ಗಂಭೀರ ಅಪರಾಧ ಪ್ರಕರಣ: ಆರೋಪಿಗೆ ಗುಂಡೇಟು

Update: 2021-02-12 13:02 GMT

ಬೆಂಗಳೂರು, ಫೆ.12: ದರೋಡೆ ಸೇರಿದಂತೆ ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಇಲ್ಲಿನ ಯಲಹಂಕ ಉಪನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆಲಮಂಗಲದ ಇಮ್ರಾನ್(23) ಬಂಧಿತ ಆರೋಪಿಯಾಗಿದ್ದು, ಗುಂಡೇಟಿನಿಂದ ಗಾಯಗೊಂಡು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು, ಇಮ್ರಾನ್ ಜೊತೆಯಲ್ಲಿದ್ದ ಸಹಚರ ರಂಜಿತ್ ಎಂಬಾತನನ್ನ ಬಂಧಿಸಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಯಲಹಂಕ ಉಪನಗರದ ಗಣೇಶ ದೇವಾಲಯದ ಬಳಿಯಲ್ಲಿ ಗುರುವಾರ ಶಬರೀಶ್‍ನನ್ನು ಯಲಹಂಕ ಉಪನಗರ ಠಾಣಾ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದು, ಆತನ ಜೊತೆಗಿದ್ದು ಪರಾರಿಯಾಗಿದ್ದ ಇಮ್ರಾನ್‍ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು.

ಶುಕ್ರವಾರ ಮುಂಜಾನೆ ಇಮ್ರಾನ್ ಹಾಗೂ ರಂಜಿತ್ ವಿದ್ಯಾರಣ್ಯಪುರದ ಕಳತೂರು ಫಾರ್ಮ್ ಬಳಿ ಅಡಗಿರುವ ಮಾಹಿತಿ ಮೇರೆಗೆ ಯಲಹಂಕ ಉಪನಗರ ಠಾಣಾಧಿಕಾರಿ ನೇತೃತ್ವದ ತಂಡ ತೆರಳಿದ್ದು ಪೊಲೀಸ್ ಜೀಪ್ ನೋಡಿದ ತಕ್ಷಣವೇ ಇಮ್ರಾನ್ ಪರಾರಿಯಾಗಲು ಯತ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಮುಖ್ಯಪೇದೆ ಮಧುಕುಮಾರ್ ಬಂಧಿಸಲು ಬೆನ್ನತ್ತಿ ಹೋದಾಗ ಚಾಕುವಿನಿಂದ ಹಲ್ಲೆ ನಡೆಸಿ ಓಡಿ ಹೋಗಲು ಮುಂದಾಗಿದ್ದಾರೆ. ಈ ವೇಳೆ ಶರಣಾಗುವಂತೆ ಸೂಚಿಸಿದಾಗ ರಂಜಿತ್ ಶರಣಾಗಿದ್ದು, ಇಮ್ರಾನ್ ಮತ್ತೆ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಠಾಣಾಧಿಕಾರಿ ಅರುಣ್‍ಕುಮಾರ್ ಬಂಧಿತನಾಗುವಂತೆ ಎಚ್ಚರಿಕೆ ನೀಡಿದ್ದಾರೆ.

ಆದರೂ ಹಲ್ಲೆ ಮುಂದುವರಿಸಿ ಪರಾರಿಯಾಗಲು ಯತ್ನಿಸಿದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಅದು ಕಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News