"16,000 ಕೋಟಿ ರೂ. ಮೌಲ್ಯದ ವಿಮಾನ ಖರೀದಿಸಲು ಹಣವಿದೆ; ರೈತರ ಬಾಕಿ ಪಾವತಿಗೆ ಹಣವಿಲ್ಲ"

Update: 2021-02-15 16:59 GMT

ಲಕ್ನೊ, ಫೆ.15: ಕೇಂದ್ರ ಸರಕಾರ 16,000 ಕೋಟಿ ರೂ. ನೀಡಿ ಎರಡು ವಿಮಾನ ಖರೀದಿಸಿದೆ. ಆದರೆ ಕಬ್ಬು ಬೆಳೆದ ರೈತರಿಗೆ ಪಾವತಿಯಾಗಬೇಕಿರುವ 15,000 ಕೋಟಿ ರೂ. ಹಣವನ್ನು ಪಾವತಿಸಲು ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

ದೇಶದ ಜನತೆ ಮೋದಿಯ ಮಾತುಗಳಲ್ಲಿ ವಿಶ್ವಾಸವಿರಿಸಿ ಎರಡು ಬಾರಿ ಅವರನ್ನು ಬೆಂಬಲಿಸಿದ್ದಾರೆ. ಆದರೆ ಎರಡೂ ಬಾರಿ ಮೋದಿ ವಿಶ್ವಾಸದ್ರೋಹ ಮಾಡಿದ್ದಾರೆ. ರೈತರ ಬಾಕಿ ಹಣ ಪಾವತಿಸದೆ, ತಮ್ಮ ವಿಶ್ವಪರ್ಯಟನೆಗೆ ಎರಡು ಅದ್ದೂರಿ ವಿಮಾನಗಳನ್ನು ಖರೀದಿಸಿದ್ದಾರೆ ಎಂದವರು ವಾಗ್ದಾಳಿ ನಡೆಸಿದರು.

ಕೇಂದ್ರ ಸರಕಾರದ ಕೃಷಿ ಕಾಯ್ದೆಗಳು ರೈತರ ಪರವಾಗಿಲ್ಲ, ಮೋದಿಯ ಬಂಡವಾಳಶಾಹಿ ಮಿತ್ರರ ಪರವಾಗಿದೆ. ದೇಶವು ಕುರುಡಾಗಿಲ್ಲ ಮತ್ತು ಕಳೆದ 7 ವರ್ಷಗಳಿಂದ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಪ್ರತಿಯೊಬ್ಬ ಪ್ರಜೆಯೂ ಗಮನಿಸುತ್ತಿದ್ದಾರೆ. ಮೋದಿಯವರ ಉದ್ಯಮಿ ಮಿತ್ರರು ಮಾಧ್ಯಮವನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ಚುನಾವಣೆಯನ್ನೂ ನಿರ್ವಹಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ಉತ್ತರಪ್ರದೇಶದ ಬಿಜ್ನೂರು ಜಿಲ್ಲೆಯಲ್ಲಿ ನಡೆದ ಕಿಸಾನ್ ಮಹಾಸಭಾದಲ್ಲಿ ಅವರು ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News