ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಬೈಕ್, ಆಟೋ ತಳ್ಳಿ ವಿನೂತನ ಪ್ರತಿಭಟನೆ
ಬೆಂಗಳೂರು, ಫೆ.6: ದೇಶದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆಯೆಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ಘಟಕದ ವತಿಯಿಂದ ಬೈಕ್ ಮತ್ತು ಆಟೋ ತಳ್ಳುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಶನಿವಾರ ನಗರದ ನರಸಿಂಹರಾಜ ಚೌಕದಿಂದ (ಹಡ್ಸನ್ ವೃತ್ತ) ಮೈಸೂರು ಬ್ಯಾಂಕ್ ವೃತ್ತದವರೆಗೆ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾಗಳನ್ನು ತಳ್ಳಿಕೊಂಡು ಹೋಗುವ ಮೂಲಕ ಪ್ರತಿಭಟನೆ ನಡೆಸಿದ ಕೆಆರ್‍ಎಸ್ ಪಕ್ಷದ ಕಾರ್ಯಕರ್ತರು, ದೇಶದ ಜನಸಾಮಾನ್ಯರನ್ನು ಇಂತಹ ದುಸ್ಥಿತಿಗೆ ತಳ್ಳಿದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಾಚಿಕೆ ಆಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತರ್‍ರಾಷ್ಟ್ರೀಯ ಮಾರಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸ್ಥಿರವಾಗಿ ಕೆಳ ಮಟ್ಟದಲ್ಲೇ ಇದೆ, ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಬಕಾರಿ ಸುಂಕ, ತೆರಿಗೆಯನ್ನು ನಿರಂತರವಾಗಿ ಹೆಚ್ಚಳ ಮಾಡಿ ಜನರ ಬದುಕನ್ನು ತೀವ್ರವಾಗಿ ದುರ್ಭರ ಮಾಡಿದ್ದಾರೆ ಎಂದು ಕೆಆರ್‍ಎಸ್ ಬೆಂಗಳೂರು ಘಟಕದ ಅಧ್ಯಕ್ಷ ಮಂಜುನಾಥ್ ಖಂಡಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾಗಿದ್ದ ಸರಕಾರಗಳು, ಜನರನ್ನೇ ಸುಲಿದು ತಿನ್ನುತ್ತಿವೆ. ಖಜಾನೆಯಲ್ಲಿ ಹಣವಿಲ್ಲವೆನ್ನುವ ಸರಕಾರಗಳು, ತಮ್ಮ ಖರ್ಚು ವಚ್ಚಕ್ಕೆ ಕಡಿವಾಣ ಹಾಕುವ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಅಭಿವೃದ್ಧಿ ಕೆಲಸಗಳಿಗೆ ತಡೆ ಹಾಕಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಅವಶ್ಯಕವಿಲ್ಲದ ನಿಗಮ ಮಂಡಳಿಗಳಿಗೆ ನೇಮಕ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬದಲು ಮಿತಿ ಮೀರಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರಕಾರಕ್ಕೆ ಜನರ ಪರಿಸ್ಥಿತಿ ಏನಾದರೂ ಪರವಾಗಿಲ್ಲ, ನಾವು ಮಾತ್ರ ಪೆಟ್ರೋಲ್ ಡೀಸೆಲ್ ದರವನ್ನು ಶತಕ ಮುಟ್ಟಿಸುತ್ತೇವೆ ಎಂದು ಪಣ ತೊಟ್ಟಿದ್ದ ಹಾಗೆ ಕಾಣಿಸುತ್ತಿದೆ. ಅಪಾರ ಪ್ರಮಾಣದ ತೆರಿಗೆ ಸಂಗ್ರಹಿಸಲಾಗಿದೆ, ಆದರೆ ಈ ಹಣವೆಲ್ಲ ಎಲ್ಲಿ ಹೋಯಿತು, ಯಾರ ಮನೆ ಸೇರಿದೆ" ಎಂಬುದನ್ನು ಸಾರ್ವಜನಿಕರು ಪ್ರಶ್ನಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.