ಸಂಪುಟ ವಿಸ್ತರಣೆ ವಿಳಂಬ: ಬಿಜೆಪಿಯನ್ನು ಮತ್ತೊಮ್ಮೆ ದೂಷಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

Update: 2021-02-08 13:26 GMT

ಪಾಟ್ನಾ: ಸಂಪುಟ ವಿಸ್ತರಣೆ ವಿಳಂಬಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೈತ್ರಿಪಕ್ಷ ಬಿಜೆಪಿಯನ್ನು ಮತ್ತೊಮ್ಮೆ ದೂಷಿಸಿದ್ದಾರೆ.  ಬಿಜೆಪಿ ಕೋಟಾದಿಂದ ಯಾರೆಲ್ಲಾ ಮಂತ್ರಿಗಳಾಗುತ್ತಾರೆಂಬ ಕುರಿತಂತೆ ನಾನು ಈ ತನಕ ಪಟ್ಟಿಯನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

ಪಾಟ್ನಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಬಿಜೆಪಿ ಪಟ್ಟಿ ಕೈಸೇರಿದ ತಕ್ಷಣ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು.

ಬಿಜೆಪಿ ಕೋಟಾದಿಂದ ಮಂತ್ರಿಯಾಗುವವರ ಪಟ್ಟಿಯನ್ನು ಒದಗಿಸದೇ ಬಿಜೆಪಿ ಸಂಪುಟ ವಿಸ್ತರಣೆಯನ್ನು ವಿಳಂಬ ಮಾಡುತ್ತಿದೆ ಎಂದು ನಿತೀಶ್ ಕುಮಾರ್ ಈ ಹಿಂದೆಯೂ ಹೇಳಿದ್ದರು.

ಬಿಹಾರದ ನಾಯಕರು ಕಳೆದ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿ ಬಿಹಾರ ಸರಕಾರದಲ್ಲಿ ಯಾರೆಲ್ಲ ಸಚಿವರಾಗುತ್ತಾರೆಂಬ ಬಗ್ಗೆ ಶಾಸಕರ ಹೆಸರುಗಳನ್ನುಅಂತಿಮಗೊಳಿಸಿದ್ದರು. ಆದರೆ ವಿಷಯ ಮಾತ್ರ ಇನ್ನೂ ಇತ್ಯರ್ಥವಾಗಿಲ್ಲ.

 ಜಹಾನ್ ಜಾರ್ಪುರ ಶಾಸಕ ನಿತೀಶ್ ಮಿಶ್ರಾ ಹಾಗೂ ಎಂಎಲ್ ಸಿ ಸಾಮ್ರಾಟ್ ಚೌಧರಿಯವರನ್ನು ನಿತೀಶ್ ಕುಮಾರ್ ಸಂಪುಟದಲ್ಲಿ ಸಚಿವರನ್ನಾಗಿ ಮಾಡಲು ಬಿಜೆಪಿ ಬಯಸಿದೆ. ಆದರೆ, ಕುಮಾರ್ ಅವರು ಸಾಮ್ರಾಟ್ ಸಂಪುಟ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮ್ರಾಟ್ ಈ ಹಿಂದೆ ಜೆಡಿಯು ನಲ್ಲಿದ್ದರು. 2014ರಲ್ಲಿ ನಿತೀಶ್ ಮಿಶ್ರಾ ಜೊತೆಗೆ ಜೆಡಿಯುವನ್ನು ತ್ಯಜಿಸಿದ್ದರು. ಜಿತನ್ ರಾಮ್ ಅವರೊಂದಿಗೆ ಸೇರಿಕೊಂಡಿದ್ದರು.

ಪ್ರಸ್ತುತ ಸಂಪುಟದಲ್ಲಿ 22 ಸಚಿವ ಸ್ಥಾನ ಖಾಲಿ ಇದೆ.ಫೆ.19ರಂದು ಬಜೆಟ್ ಅಧಿವೇಶನದ ಮೊದಲು ಸಂಪುಟ ವಿಸ್ತರಣೆಯಾಗಲಿದೆ ಎಂದು ಬಿಜೆಪಿ ಹಾಗೂ ಜನತಾದಳ(ಸಂಯುಕ್ತ)ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News