ಗ್ರಾನ್‌ಸ್ಲಾಮ್ ಟೂರ್ನಿಯ ಪ್ರಧಾನ ಸುತ್ತಿಗೆ ಸ್ಥಾನ ಪಡೆದ ಭಾರತದ 5ನೇ ಆಟಗಾರ್ತಿ ಅಂಕಿತಾ ರೆನಾ

Update: 2021-02-08 05:13 GMT

ಮೆಲ್ಬೋರ್ನ್ : ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಅಂಕಿತಾ ರೈನಾ ಆಡುವ ಅವಕಾಶ ಪಡೆದಿದ್ದಾರೆ. ಮುಕ್ತ ಟೆನಿಸ್ ಯುಗದಲ್ಲಿ ಗ್ರ್ಯಾನ್ ಸ್ಲಾಮ್ ನ ಪ್ರಧಾನ ಸುತ್ತಿನಲ್ಲಿ ಸ್ಥಾನ ಪಡೆದಿರುವ ಭಾರತದ ಐದನೇ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿಯು ಸೋಮವಾರ ಮೆಲ್ಬೋರ್ನ್‌ನಲ್ಲಿ ಆರಂಭ ವಾಗಲಿದೆ. ಮಹಿಳೆಯರ ಸಿಂಗಲ್ಸ್ ನ ಪ್ರಧಾನ ಸುತ್ತಿಗೇರುವುದರಿಂದ ವಂಚಿತರಾಗಿರುವ ರೈನಾ ರೊಮಾನಿಯದ ಮಿಹೇಲಾ ಬುಝಾರ್ನೆಕು ಅವ ರೊಂದಿಗೆ ಸಹಿ ಹಾಕಿದ್ದು, ನೇರ ಪ್ರವೇಶ ಪಡೆದಿದ್ದಾರೆ.

ನಿರುಪಮಾ ಮಂಕಡ್(1971), ನಿರುಪಮಾ ವೈದ್ಯನಾಥನ್(1998), ಸಾನಿಯಾ ಮಿರ್ಝಾ ಹಾಗೂ ಭಾರತೀಯ-ಅಮೆರಿಕನ್ ಶಿಖಾ ಒಬೆರಾಯ್(2004)ದೇಶದ ಪರ ಗ್ರ್ಯಾನ್ ಸ್ಲಾಮ್ ನ ಪ್ರಧಾನ ಸುತ್ತಿನಲ್ಲಿ ಸ್ಪರ್ಧಿಸಿದ್ದರು.

 ಅಂಕಿತಾ ಆರು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಸಾನಿಯಾ ಬಳಿಕ ಪ್ರಮುಖ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಸ್ಪರ್ಧಿಸುತ್ತಿರುವ ಭಾರತದ ಎರಡನೇ ಆಟಗಾರ್ತಿಯಾಗಿದ್ದಾರೆ.

 ನಿರುಪಮಾ 1998ರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಸಿಂಗಲ್ಸ್ ಗ್ರ್ಯಾನ್ ಸ್ಲಾಮಿನ ಪ್ರಮುಖ ಸುತ್ತಿನಲ್ಲಿ ಆಡಿದ್ದರು. ನಿರುಪಮಾ ಮಂಕಡ್ 1971ರ ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ ಆನಂದ್ ಅಮೃತರಾಜ್ ಅವರೊಂದಿಗೆ ಮಿಶ್ರ ಡಬಲ್ಸ್ ಆಡಿದ್ದರು. 2004ರ ಅಮೆರಿಕನ್ ಓಪನ್‌ನಲ್ಲಿ ಸ್ಪರ್ಧಿಸಿದ್ದ ಶಿಖಾ ಅವರು ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದರು.

‘‘ಇದು ಗ್ರ್ಯಾನ್ ಸ್ಲಾಮ್ ನ ಮೊದಲ ಪ್ರಮುಖ ಸುತ್ತು. ಸಿಂಗಲ್ಸ್ ಆಗಲಿ ಅಥವಾ ಡಬಲ್ಸ್ ಆಗಲಿ ನಾನು ಅದರಲ್ಲಿ ಆಡುವೆ. ಇದೊಂದು ನನ್ನ ಪಾಲಿಗೆ ವಿಶೇಷ. ವರ್ಷಗಳ ಕಾಲ ನಡೆಸಿರುವ ಕಠಿಣ ಶ್ರಮ ಈಗ ಫಲ ನೀಡಿದೆ. ಕಠಿಣ ಶ್ರಮಮಾತ್ರವಲ್ಲ ಲೆಕ್ಕವಿಲ್ಲದ್ದಷ್ಟು ಜನರ ಬೆಂಬಲ ಹಾಗೂ ಆಶೀರ್ವಾದ ಬಲದಿಂದ ನಾನು ಇಲ್ಲಿ ತನಕ ತಲುಪಿರುವೆ. ಇದನ್ನು ನಾನು ಮರೆಯಲಾರೆ’’ ಎಂದು ಪಿಟಿಐ ಸುದ್ದಿಸಂಸ್ಥೆಗೆ ಅಂಕಿತಾ ತಿಳಿಸಿದ್ದಾರೆ.

ಭಾರತದ ನಾಲ್ವರು ಟೆನಿಸ್ ತಾರೆಯರ ಸ್ಫರ್ಧೆ: ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಅಂಕಿತಾ ಸಹಿತ ಭಾರತದ ನಾಲ್ವರು ಟೆನಿಸ್ ತಾರೆಯರು ಸ್ಪರ್ಧಿಸಲಿದ್ದಾರೆ.

ಸುಮಿತ್ ನಾಗಲ್ ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಿದರೆ, ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ತಮ್ಮ ಡಬಲ್ಸ್ ಜೊತೆಗಾರರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಆಡಲಿದ್ದಾರೆ. ಬೋಪಣ್ಣ ಜಪಾನ್‌ನ ಜೊತೆಗಾರ ಬೆನ್ ಮೆಕ್ಲಾಚ್ಲಾನ್ ಅವರೊಂದಿಗೆ ಸ್ಪರ್ಧಿಸಿದರೆ, ಶರಣ್ ಅವರು ಸ್ವೀಡನ್ ನ ಇಗೊರ್ ಝೆಲೆನಾಯ್ ಅವರೊಂದಿಗೆ ಡಬಲ್ಸ್ ಪಂದ್ಯವನ್ನಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News