×
Ad

ಬೆಂಗಳೂರು: ಪ್ರೇಮ ವಿವಾಹಕ್ಕೆ ವಿರೋಧ; ಯುವತಿಯ ಕುಟುಂಬಸ್ಥರಿಂದ ಯುವಕನ ಕೊಲೆ

Update: 2021-02-16 21:13 IST

ಬೆಂಗಳೂರು, ಫೆ.16: ತೀವ್ರ ವಿರೋಧದ ನಡುವೆಯೂ ಯುವತಿಯು ಪ್ರೀತಿಸಿ ಮದುವೆಯಾಗಿದ್ದ ಯುವಕನನ್ನು ಕೊಲೆಗೈದಿರುವ ಪ್ರಕರಣವೊಂದು ಇಲ್ಲಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ನಗರದ ಎಲ್‍ಜಿ ರಾಮಣ್ಣ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಚೇತನ್(27) ಕೊಲೆಯಾದ ಯುವಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೇತನ್ ಮತ್ತು ಭೂಮಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧದ ನಡುವೆಯೂ ಎರಡು ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಇದರಿಂದ ಆಕ್ರೋಶಗೊಂಡು ಭೂಮಿಕಾ ಕುಟುಂಬಸ್ಥರಾದ ಆಕಾಶ್ ಮತ್ತು ನಂಜೇಶ್ ಎಂಬವರು ಮಂಗಳವಾರ ಚೇತನ್ ಮೇಲೆ ಗಂಭೀರ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಹುಡುಕಾಟ ನಡೆಸುತ್ತಿರುವುದಾಗಿ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News