ಉತ್ತರಾಖಂಡ ದುರಂತ: 31ಕ್ಕೇರಿದ ಸಾವಿನ ಸಂಖ್ಯೆ

Update: 2021-02-09 16:29 GMT

ಚಮೋಲಿ,ಫೆ.9: ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಇನ್ನೂ ಐದು ಶವಗಳು ಪತ್ತೆಯಾಗುವುದರೊಂದಿಗೆ ಉತ್ತರಾಖಂಡದಲ್ಲಿ ರವಿವಾರ ಬೃಹತ್ ನೀರ್ಗಲ್ಲು ಕುಸಿದು ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೇರಿದೆ. ಸುಮಾರು 175 ಜನರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಹಲವಾರು ರಕ್ಷಣಾ ತಂಡಗಳು ಚಮೋಲಿಯಲ್ಲಿನ ತಪೋವನ ವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ ಕನಿಷ್ಠ 30 ಕಾರ್ಮಿಕರ ಜೀವರಕ್ಷಣೆಗಾಗಿ ಸಮರೋಪಾದಿಯಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಕಾರ್ಮಿಕರು 12 ಅಡಿ ಎತ್ತರ ಹಾಗೂ 2.5ಕಿ.ಮೀ.ಉದ್ದದ ‘ಹೆಡ್ ರೇಸ್ ಟನೆಲ್ ’ನಲ್ಲಿ ಸಿಕ್ಕಿಕೊಂಡಿದ್ದಾರೆ.

 ಕೆಸರನ್ನು ತೆಗೆಯುವ ಕಾರ್ಯಾಚರಣೆ ಸೋಮವಾರ ರಾತ್ರಿಯಿಡೀ ಮುಂದುವರಿದಿದ್ದು, ಸುರಂಗ ಪ್ರವೇಶದ 120 ಮೀ.ಗಳಷ್ಟು ಭಾಗವನ್ನು ತೆರವುಗೊಳಿಸಲಾಗಿದೆ. ಸುರಂಗದ ಆಳಕ್ಕೆ ಪ್ರವೇಶಿಸಲು ಸಾಧ್ಯವಾಗುವುದನ್ನೇ ಐಟಿಬಿಪಿ ಸಿಬ್ಬಂದಿಗಳು ಕಾಯುತ್ತಿದ್ದಾರೆ ಎಂದು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್‌ನ ವಕ್ತಾರ ವಿವೇಕ್ ಕುಮಾರ ಪಾಂಡೆ ತಿಳಿಸಿದರು.

ಆದರೆ ಸುರಂಗದ ಒಳಗಿದ್ದವರೊಡನೆ ಯಾವುದೇ ಸಂಪರ್ಕ ಸಾಧಿಸಲು ರಕ್ಷಣಾ ತಂಡಗಳಿಗೆ ಸಾಧ್ಯವಾಗುತ್ತಿಲ್ಲ. ಒಳಗಿದ್ದವರು ಜೀವಂತವಾಗಿರುವ ಬಗ್ಗೆ ನಾವು ಆಶಾಭಾವನೆಯನ್ನು ಹೊಂದಿದ್ದೇವೆ ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದರು.

ಸುಮಾರು 1,500 ಮೀಟರ್‌ನ ಸುರಂಗವು ರಕ್ಷಣಾ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದೆ. ರವಿವಾರ ನಂದಾದೇವಿ ನೀರ್ಗಲ್ಲು ಪರ್ವತವು ಭಾಗಶಃ ಕುಸಿದಿದ್ದರಿಂದ ಹಿಮಪಾತವು ಅಲಕನಂದಾ ನದಿ ವ್ಯವಸ್ಥೆಯಲ್ಲಿ ಭಾರೀ ಮಹಾಪೂರವನ್ನುಂಟು ಮಾಡಿತ್ತು.

 ಮಂಗಳವಾರ ಬೆಳಿಗ್ಗೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ರವಿವಾರ ಸಂಜೆ ತಪೋವನ ಯೋಜನೆಯ ಸಣ್ಣ ಸುರಂಗವೊಂದರಿಂದ ರಕ್ಷಿಸಲಾಗಿದ್ದ 12 ಕಾರ್ಮಿಕರನ್ನು ಜೋಶಿಮಠದಲ್ಲಿಯ ಐಟಿಬಿಪಿ ಆಸ್ಪತ್ರೆಯಲ್ಲಿ ಭೇಟಿಯಾದರು.

ಸುಮಾರು 35 ಜನರು ಸುರಂಗದೊಳಗೆ ಸಿಕ್ಕಿಕೊಂಡಿದ್ದಾರೆ. ಸುರಂಗಕ್ಕೆ ರಂಧ್ರ ಕೊರೆದು ಹಗ್ಗದ ಮೂಲಕ ಅವರನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದರು.

 ಐಟಿಬಿಪಿ ಮತ್ತು ಎನ್‌ಆರ್‌ಡಿಎಫ್ ಸಿಬ್ಬಂದಿಗಳೊಂದಿಗೆ ಸೇನೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಗಳೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News