​ಕೋವಿಡ್-19: ಎರಡನೇ ಅಲೆ ಅಂಚಿನಲ್ಲಿ ಭಾರತ

Update: 2021-02-21 03:36 GMT

ಹೊಸದಿಲ್ಲಿ, ಫೆ.21: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಅದರಲ್ಲೂ ಮುಖ್ಯವಾಗಿ ಪಂಜಾಬ್, ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದೆ.

ಹಲವು ರೂಪಾಂತರಿ ಕೊರೋನ ವೈರಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದು, ಇದು ಹಾಲಿ ಇರುವ ವೈರಸ್ ಪ್ರಬೇಧಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಹರಡುವಂಥದ್ದು ಎನ್ನಲಾಗಿದೆ. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಹಾಗೂ ಮುಂಬೈನಲ್ಲಿ ಪತ್ತೆಯಾಗಿರುವ ಹೊಸ ಪ್ರಬೇಧಗಳ ಕಾರಣದಿಂದ ಸ್ಥಳೀಯ ಆಡಳಿತ ಹೊಸದಾಗಿ ಲಾಕ್‌ಡೌನ್ ವಿಧಿಸಿದೆ ಹಾಗೂ ಸಾರ್ವಜನಕರಿಗೆ ಹೊಸ ಮಾರ್ಗಸೂಚಿಯನ್ನು ನೀಡಿದೆ.

ಕಳೆದ ಕೆಲ ತಿಂಗಳಲ್ಲಿ ದೇಶಾದ್ಯಂತ ನಿರಂತರವಾಗಿ ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿತ್ತು. ಶುಕ್ರವಾರ ದೇಶದಲ್ಲಿ 13,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜನವರಿ 29ರಂದು 18,885 ಪ್ರಕರಣಗಳು ಪತ್ತೆಯಾದ ನಿದರ್ಶನ ಹೊರತುಪಡಿಸಿದರೆ ಇದು ಜನವರಿ 25ರ ಬಳಿಕ ವರದಿಯಾದ ಗರಿಷ್ಠ ಸಂಖ್ಯೆಯಾಗಿದೆ.

ಸತತ ಐದನೇ ದಿನ ಹೊಸ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಹೆಚ್ಚಿದ್ದು, ಫೆಬ್ರವರಿ 16ರಂದು 9,121, 17ರಂದು 11,610, 18ರಂದು 12,881, 19ರಂದು 13,193 ಮತ್ತು 20ರಂದು 13,993 ಹೊಸ ಪ್ರಕರಣಗಳು ವರದಿಯಾಗಿವೆ. 2020ರ ಸೆಪ್ಟಂಬರ್ 17ರಂದು ಗರಿಷ್ಠ ಅಂದರೆ 97,894 ಪ್ರಕರಣಗಳು ವರದಿಯಾದ ಬಳಿಕ ಒಂದು ಬಾರಿ ಮಾತ್ರ ಅಂದರೆ ನವೆಂಬರ್ 17ರಿಂದ 21ರವರೆಗೆ ಐದು ದಿನ ಹೊಸ ಪ್ರಕರಣಗಳ ಸಂಖ್ಯೆ ಏರಿತ್ತು.

ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ಮಧ್ಯಪ್ರದೇಶ ಹೀಗೆ ನಾಲ್ಕು ರಾಜ್ಯಗಳಲ್ಲಿ ನಿರಂತರವಾಗಿ ಹೊಸ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕರ್ನಾಟಕವನ್ನು ಹಿಂದಿಕ್ಕಿದ ಕೇರಳ, ಮಹಾರಾಷ್ಟ್ರ ಬಳಿಕ ಎರಡನೇ ಅತಿಹೆಚ್ಚು ಬಾಧಿತವಾದ ರಾಜ್ಯ ಎನಿಸಿಕೊಂಡಿದೆ. ಕೇರಳದಲ್ಲಿ ಇದೀಗ 60,087 ಸಕ್ರಿಯ ಪ್ರಕರಣಗಳಿದ್ದು, ಇದು ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಶೇಕಡ 42ರಷ್ಟು.

ಮಹಾರಾಷ್ಟ್ರದಲ್ಲಿ ಶನಿವಾರ 6,281 ಹೊಸ ಪ್ರಕರಣಗಳು ವರದಿಯಾಗಿದ್ದು, ಪಂಜಾಬ್ ಹಾಗೂ ಮಧ್ಯಪ್ರದೇಶದಲ್ಲೂ ಗಂಭೀರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಎರಡು ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕ್ರಮವಾಗಿ 383 ಹಾಗೂ 297 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News