ಅರ್ಜುನ್ ತೆಂಡೂಲ್ಕರ್ ಆಯ್ಕೆಯ ಕುರಿತು ಮುಂಬೈ ಇಂಡಿಯನ್ಸ್ ಕೋಚ್ ಜಯವರ್ಧನೆ ಹೇಳಿದ್ದೇನು ಗೊತ್ತೇ?

Update: 2021-02-19 06:31 GMT

ಮುಂಬೈ: ಗುರುವಾರ ನಡೆದ ಐಪಿಎಲ್ ಆಟಗಾರರ ಹರಾಜು ಸಂದರ್ಭ ಮುಂಬೈ ಇಂಡಿಯನ್ಸ್ ತಂಡವು ಅರ್ಜುನ್ ತೆಂಡುಲ್ಕರ್ ಅವರನ್ನು ಸಂಪೂರ್ಣವಾಗಿ ಅವರ ಕ್ರಿಕೆಟ್ ಪ್ರತಿಭೆಯ ಆಧಾರದಲ್ಲಿ ಆಯ್ಕೆ ಮಾಡಿದೆ ಎಂದು ತಂಡದ ಮುಖ್ಯ ಕೋಚ್ ಮಾಹೇಲ ಜಯವರ್ಧನೆ ಸ್ಪಷ್ಟ ಪಡಿಸಿದ್ದಾರೆ. ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಪುತ್ರನಾಗಿರುವ ಅರ್ಜುನ್ ತೆಂಡುಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ರೂ 20 ಲಕ್ಷಕ್ಕೆ ಖರೀದಿಸಿದೆ.

ಮುಂಬೈ ಇಂಡಿಯನ್ಸ್ ಜತೆಗಿರುವುದು ಅರ್ಜುನ್ ಅವರಿಗೆ ಕಲಿಕೆಯ ಒಂದು ಪ್ರಕ್ರಿಯೆಯಾಗಲಿದೆ ಎಂದು ಹೇಳಿದ ಜಯವರ್ಧನೆ, 21 ವರ್ಷದ ಅರ್ಜುನ್ ಅವರು ಸಮಯ  ಸಂದ ಹಾಗೆ ತಮ್ಮ ಬೌಲಿಂಗ್‍ನಲ್ಲಿ ಹೆಚ್ಚು ಪ್ರಾವೀಣ್ಯತೆ ಸಾಧಿಸಲಿದ್ದಾರೆ ಎಂಬ ಆಶಾವಾದ ವ್ಯಕ್ತಪಡಿಸಿದರು.

"ನಾವು ಸಂಪೂರ್ಣವಾಗಿ ಅವರ ಪ್ರತಿಭೆಯತ್ತ ಗಮನ ಹರಿಸಿದ್ದೆವು.  ಅವರು ಸಚಿನ್ ಪುತ್ರ ಎಂಬ ಹಣೆಪಟ್ಟಿ ಇದ್ದೇ ಇರುತ್ತದೆ. ಅದೃಷ್ಟವಶಾತ್ ಅವರೊಬ್ಬ ಬೌಲರ್ ಆಗಿದ್ದಾರೆ. ಆದುದರಿಂದ ಅರ್ಜುನ್ ರೀತಿಯಲ್ಲಿ ಬೌಲಿಂಗ್ ಮಾಡಲು ಸಾಧ್ಯವಾದರೆ ಸಚಿನ್ ಹೆಮ್ಮೆ ಪಡಬಹುದು" ಎಂದು ಜಯವರ್ಧನೆ ಹೇಳಿದ್ದಾರೆ.

ಐಪಿಎಲ್ 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿದ್ದ ಅರ್ಜುನ್ ನಿನ್ನೆ ನಡೆದ ಐಪಿಎಲ್ ಹರಾಜಿನಲ್ಲಿ  ಮಾರಾಟವಾದ ಕೊನೆಯ ಆಟಗಾರನಾಗಿದ್ದಾರೆ.

"ಆತನ ಜತೆ ನೆಟ್‍ನಲ್ಲಿ ಬಹಳಷ್ಟು ಸಮಯ ಕಳೆದಿದ್ದೇನೆ. ಅವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಬೇಕಿದೆ" ಎಂದು ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಆಪರೇಶನ್ಸ್ ನಿರ್ದೇಶಕ ಜಹೀರ್ ಖಾನ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News