ಭಾರತದೊಂದಿಗಿನ ಘರ್ಷಣೆಯಲ್ಲಿ ತನ್ನ ಸೈನಿಕರು ಮೃತಪಟ್ಟಿದ್ದಾರೆಂದು ಒಪ್ಪಿಕೊಂಡ ಚೀನಾ

Update: 2021-02-19 17:25 GMT

ಬೀಜಿಂಗ್,ಫೆ.19: ಕಳೆದ ವರ್ಷದ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಸಂಭವಿಸಿದ್ದ ಭೀಷಣ ಘರ್ಷಣೆಯಲ್ಲಿ ತನ್ನ ನಾಲ್ವರು ಸೈನಿಕರು ಸಾವನ್ನಪ್ಪಿದ್ದರು ಎನ್ನುವುದನ್ನು ಚೀನಿ ಸೇನೆಯು ಶುಕ್ರವಾರ ಕೊನೆಗೂ ಒಪ್ಪಿಕೊಂಡಿದೆ.

 ದೇಶದ ಪೂರ್ವ ಗಡಿಯನ್ನು ರಕ್ಷಿಸಿದ್ದಕ್ಕಾಗಿ ಇಬ್ಬರು ಅಧಿಕಾರಿಗಳು ಮತ್ತು ಮೂವರು ಸೈನಿಕರನ್ನು ಚೀನಿ ಮಿಲಿಟರಿ ಅಧಿಕಾರಿಗಳು ಗೌರವಿಸಿದ್ದಾರೆ,ಈ ಪೈಕಿ ನಾಲ್ವರಿಗೆ ಮರಣೋತ್ತರವಾಗಿ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ ಎಂದು ಸರಕಾರಿ ಸುದ್ದಿಸಂಸ್ಥೆ ಷಿನುವಾ ಚೀನಿ ಸೇನೆಯ ದೈನಿಕ ‘ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಡೇಲಿ’ಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಗಲ್ವಾನ್ ಸಂಘರ್ಷದಲ್ಲಿ ಮಾಡಿರುವ ತ್ಯಾಗಕ್ಕಾಗಿ ಕಾರಾಕೋರಂ ಪರ್ವತ ಪ್ರದೇಶದಲ್ಲಿ ನಿಯೋಜಿತರಾಗಿದ್ದ ಐವರು ಚೀನಿ ಮುಂಚೂಣಿ ಅಧಿಕಾರಿಗಳು ಮತ್ತು ಸೈನಿಕರನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಸೆಂಟ್ರಲ್ ಮಿಲಿಟರಿ ಕಮಿಷನ್ ಆಫ್ ಚೀನಾ ಗೌರವಿಸಿದೆ ಎಂದು ಪಿಎಲ್‌ಎ ಡೇಲಿ ಹೇಳಿದೆ.

ಬೆಟಾಲಿಯನ್ ಕಮಾಂಡರ್ ಕಮಾಂಡರ್ ಚೆನ್ ಹೊಂಗ್‌ಜನ್ ಅವರಿಗೆ ‘ಬಾರ್ಡರ್ ಡಿಫೆಂಡಿಂಗ್ ಹಿರೋ ’ ಹಾಗೂ ಕ್ಸಿಯಾವೊ ಸಿಯುವಾನ್,ಚೆನ್ ಝಿಯಾಂಗ್‌ರಂಗ್ ಮತ್ತು ವಾಂಗ್ ಝೌರಾನ್ ಅವರಿಗೆ ‘ಫಸ್ಟ್-ಕ್ಲಾಸ್ ಮೆರಿಟ್’ ಪ್ರಶಸ್ತಿಗಳನ್ನು ಮರಣೋತ್ತರವಾಗಿ ಪ್ರದಾನಿಸಲಾಗಿದೆ ಮತ್ತು ತೀವ್ರವಾಗಿ ಗಾಯಗೊಂಡಿದ್ದ ಕಿ ಫಾಬಾವೊ ಅವರಿಗೆ ‘ಹಿರೋ ರೆಜಿಮೆಂಟ್ ಕಮಾಂಡರ್ ಫಾರ್ ಡಿಫೆಂಡಿಂಗ್ ದಿ ಬಾರ್ಡರ್ ’ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ವರದಿಯು ತಿಳಿಸಿದೆ. ಮೂವರು ಚೀನಿ ಸೈನಿಕರು ಘರ್ಷಣೆಯಲ್ಲಿ ಮತ್ತು ಇನ್ನೋರ್ವ ಸೈನಿಕ ತನ್ನ ಸಹೋದ್ಯೋಗಿಗಳಿಗೆ ನೆರವಾಗಲು ಹಿಮನದಿಯನ್ನು ದಾಟುವಾಗ ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ.

ಗಲ್ವಾನ್ ಘರ್ಷಣೆಯಲ್ಲಿ ಸಾವುನೋವಿನ ವಿವರಗಳನ್ನು ಬಹಿರಂಗಗೊಳಿಸಲು ಎಂಟು ತಿಂಗಳು ವಿಳಂಬಿಸಿದ್ದೇಕೆ ಎಂಬ ಪ್ರಶ್ನೆಗೆ,ಸುದೀರ್ಘ ಸಮಯದಿಂದ ಸತ್ಯವನ್ನು ನಿರೀಕ್ಷಿಸಲಾಗಿತ್ತು,ಹೀಗಾಗಿ ವರದಿಯನ್ನು ಬಹಿರಂಗಗೊಳಿಸಲಾಗಿದೆ. ಅಲ್ಲದೆ ಜನರಿಗೂ ನಿಜ ಗೊತ್ತಾಗುವ ಅಗತ್ಯವಿದೆ ಎಂದು ಚೀನಿ ವಕ್ತಾರರು ಉತ್ತರಿಸಿರುವುದನ್ನು ಷಿನುವಾ ಉಲ್ಲೇಖಿಸಿದೆ. ಗಲ್ವಾನ್ ಘಟನೆಯ ವಿವರಗಳನ್ನು ಚೀನಾ ಬಹಿರಂಗಗೊಳಿಸಿರುವುದು ಸೇನಾಪಡೆಗಳ ವಾಪಸಾತಿ ಕುರಿತು ಚರ್ಚಿಸಲು ಶನಿವಾರ ನಡೆಯಲಿರುವ 10ನೇ ಸುತ್ತಿನ ಕಮಾಂಡರ್‌ಗಳ ಮಟ್ಟದ ಮಾತುಕತೆಯ ಮೇಲೆ ಪರಿಣಾಮವನ್ನು ಬೀರಲಿದೆಯೇ ಎಂಬ ಪ್ರಶ್ನೆಗೆ ಚೀನಿ ವಕ್ತಾರರು,ಇವೆರಡೂ ಪ್ರತ್ಯೇಕ ವಿಷಯಗಳಾಗಿವೆ ಎಂದು ಉತ್ತರಿಸಿದರು.

ಘರ್ಷಣೆಯಲ್ಲಿ ತನ್ನ 20 ಯೋಧರು ಮೃತಪಟ್ಟಿದ್ದಾರೆ ಎಂದು ಭಾರತವು ತಿಳಿಸಿತ್ತು. ಚೀನಾ ತನ್ನ ಕಡೆಯಲ್ಲಿ ಸಾವುನೋವುಗಳನ್ನು ಒಪ್ಪಿಕೊಂಡಿತ್ತಾದರೂ ವಿವರಗಳನ್ನು ಬಹಿರಂಗಗೊಳಿಸಿರಲಿಲ್ಲ. ಗಲ್ವಾನ್ ಘರ್ಷಣೆಯಲ್ಲಿ 45 ಚೀನಿ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ರಷ್ಯಾದ ಅಧಿಕೃತ ಸುದ್ದಿಸಂಸ್ಥೆ ತಾಸ್ ಫೆ.10ರಂದು ವರದಿ ಮಾಡಿದ್ದರೆ,ಅಮೆರಿಕದ ಗುಪ್ತಚರ ಇಲಾಖೆಯು 35 ಚೀನಿ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಕಳೆದ ವರ್ಷ ತನ್ನ ವರದಿಯಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News