ರಿಹಾನ್ನ ಟ್ವೀಟ್ ನಂತರ ಭಾರತೀಯ ಸೆಲೆಬ್ರಿಟಿಗಳ ಟ್ವೀಟ್ ಕುರಿತು ತನಿಖೆ ನಡೆಸುವುದಾಗಿ ಹೇಳಿದ ಮಹಾರಾಷ್ಟ್ರ ಸಚಿವ

Update: 2021-02-08 10:37 GMT

ಹೊಸದಿಲ್ಲಿ: ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅಂತಾರಾಷ್ಟ್ರೀಯ ಸೆಲಬ್ರಿಟಿಗಳು ಟ್ವೀಟ್ ಮಾಡಿದ ನಂತರ ಭಾರತ ಸರಕಾರ ರೈತ ಹೋರಾಟವನ್ನು ಪರಿಸ್ಥಿತಿಯನ್ನು ನಿಭಾಯಿಸಿದ ಕುರಿತು  ಕೇಳಿ ಬಂದ ವ್ಯಾಪಕ ಆಕ್ರೋಶದ ಬೆನ್ನಲ್ಲೇ ಭಾರತದ ಹಲವು ಚಿತ್ರ ತಾರೆಯರು ಹಾಗೂ ಕ್ರಿಕೆಟಿಗರು ಸರಕಾರವನ್ನು ಬೆಂಬಲಿಸಿ ಮಾಡಿದ ಟ್ವೀಟ್‍ಗಳ ಕುರಿತು ತನಿಖೆ ನಡೆಸುವುದಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.

"ಭಾರತೀಯ ಸೆಲೆಬ್ರಿಟಿಗಳಿಂದ ಒಂದೇ ರೀತಿಯ ಪೋಸ್ಟ್ ಗಳು ಏಕಕಾಲಕ್ಕೆ  ಹೊರಬಂದಿದ್ದವೆಂದು ತಿಳಿದು ಬಂದಿದೆ.  ಇದು ಏಕಾಯಿತೆಂದು ತನಿಖೆ ನಡೆಸಲಾಗುವುದು,'' ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಮಾಡಿದ ಮನವಿಗಳಿಗೆ ಪ್ರತಿಕ್ರಿಯಿಸಿದ ದೇಶಮುಖ್ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸರಕಾರದ ನಿಲುವು ಬೆಂಬಲಿಸಿ ಪೋಸ್ಟ್ ಮಾಡಲು ಬಿಜೆಪಿಯಿಂದ ಸೆಲೆಬ್ರಿಟಿಗಳು ಒತ್ತಡದಲ್ಲಿದ್ದರೇ ಎಂಬ ಕುರಿತು ತನಿಖೆ ನಡೆಸಬೇಕೆಂದು  ಕಾಂಗ್ರೆಸ್ ನಾಯಕರು ಕೋರಿದ್ದರು. ಕೋವಿಡ್ ಪಾಸಿಟಿವ್ ಸೋಂಕು ದೃಢಫಟ್ಟಿರುವುದರಿಂದ ಐಸೊಲೇಶನ್‍ನಲ್ಲಿರುವ ಸಚಿವರ ಜತೆಗೆ ಕಾಂಗ್ರೆಸ್ ನಾಯಕರು ಆನ್ಲೈನ್ ಸಭೆಯನ್ನೂ ನಡೆಸಿದ್ದಾರೆ. ಹೆಚ್ಚಿನ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್‍ಗಳಲ್ಲಿ `ಅಮಿಕೇಬಲ್' ಅಥವಾ ಸೌಹಾರ್ದಯುತ ಪದ  ಬಳಕೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್  ಹೇಳಿದರು.

"ಅಕ್ಷಯ್ ಕುಮಾರ್ ಹಾಗೂ ಸೈನಾ ನೆಹ್ವಾಲ್ ಒಂದೇ ರೀತಿಯ ಟ್ವೀಟ್ ಮಾಡಿದ್ದರೆ, ನಟ ಸುನೀಲ್ ಶೆಟ್ಟಿ ತಮ್ಮ ಪೋಸ್ಟ್ ನಲ್ಲಿ ಬಿಜೆಪಿ ನಾಯಕರೊಬ್ಬರನ್ನು ಟ್ಯಾಗ್ ಮಾಡಿದ್ದಾರೆ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯಾದರೂ ಈ ಜನರಿಗೆ ಸರಕಾರದಿಂದ ಟ್ವೀಟ್ ಮಾಡುವಂತೆ ಒತ್ತಡ ಹೇರಲಾಗಿತ್ತೇ ಎಂಬುದು ತಿಳಿಯಬೇಕಿದೆ,'' ಎಂದು ಸಾವಂತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News