಘಂಟು ನೋಡುತ್ತಿದ್ದಂತೆ ಗಮನಿಸಬೇಕಾದ ಅಂಶವೆಂದರೆ ಸ್ಥಳೀಯ ಸಂಸ್ಕೃತಿಯೊಂದು ಯಜಮಾನ ಸಂಸ್ಕೃತಿಯ ವಿರುದ್ಧ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಇಂತಹದ್ದನ್ನು ಹಡೆಯುತ್ತದೆ. ಈ ಸ್ಥಳೀಯತೆಯ ಹೆಮ್ಮೆಯೇ ಸಾಂಸ್ಕೃತಿಕ ಯಜಮಾನಿಕೆ ಮತ್ತು ಕೇಂದ್ರೀಕರಣವನ್ನು ತಡೆಯುವ ಅಸ್ತ್ರಗಳು.
ಜನಪದ ಸಂಸ್ಕೃತಿಯನ್ನು ಹೇಗೆ ವೈದಿಕ ಸಂಸ್ಕೃತಿ ಆಪೋಶನ ತೆಗೆದುಕೊಂಡಿದೆ ಎಂಬುದಕ್ಕೆ ದಕ್ಷಿಣ ಕನ್ನಡ/ ಉಡುಪಿ ಜಿಲ್ಲೆಗಳಿಗಿಂತ ದೊಡ್ಡ ಉದಾಹರಣೆ ಬೇಡ. ಕೃಷಿ ಲೋಕದ ಪಲ್ಲಟಕ್ಕೆ ಈ ಪದಗಳ ಸ್ಥಳಾಂತರಕ್ಕಿಂತ ದೊಡ್ಡ ಉದಾಹರಣೆ ಬೇಡ. ಹಾಗೇ ಸಾಂಸ್ಕೃತಿಕ ಆಚರಣೆಗಳೂ ಯಜಮಾನ ಸಂಸ್ಕೃತಿಯ ಒತ್ತಡಕ್ಕೆ ಬಲಿಯಾಗಿರುವುದನ್ನೂ ಇಂತಹ ಪದಪಲ್ಲಟಗಳಿಂದ ಗಮನಿಸಬಹುದು.
ನಮ್ಮ ರಾಜ್ಯದಲ್ಲಿ ಅವಿಭಜಿತ ದ.ಕ. ಮತ್ತು ಕೊಡಗು-ಎರಡೇ ಜಿಲ್ಲೆಗಳಲ್ಲಿ ಐದು ಉಪಭಾಷಾ ಅಕಾಡೆಮಿಗಳಿದ್ದಾವೆ. ಈ ಪ್ರದೇಶ ಮತ್ತು ಸಮುದಾಯಗಳು ಆರ್ಥಿಕವಾಗಿ ದಾಢಸಿ ಆಗಿರುವ ಕಾರಣ ಇಂತಹ ಒಂದು ಸಾಂಸ್ಥಿಕ ವೇದಿಕೆಯನ್ನು ಹಕ್ಕೊತ್ತಾಯದ ಮೂಲಕ ಪಡೆಯಲು ಶಕ್ತವಾದವು. ಆದರೆ ನಮ್ಮಲ್ಲಿ ನೂರಾರು ಅಶಕ್ತ ಸಮುದಾಯಗಳಿದ್ದಾವೆ. ಅವುಗಳು ಬಲು ವಿಸ್ತಾರ, ಆಳದ ಸಾಂಸ್ಕೃತಿಕ ಸಂಪತ್ತಿನ ವಾರಸುದಾರರಾಗಿದ್ದರೂ ಅವುಗಳ ಕಡೆಗೆ ಯಾರೂ ಕಣ್ಣೆತ್ತಿಯೂ ನೋಡಿಲ್ಲ. ಸ್ವತಃ ಇಂತಹ ಒಂದು ಕೆಲಸಕ್ಕೆ ಕೈ ಹಾಕುವ ಚೈತನ್ಯವೂ ಅವುಗಳಿಗೆ ಇಲ್ಲ. ಈ ಕುಂದಾಪ್ರ ನಿಘಂಟಿನ ಸಾಹಸ ಅಂತಹ ಸಮುದಾಯಗಳ ಸಾಂಸ್ಕೃತಿಕ ಅಭಿವ್ಯಕ್ತಿಯ ದಾಖಲೀಕರಣಕ್ಕೆ ನಾಂದಿಯಾಗಬೇಕು.
ಬಲು ದೊಡ್ಡ ಬಹು ಅಧ್ಯಯನಗಳ ಬಾಗಿಲೊಂದನ್ನು ಈ ಕೋಶದ ಸಂಪಾದಕರು ತೆರೆದಿದ್ದಾರೆ. ಸ್ವಯಂಪ್ರೇರಿತ ಜಡತ್ವದಲ್ಲಿ ಕೂತಿರುವ ಕನ್ನಡದ ಪಂಡಿತ ವರ್ಗ ಇಂತಹ ಪ್ರಯತ್ನಗಳನ್ನು ಕಂಡಾದರೂ ಕ್ರಿಯಾಶೀಲತೆ ಪಡೆಯಬೇಕು. ನಾವು ಉದಾಸೀನದಲ್ಲಿ ದಿನಗಳೆಯುತ್ತಿದ್ದರೆ ಅಂಚಿಗೆ ಸರಿದ ಸಮುದಾಯಗಳಲ್ಲಿ ಹುದುಗಿ ಕೂತಿರುವ ಸಾಂಸ್ಕೃತಿಕ ಸಿರಿವಂತಿಕೆ, ಆಧುನಿಕತೆ ಮತ್ತು ಯಜಮಾನ ಭಾಷೆಯ ಅವಳಿ ದಾಳಿಗಳಿಂದ ನಾಶವಾಗುವ ದಿನ ದೂರವಿಲ್ಲ.