ಸಾಮಾಜಿಕ ಜಾಲತಾಣ ಬಳಸುವ ಪ್ರತಿಯೊಬ್ಬರು ಅಧ್ಯಯನ ನಡೆಸಬೇಕಾದ ದಿಶಾ ಕೇಸ್

Update: 2021-02-21 09:08 GMT

ಪಬ್ಲಿಕ್ ಪ್ರಾಸಿಕ್ಯೂಟ್ ಇರ್ಫಾನ್ : ಸಹಾಯಕ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಮಧ್ಯಾಹ್ನ 2 ಗಂಟೆಗೆ ಈ ವಿಷಯದಲ್ಲಿ ವಾದ ಮಂಡಿಸುತ್ತಾರೆ

ಕೋರ್ಟ್ : ನನಗೆ ಅದನ್ನು ಮೊದಲೇ ಹೇಳಬೇಕಿತ್ತು. ನಾನು ಈ ಕೇಸ್ ಗಾಗಿ ಬಂದೆ

ಆನ್ ಲೈನ್ ಮೂಲಕ ಸಹಾಯಕ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಕೋರ್ಟ್ ಸಂಪರ್ಕಕ್ಕೆ ಬಂದರು.

ಕೋರ್ಟ್ : ಒಕೆ. ನಾವು ಇದನ್ನು ಮದ್ಯಾಹ್ನ 2 ಗಂಟೆ ಇಟ್ಟುಕೊಳ್ಳೋಣಾ

ಕಲಾಪ ಮದ್ಯಾಹ್ನ 2 ಗಂಟೆಗೆ ಮುಂದೂಡಲಾಯ್ತು

ಮದ್ಯಾಹ್ನ 2.05 ಕ್ಕೆ ಕಲಾಪ ಮತ್ತೆ ಪ್ರಾರಂಭವಾಯ್ತು

ವಕೀಲ ಸಿದ್ದಾರ್ಥ್ ಅಗರ್ವಾಲ್ ದಿಶಾ ಪರವಾಗಿ ವಾದ ಮಂಡಿಸಲು ಹಾಜರಾಗಿದ್ದರು. 

ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹಮ್ಮದ್ : ನನಗೆ ಒಂದು ಲೀಗಲ್ ಸಬ್ಮೀಷನ್ ಮಾಡಲಿಕ್ಕಿದೆ. ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಸಹ ಆರೋಪಿಗಳನ್ನು ವಿಚಾರಣೆ ನಡೆಸಬೇಕಿದೆ. ಆರೋಪಿಗಳನ್ನು ಪರಸ್ಪರ ಸಮ್ಮುಖದಲ್ಲಿ ವಿಚಾರಣೆ ನಡೆಸಬೇಕಿದೆ. ಆರೋಪಿ ಶಾಂತನುಗೆ ನೋಟಿಸ್ ನೀಡಲಾಗಿದೆ. ಹಾಗಾಗಿ ನ್ಯಾಯಾಂಗ ಬಂಧನವನ್ನು ಫೆಬ್ರವರಿ 22 ರವರೆಗೆ ಮುಂದುವರೆಸಬೇಕು

ಪಿಪಿ ಇರ್ಫಾನ್ ಅಹಮ್ಮದ್ : ಫೆಬ್ರವರಿ 22 ಕ್ಕೆ ಮತ್ತೆ ನಾವು ಪೊಲೀಸ್ ಕಸ್ಟಡಿ ಕೇಳಲಿದ್ದೇವೆ. ನಮ್ಮ ಮನವಿ ಪುರಸ್ಕೃತಗೊಂಡಿದೆ ಮತ್ತು ಆ ಆದೇಶವನ್ನು ಪ್ರಶ್ನಿಸಲಾಗಿಲ್ಲ. 

ಪಿಪಿ ಇರ್ಫಾನ್ ಅಹಮ್ಮದ್ : ಆದ್ದರಿಂದ ಈ ಜಾಮೀನು ಅರ್ಜಿಯ ಅಕಾಲಿಕ ಅಥವಾ ಆತುರದ್ದಾಗಿದೆ.

ಕೋರ್ಟ್ : ಹಾಗಂತ ಯಾವ ಕಾನೂನು ಹೇಳುತ್ತದೆ ? 

ಕೋರ್ಟ್ : ನೀವು ಹೇಳಿದ ವಿಷಯಗಳು ಯಾವ ಕಾನೂನಿನ ಅಂಶದಲ್ಲಿ ಬರುತ್ತೆ ?

ಪಿಪಿ ಇರ್ಫಾನ್ ಅಹಮ್ಮದ್ : ನಮ್ಮ ಸಬ್ಮೀಷನ್ ಏನೆಂದರೆ, ಈ ಜಾಮೀನು ಅರ್ಜಿಯೇ ಆತುರದ್ದಾಗಿದೆ (ಪ್ರಿ ಮೇಚೂರ್). ನಮ್ಮ ಪ್ರಾಥಮಿಕ ಮನವಿಯೇನೆಂದರೆ ಆರೋಪಿಯನ್ನು ದಯವಿಟ್ಟು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ.

ಕೋರ್ಟ್ : ನಿಮ್ಮ ಸಬ್ಮೀಷನ್ ಅನ್ನು ಕೋರ್ಟ್ ದಾಖಲಿಸಿಕೊಂಡಿದೆ. 

ಪಿಪಿ ಇರ್ಫಾನ್ ಅಹಮ್ಮದ್ : ಕೆಲವು ರಹಸ್ಯವಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ

ಕೋರ್ಟ್ : ಮುಚ್ಚಿದ ಲಕೋಟೆಯಲ್ಲಿ ಕೊಡಬಹುದಲ್ವೇ ?

ಪಿಪಿ ಇರ್ಫಾನ್ ಅಹಮ್ಮದ್ : ಯೆಸ್

ಕೋರ್ಟ್ : ಅಫಿದಾವಿತ್ ಹಾಕುತ್ತೇವೆ ಅಂತ ಹೇಳಿದ್ರಿ. ಎಲ್ಲಿದೆ ಅಫಿದಾವಿತ್ ? 

ಎಎಸ್ ಜಿ ರಾಜು : ನಾವು ಅಫಿದಾವಿತ್ ಹಾಕುತ್ತೇವೆ

ಕೋರ್ಟ್ : ಇವತ್ತೇ ಅಫಿದಾವಿತ್ ಹಾಕಿ ಬಿಡಿ

ಕೋರ್ಟ್ : ನನಗೆ ಮೂರು ವಿಷಯದಲ್ಲಿ ನೀವು ವಾದ ಮಂಡಿಸಬೇಕು. ತನಿಖೆಯ ವಿವರ, ಆರೋಪಗಳು ಮತ್ತು ಸಾಕ್ಷ್ಯಗಳ ಮೇಲೆ ವಾದ ಮಾಡಿ

ಎಎಸ್ ಜಿ ರಾಜು : ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅನ್ನೋ ಸಂಘಟನೆ ಇದೆ. ಧಲಿವಾಲ್ ಮತ್ತು ಅಮಿತಾಲಾಲ್ ಅದರ ಸ್ಥಾಪಕರು. ಈ ಸಂಘಟನೆ ಖಲೀಸ್ಥಾನ ಪ್ರತ್ಯೇಕತೆಗಾಗಿ ಹೋರಾಡುತ್ತೆ. ಅದರ ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ.

ಎಎಸ್ ಜಿ ರಾಜು : ಈ ಸಂಘಟನೆಯು ಅದಕ್ಕಾಗಿ ಜನರನ್ನು ಒಟ್ಟುಗೂಡಿಸುತ್ತದೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಸಂಘಟನೆಯು ರೈತರ ಹೋರಾಟವನ್ನು ಬಳಸಿಕೊಂಡು ಅದರ ಚಟುವಟಿಕೆಯನ್ನು ವಿಸ್ತರಿಸಲು ಸಂಚು ಮಾಡಿತ್ತು. ( ದೆಹಲಿ ಪೊಲೀಸರ ಉತ್ತರವನ್ನು ಓದಿ ಹೇಳಲಾಯ್ತು)

ಎಎಸ್ ಜಿ ರಾಜು : ಈ ವಾಕ್ಯದಲ್ಲಿ ಪ್ರಸ್ತುತ ಅರ್ಜಿದಾರ ಆರೋಪಿಯೂ ಇದ್ದಾರೆ.  ಈ ಟೂಲ್ ಕಿಟ್ ಉದ್ದೇಶ ಸಂಚು. ಕೆನಡಾದಲ್ಲಿ ಆರೋಪಿ ಜೊತೆ ಸೇರಿಕೊಂಡು ಈ ಸಂಚು ರೂಪಿಸಿರುವುದರಿಂದ 124A ಈ ಕೇಸ್ ನಲ್ಲಿ ಸೇರಿಕೊಂಡಿದೆ. 

ಎಎಸ್ ಜಿ ರಾಜು : ಅವರು ಒಂದು ವಾಟ್ಸಪ್ ಗ್ರೂಪ್ ಮಾಡಿಕೊಳ್ಳುತ್ತಾರೆ. ಇಂಟರ್ ನ್ಯಾಶನಲ್ ಫಾರ್ಮರ್ಸ್ ಸ್ಟ್ರೈಕ್ ಎಂದು ವಾಟ್ಸಪ್ ಗ್ರೂಪ್ ಗೆ ಹೆಸರಿಡುತ್ತಾರೆ.‌ಅದರ ಮೂಲಕ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅನ್ನು ಸಂಪರ್ಕಿಸುತ್ತಾರೆ.  

ಎಎಸ್ ಜಿ ರಾಜು : 11.01.2021 ರಂದು ಧಲಿವಾಲ್ ಮತ್ತು ಇತರ ಆರೋಪಿಗಳು ಝೂಮ್ ಕಾಲ್ ಮೂಲಕ ಮಾತನಾಡಿಕೊಳ್ಳುತ್ತಾರೆ. ಈ ಅರ್ಜಿದಾರಳು ಆ ಆರೋಪಿಗಳ ಸಹವರ್ತಿಗಳು. ಅದು ಇವರಿಗೆ ಅಗತ್ಯ ಇರಲಿಲ್ಲ.

ಎಎಸ್ ಜಿ ರಾಜು : ಮೀಟಿಂಗ್ ಬಳಿ ಒಬ್ಬ ಸಂಚುಕೋರ, ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಗೆ ಧನ್ಯವಾದ ಹೇಳಿ ಮೆಸೇಜ್ ರವಾನಿಸಿದ್ದಾನೆ.

ಎಎಸ್ ಜಿ ರಾಜು : ದಿಶಾ ಇವರ ಜೊತೆ ನಿಕಟ ಸಂಬಂಧ ಹೊಂದಿದ್ದಾಳೆ. ಮತ್ತೆ ಝೂಮ್ ಮೀಟಿಂಗ್ ಮಾಡಲು ದಿಶಾ ಮನವಿ ಮಾಡಿದ್ದಾಳೆ. ಎರಡರಿಂದ ಮೂರು ಬಾರಿ ಇಂತಹ ಮೀಟಿಂಗ್ ಆಗುತ್ತೆ.

ಎಎಸ್ ಜಿ ರಾಜು : ಕೆಲವು ವಿಷಯಗಳನ್ನು ವೆಬ್ ಸೈಟ್ ನಲ್ಲಿ ನೋಡಬಹುದು. ಟೂಲ್ ಕಿಟ್ ನೋಡಲು ಅಪಾಯಕಾರಿ ಅಲ್ಲದಂತೆ ಕಾಣಬಹುದು. ಆದರೆ ಅದು ಹಾಗಿಲ್ಲ. ಟೂಲ್ ಕಿಟ್ ಡ್ರಾಫ್ಟ್ ಮಾಡಿದ ಬಳಿಕ ಅದನ್ನು ಅಭಿಪ್ರಾಯ ಸಂಗ್ರಹಿಸಲು ವಾಟ್ಸ್ ಅಪ್ ಗ್ರೂಪಲ್ಲಿ ಹಾಕಲಾಯ್ತು. ಅದು ಕೊನೆಗೆ ತಲುಪಿದ್ದು ಪೊಯೆಟಿಕ್ ಜಸ್ಟಿಸ್ ಫೌಂಡೇಶನ್. ಇದರ ಅಗತ್ಯ ಇರಲಿಲ್ಲ.

ಕೋರ್ಟ್ : ಈ ಟೂಲ್ ಕಿಟ್ ಅಂದ್ರೆ ಏನು ?

ಎಎಸ್ ಜಿ ರಾಜು : ಅದನ್ನು ಲಗತ್ತಿಸಲಾಗಿದೆ. ಪೇಜ್ 21 ರಿಂದ ಟೂಲ್ ಕಿಟ್ ಬಗ್ಗೆ ಶುರುವಾಗುತ್ತೆ. 

ಸಿದ್ದಾರ್ಥ್ ಅಗರ್ವಾಲ್ : ಟೂಲ್ ಕಿಟ್ ಅಂದ್ರೆ ಕರಪತ್ರ ಎನ್ನಬಹುದು

ಎಎಸ್ ಜಿ ರಾಜು : ಸಿಖ್ ಫಾರ್ ಜಸ್ಟಿಸ್ ಎಂಬ ಸಂಘಟನೆ ಯುಎಪಿಎ ಅಡಿಯಲ್ಲಿ ನಿಷೇಧಕ್ಕೊಳಗಾಗಿರೋ ಸಂಘಟನೆ.

ಎಎಸ್ ಜಿ ರಾಜು : ಈ ಖಲೀಸ್ತಾನ್ ದುಷ್ಕರ್ಮಿಗಳು ಇದರ ಹಿಂದೆ ಇದ್ದಾರೆ. ದ್ವಜವನ್ನು ಹಾರಿಸಿದ್ದು ಅವರೇ. ಅದರ ಇನ್ನೊಂದು ಮುಖವೇ ಪೊಯೆಟಿಕ್ ಜಸ್ಟಿಸ್. ಟೂಲ್ ಕಿಟ್ ಇಲ್ಲೇ ಸಿದ್ದವಾಗುತ್ತೆ.

ಎಎಸ್ ಜಿ ರಾಜು : ಅವರು ಹ್ಯಾಶ್ ಟ್ಯಾಗ್ ಸೃಷ್ಟಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಅದನ್ನು ಕೆಲವೇ ವ್ಯಕ್ಯಿಗಳ ಮಧ್ಯೆ ಮಾತ್ರ ಹಂಚಲಾಯಿತು. ಆದರೆ  ಅದು ಲೀಕ್ ಆಯ್ತು. ಇದರಿಂದ ಬಚಾವಾಗಲು ಕಸರತ್ತು ನಡೆಸಲಾಯ್ತು. ಹಾಗಾಗಿ ಅದನ್ನು ಡಿಲೀಟ್ ಮಾಡಲಾಯ್ತು.

ಎಎಸ್ ಜಿ ರಾಜು : ಹ್ಯಾಶ್ ಟ್ಯಾಗ್ ಮಾಡಿದ್ದು ತಪ್ಪು ಅಲ್ಲವೆಂದಾದರೆ ಅದನ್ನು ಡಿಲೀಟ್ ಮಾಡುವ ಅಗತ್ಯ ಏನಿತ್ತು ?

ಎಎಸ್ ಜಿ ರಾಜು : ಅವರು ರೈತರ ಹೋರಾಟವನ್ನು ಬಳಸಿಕೊಂಡು ಅವರ ಅಜೆಂಡಾ ಜಾರಿಗೆ ಮುಂದಾಗಿದ್ದರು. ಆ ಇಮೇಲ್ ಕೂಡಾ ಡಿಲೀಟ್ ಮಾಡಲಾಗಿದೆ. ಅದರಲ್ಲಿ ಅರ್ಜಿದಾರಳ ಪಾತ್ರವೂ ಬಯಲಾಗಿದೆ. ಅರ್ಜಿದಾರಳ ಅದರ ಹಿಂದೆ ಇದ್ದಾಳೆ. ( ಟೂಲ್ ಕಿಟ್ ಎಡಿಟ್ ವಿಚಾರ )

ಫಾರ್ಮರ್ಸ್ ಪ್ರೊಟೆಸ್ಟ್ ಚೀಟ್ ಶೀಟ್, ಕರೆಂಟ್  ಜೆನೊಸೈಡ್ ಅಲರ್ಟ್, ಆಸ್ಕ್ ಇಂಡಿಯಾ ಹ್ಯಾಶ್ ಟ್ಯಾಗ್ ಬಗ್ಗೆ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ರಾಜು ಮಾತನಾಡುತ್ತಾ..

ಎಎಸ್ ಜಿ ರಾಜು : ಭಾರತದ ಸೈನ್ಯವನ್ನು ಅವಹೇಳನ ಮಾಡುವ ಸೈಟ್ ಗೂ ಈ ಟೂಲ್ ಕಿಟ್ ಹ್ಯಾಶ್ ಟ್ಯಾಗ್ ಸಂಪರ್ಕಿಸುತ್ತೆ‌. ಹೇಗೆ ಭಾರತದ ಸೇನೆ ಕಾಶ್ಮೀರದಲ್ಲಿ ಹತ್ಯಾಕಾಂಡ ಮಾಡಿತ್ತು ಎಂಬ ಬಗ್ಗೆಯೂ ಇದೆ.‌ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಪಿತೂರಿ ಮಾಡಿ ದೆಹಲಿಗೆ ನುಗ್ಗಿದ್ದರು. ಅವರು ರೈತ ಹೋರಾಟವನ್ನು ತಮ್ಮ ಅಜೆಂಡಾ ಜಾರಿಗೆ ಬಳಸಿದ್ದರು. ಅದಕ್ಕೆ ಇವರ ಟೂಲ್ ಕಿಟ್ ಬಳಕೆ ಆಗಿತ್ತು. ಅವರು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು. ಇಮೇಲ್ ಮಾಡಿದ್ದರು.‌ ನಂತರ ಇಮೇಲ್ ಡಿಲೀಟ್ ಮಾಡಿದ್ದಾರೆ. ಎಲ್ಲವೂ ಸರಿ ಇದ್ದರೆ ಡಿಲೀಟ್ ಯಾಕೆ ಮಾಡಬೇಕಿತ್ತು ?

ಕೋರ್ಟ್ : ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ನಿಷೇಧಿತ ಸಂಘಟನೆಯೇ ?

ಎಎಸ್ ಜಿ ರಾಜು : ಅಲ್ಲ

ಕೋರ್ಟ್ : ಅದರ ಸ್ಥಾಪಕರ ಮೇಲೆ ಯಾವುದಾದರೂ ಎಫ್ ಐಆರ್ ದಾಖಲಾಗಿದೆಯೆ ? 

ಎಎಸ್ ಜಿ ರಾಜು : ಈವರೆಗೂ ಆಗಿಲ್ಲ

ಕೋರ್ಟ್ : ಮತ್ತೆ ಹೇಗೆ ನೀವು ಅವರ ಮೇಲೆ ಕೆಟ್ಟ ಅಭಿಪ್ರಾಯ ದಾಖಲಿಸುತ್ತಿರಿ ? 

ಎಎಸ್ ಜಿ ರಾಜು : ಅವರ ಟ್ವೀಟ್ ಗಳ ಆಧಾರದ ಮೇಲೆ

ಕೋರ್ಟ್ - ಏನಾದರೂ ದಾಖಲೆ ಇದ್ಯಾ ? 

ಪಿಪಿ ಇರ್ಫಾನ್ ಅಹಮ್ಮದ್ - ಪೊಯೆಟಿಕ್ ಜಸ್ಟಿಸ್ ಮತ್ತು ಸಿಖ್ ಫಾರ್ ಜಸ್ಟಿಸ್ ಎರಡೂ ಒಂದೇ. ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡಾ ಇದೆ. ನಾನು ಖಲೀಸ್ಥಾನಿ ಎಂಬ ಹೆಮ್ಮೆ ಇದೆ ಎಂದು ದಲೀವಾಲ್ ಹೇಳುವ ವಿಡಿಯೋ ಕೂಡಾ ಇದೆ.

ಪಿ ಪಿ ಇರ್ಫಾನ್ ಅಹಮ್ಮದ್ - ಇವರೆಲ್ಲರ ಉದ್ದೇಶ ಖಲೀಸ್ಥಾನವನ್ನು ಬೆಂಬಲಿಸುವುದು. 

ಕೋರ್ಟ್ : ನಾನೇನಾದರೂ ಯಾವುದಾದರೂ ಚಳುವಳಿಯಲ್ಲಿದ್ದು, ವೈಯುಕ್ತಿಕವಾಗಿ ಯಾವುದೋ ಉದ್ದೇಶಕ್ಕೆ ಯಾರನ್ನೋ ಸಂಪರ್ಕಿಸಿದರೆ ನಾನೂ ಅವರ ಉದ್ದೇಶಗಳ ಭಾಗ ಎಂದು ಅರ್ಥವೇ ? 

ಎಎಸ್ ಜಿ ರಾಜು : ಆದರೆ ಇವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ

ಕೋರ್ಟ್ : ಹಾಗೇನಿಲ್ಲ. ಎಲ್ಲರಿಗೂ ಗೊತ್ತಿರಬೇಕೆಂದೇನಿಲ್ಲ

ಎಎಸ್ ಜಿ ರಾಜು : ಈ ಅರೋಪಿಗಳು ಅನಕ್ಷರಸ್ಥರಲ್ಲ. ಯಾವ ಸಂಘಟನೆ ಯಾವ ಉದ್ದೇಶ ಹೊಂದಿದೆ ಎಂಬುದು ಆಕೆಗೆ ತಿಳಿದಿದೆ. ಹಾಗಿಲ್ಲದಿದ್ದರೆ ಪ್ರಕರಣ ಹೊರ ಬರುತ್ತಿದ್ದಂತೆ ಆಕೆ ಹೆದರಿದ್ದು ಯಾಕೆ ?

ಕೋರ್ಟ್ : ನಾನು ದೇವಸ್ಥಾನಕ್ಕೆ ದಾನ ಕೊಡಿ ಎಂದು ದರೋಡೆಕೋರನನ್ನು ಸಂಪರ್ಕಿಸುತ್ತೇನೆ. ಆಗ ನಾನು ದರೋಡೆಯ ಭಾಗವಾಗುತ್ತೇನೆಯೇ ? ಆಕೆಯ ವಿರುದ್ದ ಇರೋ ಸಾಕ್ಷ್ಯಗಳನ್ನು ತೋರಿಸಿ.

ಎಎಸ್ ಜಿ ರಾಜು : ಅದು ಅಷ್ಟು ಸರಳವಲ್ಲ. ಆಕೆ ಉದ್ದೇಶಪೂರ್ವಕವಾಗಿಯೇ ಅವರ ಸಂಪರ್ಕ ಹೊಂದಿದ್ದಾಳೆ

ಕೋರ್ಟ್ - ಟೂಲ್ ಕಿಟ್ ಗೂ ಹಿಂಸಾಚಾರಕ್ಕೂ ಏನು ಸಂಬಂಧ ? ಅದಕ್ಕೆ ಸಂಬಂಧಿಸಿದ ದಾಖಲೆ ಏನಿದೆ ? 

ಎಎಸ್ ಜಿ ರಾಜು : ಅದೊಂದು ಪಿತೂರಿ. ಹಲವರು ಹಲವು ಪಾತ್ರ ವಹಿಸಿದ್ದಾರೆ. ಹಿಂಸಾಚಾರದ ಹಿಂದೆ ಟೂಲ್ ಕಿಟ್ ಪ್ರಚೋದನೆ ಇದೆ

ಎಎಸ್ ಜಿ ರಾಜು : ಟೂಲ್ ಕಿಟ್ ಮೂಲಕ ಪ್ರಚೋದನೆ ಪಡೆದುಕೊಂಡು ಜನ ದೆಹಲಿಗೆ ಬಂದರು. ದೆಹಲಿಗೆ ಹೋಗಿ, ಅದು ಮಾಡಿ, ಇದು ಮಾಡಿ ಎಂದು ಟೂಲ್ ಕಿಟ್ ಮೂಲಕ ಸೂಚಿಸಲಾಗಿತ್ತು ? 

ಕೋರ್ಟ್ : ಅದು ಮಾಡಿ, ಇದು ಮಾಡಿ ಅಂದ್ರೆ ಏನು ? ಸರಿಯಾದ ಲಿಂಕ್ ಕೊಡಿ. ಸರಿಯಾದ ದಾಖಲೆ ಕೊಡಿ.

ಕೋರ್ಟ್ : ನನ್ನ ಆತ್ಮಸಾಕ್ಷಿಗೆ ಮನವರಿಕೆಯಾಗದೆ ನಾನು ಮುಂದುವರೆಯಲಾರೆ.

ಎಎಸ್ ಜಿ ರಾಜು : ಟೂಲ್ ಕಿಟ್ ಅನ್ನು ಇನ್ನೊಮ್ಮೆ ಗಮನಿಸಿ. ಅದರ ಮೂಲಕವೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ. 

ಕೋರ್ಟ್ : ಈ ಪ್ರಕರಣಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕೊಡ್ತೀರಾ ? ಅಥವಾ ಊಹೆಗಳನ್ನೇ ಮಾಡಿಕೊಂಡಿರಬೇಕಾ ?

ಎಎಸ್ ಜಿ ರಾಜು : ಸನ್ನಿವೇಶದ ಆಧಾರದ ಮೇಲೆ ನೋಡಬೇಕು

ಕೋರ್ಟ್ : ನಿಮ್ಮ ವಾದ ಮುಗಿಯಿತೇ ? ನಾನು ಸಿದ್ದಾರ್ಥ್ ಅಗರ್ ವಾಲ್ ಗೆ ಸಮಯ ನೀಡಬೇಕಿದೆ.

ಸುಪ್ರಿಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶ/ತೀರ್ಪುಗಳನ್ನು ಎಎಸ್ ಜಿ(ಅಸಿಸ್ಟೆಂಟ್ ಸಾಲಿಸಿಟರ್ ಜನರಲ್) ರಾಜು ಓದಿ ಹೇಳಿದರು. ಬಳಿಕ...

ಎಎಸ್ ಜಿ ರಾಜು : ನ್ಯಾಯಾಲಯ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಟೂಲ್ ಕಿಟ್ ತಿದ್ದುವಿಕೆಯಲ್ಲಿ ಈಕೆಯ ಪಾತ್ರವಿದೆ. ಅದು ಪಿತೂರಿಯ ಭಾಗ. ಜೊತೆಗೆ ದಲೀವಾಲ್ ಪ್ರತ್ಯೇಕ ಖಲೀಸ್ಥಾನಿ ಎಂದು ಹೇಳಿಕೆ ನೀಡಿರುವ ವಿಡಿಯೋ ಕೂಡಾ ಇದೆ.

ಕೋರ್ಟ್ : ಅದೇನು ಚರ್ಚೆಯ ವಿಷಯವೇ ಅಲ್ಲ. ಈಗಾಗಲೇ ಪಬ್ಲಿಕ್ ಪ್ರಾಸಿಕ್ಯೂಟರ್ ನಮ್ಮ ಗಮನಕ್ಕೆ ತಂದಿದ್ದಾರೆ. 

ಕೋರ್ಟ್ : ದೆಹಲಿ ಹಿಂಸಾಚಾರಕ್ಕೂ ಈ ಹುಡುಗಿಗೂ ಇರುವ ನೇರ ಸಂಬಂಧದ ಸಾಕ್ಷ್ಯಾಧಾರಗಳು ಇದ್ದರೆ ಹೇಳಿ

ಕೋರ್ಟ್ : ದಯವಿಟ್ಟು ಖಲೀಸ್ಥಾನ ಗುಂಪುಗಳ ಬಗ್ಗೆ ಪುನರಾವರ್ತಿಸಬೇಡಿ. ಬೇರೆ ನಿಖರ ಸಾಕ್ಷ್ಯಗಳಿದ್ದರೆ ಹೇಳಿ

ಎಎಸ್ ಜಿ ರಾಜು : ಇಲ್ಲಿ ಪಿತೂರಿಯ ಜಾರಿ ಮತ್ತು ಪಿತೂರಿ ಎರಡೂ ಬೇರೆ ಬೇರೆಯಾಗಿ ನಡೆದಿದೆ. 

ಕೋರ್ಟ್ : ಹಾಗಾದರೆ ನಾನು ಈ ಆರೋಪಿಗೆ ನೇರ ಸಂಪರ್ಕ ಇಲ್ಲ ಎಂದು ಭಾವಿಸಲೇ ?

ಎಎಸ್ ಜಿ ರಾಜು : ತನಿಖೆ ಮುಂದುವರೆಯುತ್ತಿದೆ

ಕೋರ್ಟ್ : ನೀವು ಆ ನಟನನ್ನು ಅರೆಸ್ಟ್ ಮಾಡಿದ್ದಾರೆ.‌

ಡಿಸಿಪಿ : ಹೌದು.

ಕೋರ್ಟ್ : ಅವನಿಗೂ ಈ ಆರೋಪಿಗೂ ನೇರ ಲಿಂಕ್ ಇದ್ಯಾ ? 

ಡಿಸಿಪಿ : ತನಿಖೆ ನಡೆಸುತ್ತಿದ್ದೇವೆ

ಕೋರ್ಟ್ : ಒಂದೋ ನಾನು ಸರಿಯಾಗಿ ಪ್ರಶ್ನೆ ಕೇಳುತ್ತಿಲ್ಲ. ಅಥವಾ ನಿಮಗೆ ಉತ್ತರಿಸಲು ಮನಸ್ಸಿಲ್ಲ. ನೀವು ಹೇಳುವ ಪಿತೂರಿಗೂ ಈ ಘಟನೆಗೂ ಏನ್ ಸಂಬಂಧ ? ಏನಾದರೂ ಸಾಕ್ಷಿ ಇದ್ಯಾ?

ದಿಶಾ ಪರ ವಕೀಲ ಸಿದ್ದಾರ್ಥ್ ಅಗರ್ವಾಲ್ ವಾದ ಶುರು ಮಾಡಿದ್ರು.‌

ಸಿದ್ದಾರ್ಥ್ ಅಗರ್ವಾಲ್ : ತನಿಖೆಯನ್ನೇ ನಿಲ್ಲಿಸಿ ಎಂದು ನಾನು ಹೇಳುತ್ತಿಲ್ಲ‌. ತನಿಖೆ ನಡೆಯಲಿ. 21 ವರ್ಷ ವಯಸ್ಸಿನ ಬೆಂಗಳೂರು ನಿವಾಸಿ ದಿಶಾ, ಈವರೆಗೂ ಖಲಿಸ್ತಾನ್ ಜೊತೆ ಸಂಪರ್ಕ ಹೊಂದಿರೋ ಇತಿಹಾಸ ಹೊಂದಿಲ್ಲ. ಅವರ ಜೊತೆಗಿನ ಹಣಕಾಸು ವ್ಯವಹಾರವೂ ಆಕೆಗೆ ಇಲ್ಲ.

ಕೋರ್ಟ್ : ಮೂರನೇ ಅ್ಯಂಗಲ್ ಕೂಡಾ ಇರಬಹುದಲ್ವೇ ? ಶತ್ರುವಿನ ಶತ್ರು ಮಿತ್ರ ಎಂಬಂತೆ...

ಸಿದ್ದಾರ್ಥ್ ಅಗರ್ವಾಲ್ : ಅಂತಹ ಯಾವುದೇ ಪ್ರವೃತ್ತಿ ಆಕೆಯಲ್ಲಿ ಇಲ್ಲ. ಕಾರಣವಿಲ್ಲದೆ ಆಕೆ ಬಂಡಾಯವೆದ್ದಿಲ್ಲ. ಆಕೆಯದ್ದು ಪರಿಸರ ಮತ್ತು ಕೃಷಿ, ರೈತರ ಕುರಿತಾದ ಹೋರಾಟ.

ಕೋರ್ಟ್ : ಅವರು ಪೊಯೆಟಿಕ್ ಜಸ್ಟಿಸ್ ಬಗ್ಗೆ ಆರೋಪಿಸುತ್ತಾರೆ.

ಸಿದ್ದಾರ್ಥ್ ಅಗರ್ವಾಲ್ : ದಿಶಾ ಅದರ ಭಾಗವಲ್ಲ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಗಾಗಲೀ, ಸಿಖ್ ಫಾರ್ ಜಸ್ಟಿಸ್ ಗಾಗಲೀ ದಿಶಾ ಜೊತೆ ಇರೋ ಸಂಪರ್ಕದ ಆರೋಪದ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಅಂತಹ ಸಂಪರ್ಕವೇ ಇಲ್ಲ. ಸಂಬಂಧವೂ ಇಲ್ಲ.

ಸಿದ್ದಾರ್ಥ್ ಅಗರ್ವಾಲ್ : ಒಂದು ವೇಳೆ ನಾನೇನಾದರೂ ಯಾರನ್ನಾದರೂ ಬೇಟಿಯಾದರೆ ಆತ ಪ್ರತ್ಯೇಕತಾವಾದಿ ಹೌದೋ ಅಲ್ಲವೋ ಎಂದು ನನಗೆ ಹೇಗೆ ತಿಳಿಯಬೇಕು ? ಆತನಿಗೂ ನನಗೂ ಸಂಬಂಧವೇ ಇರುವುದಿಲ್ಲ.

ಡಿಸಿಪಿ : ನಿಮ್ಮ ಗಮನಕ್ಕೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅಕ್ಟೋಬರ್ 2020 ಕ್ಕೆ ಶುರುವಾಯಿತು. 

ಸಿದ್ದಾರ್ಥ್ ಅಗರ್ವಾಲ್ : ನನಗೆ ಅದರಲ್ಲಿ ಆಸಕ್ತಿ ಇಲ್ಲ. ನೀವೇ ಹೇಳಿದಂತೆ ನಿನ್ನೆ ಮೊನ್ನೆ ಹುಟ್ಟಿದ ಸಂಘಟನೆ ಎಲ್ಲರಿಗೂ ಗೊತ್ತಿರಲು ಸಾಧ್ಯವಿಲ್ಲ


ಸಿದ್ದಾರ್ಥ್ ಅಗರ್ವಾಲ್ : ನಿಖಿತಾ ಮತ್ತು ಶಂತನೂ 60-70 ಜನರ ಝೂಮ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು.‌ ದಿಶಾ ಭಾಗಿಯಾಗಿಲ್ಲ.

ಸಿದ್ದಾರ್ಥ್ ಅಗರ್ವಾಲ್ : ರೈತರ ಹೋರಾಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೊಡಿಸುವುದು ದೇಶದ್ರೋಹವಾದರೆ, ಹೌದು ನಾನು(ದಿಶಾ) ತಪ್ಪಿತಸ್ಥೆ. 

ಸಿದ್ದಾರ್ಥ್ ಅಗರ್ವಾಲ್ : ನಾನು ಝೂಮ್ ಮೀಟಿಂಗ್ ಗೆ ಹಾಜರಾಗಿದ್ದೇನೆ ಎಂದು ಯಾರದರೂ ದಾಖಲೆಯಿಲ್ಲದೇ ಊಹಿಸಿಕೊಂಡರೆ ನಾನು ಏನು ಮಾಡಲಿ? ನಾನು ಎಲ್ಲೂ ದೇಶದ ವಿರುದ್ದ ಭಾಷಣ ಮಾಡಿಲ್ಲ. ಟೂಲ್ಕಿಟ್ ಎಂಬುದು ಆಕ್ರಮಣಕಾರಿಯೇ? ಅಥವಾ ಅದರ ಹೊರಗಡೆ ಪಿತೂರಿ ನಡೆದಿತ್ತೇ ?. ದಯವಿಟ್ಟು ಸೆಕ್ಷನ್ 124 ಎ ನೋಡಿ.  ನಾನು(ದಿಶಾ) ದೇಶದ್ರೋಹಿಯಲ್ಲ.

ಅಗರ್ವಾಲ್ ಸೆಕ್ಷನ್ 124 ಎ ಐಪಿಸಿ ಓದುತ್ತಾರೆ.

ಸಿದ್ದಾರ್ಥ್ ಅಗರ್ವಾಲ್ : ದೇಶದ್ರೋಹ ಪ್ರಕರಣಕ್ಕೆ ದಾಖಲೆಗಳು ಬೇಕು. ಮಾತು, ಹೇಳಿಕೆ, ಬರಹ, ಕೃತ್ಯ ಇರಬೇಕು. ಸಂವಹನವು ದೇಶದ ವಿರುದ್ದ ಸಮಾದಾನವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಟೂಲ್ಕಿಟ್ಗೆ ಅಂತಹ ಯಾವುದೇ ಸಾಮರ್ಥ್ಯ ಇಲ್ಲ. ಪ್ರಾಸಿಕ್ಯೂಷನ್ ಕೂಡಾ ಅದನ್ನು ಸ್ಪಷ್ಟಪಡಿಸಿದೆ. ಆದರೆ ಟೂಲ್ ಕಿಟ್ ಕೆಟ್ಟ ಜನರ ಕೈ ಸೇರಿದೆ ಎನ್ನುವುದು ಆರೋಪ. ಅದು ದೇಶದ್ರೋಹವಲ್ಲ.

ಇಡೀ ಪ್ರಕರಣ ಊಹೆಯನ್ನು ಆಧರಿಸಿದ್ದಾಗಿದೆ. ನ್ಯಾಯಾಲಯವು ಜಾಮೀನು ಅರ್ಜಿ ಪರಿಶೀಲಿಸುವಾಗ ದಯವಿಟ್ಟು ಇದನ್ನು ಪರಿಗಣಿಸಿ. ಎಲ್ಲಾ ವಿಚಾರಣೆ ಮುಗಿಸಿ ದಂಡ ಕಟ್ಟಿ ಹೊರಬರಬಹುದಾದ ಪ್ರಕರಣವಷ್ಟೆ. ನನ್ನನ್ನು(ದಿಶಾರನ್ನು) ಐದು ದಿನಗಳ ಪೊಲೀಸ್ ಕಸ್ಟಡಿ ಕೊಟ್ಟಿದ್ರು. ಹೆಚ್ಚಿನ ತನಿಖೆ ಮಾಡಲು ಇದೆ ಅಂದ್ರು. ಸರ್ಚ್ ಮಾಡಲು ನೀವು ಒಂದು ಬಾರಿಯೂ ನನ್ನನ್ನು  ಬೆಂಗಳೂರಿಗೆ ಕರೆದೊಯ್ಯಲಿಲ್ಲ. ಮತ್ಯಾಕೆ ಕಸ್ಟಡಿ ತಗೊಂಡ್ರಿ ? ಇನ್ನೂ ಮೂರು ದಿನ ಏನಾಗುತ್ತೆ? ಫೆಬ್ರವರಿ 22 ರಂದು ಮತ್ತೆ ಯಾಕೆ ಕಸ್ಟಡಿ ಕೇಳುತ್ತಿದ್ದಾರೆ? ಇದೆಂತ ತನಿಖೆ ?

ಸಿದ್ದಾರ್ಥ್ ಅಗರ್ವಾಲ್ : ನಾನು ಮೆರಿಟ್ ಆಧಾರದಲ್ಲಿ ಕೇಸ್ ನ ಚರ್ಚೆಗೆ ಹೋಗುವುದಿಲ್ಲ. ಪಿಜೆಎಫ್ ಅನ್ನು ನಿಷೇಧಿಸಲಾಗಿಲ್ಲ. ಧಲಿವಾಲ್ ಮತ್ತು ಲಾಲ್ ಅನ್ನು ಕೂಡಾ ನಿಷೇಧಿಸಲಾಗಿಲ್ಲ. ಅವರು ಇಲ್ಲಿ, ಅಲ್ಲಿ ಅಂತ ಸುಖಾಸುಮ್ಮನೆ ವಿಷಯಗಳನ್ನು ಲಿಂಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸಿದ ಅಥವಾ ಹಿಂಸಾಚಾರದಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲಿ ನಿಮಗೆ ಟೂಲ್‌ಕಿಟ್ ಏನಾದ್ರೂ ಪತ್ತೆಯಾಯ್ತೆ ? ಪೊಲೀಸರ ಹೊರತಾಗಿ ಬೇರೆ ಯಾರೂ ಕೂಡಾ ಈ ಆರೋಪಗಳಿಗೆ ಸಾಕ್ಷಿ ಇಲ್ಲ. ಹಿಂಸಾಚಾರ ಸಂಬಂಧ 149 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ನನ್ನೊಂದಿಗೆ ಮಾತನಾಡಿದ ಯಾರಾದರೂ ಇದ್ದಾರೆಯೇ? 

ಸಿದ್ದಾರ್ಥ್ ಅಗರ್ವಾಲ್ : ಕೆಂಪುಕೋಟೆಯ ಮೇಲೆ ಧ್ವಜವನ್ನು ಹಾರಿಸಿರೋ ಬಗ್ಗೆ, ಅಥವಾ ಹಿಂಸಾಚಾರದ ಬಗ್ಗೆ ನಾನೇನೂ ಹೇಳಲ್ಲ. ಕೆಂಪುಕೋಟೆಗೆ ಮೆರವಣಿಗೆ ಹೋಗಿದ್ದೇ ತಪ್ಪಾಗಿರಬಹುದು. ಮೆರವಣಿಗೆಗೆ ಅವಕಾಶ ಕೊಟ್ಟಿದ್ದು ಯಾರು ? ದೆಹಲಿ ಪೊಲೀಸರು ಅವಕಾಶ ಕೊಟ್ಟವರು ತಾನೆ ? 

ಸಿದ್ದಾರ್ಥ್ ಅಗರ್ವಾಲ್ : ದೆಹಲಿ ನಗರದಲ್ಲಿ ಮೆರವಣಿಗೆ ನಡೆಸಲು ಅವಕಾಶ ಕೊಡೋ ವಿವಾದ  ಸುಪ್ರೀಂ ಕೋರ್ಟ್ ಮುಂದೆ ಇತ್ತು. ದೆಹಲಿ ಪೊಲೀಸರು ತೀರ್ಮಾನ ತೆಗೆದುಕೊಳ್ಳಬೇಕೆಂದು ಸುಪ್ರಿಂ ಕೋರ್ಟ್ ಹೇಳಿತ್ತು. ದೆಹಲಿ ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿದರು. ಆಗ ನಾನು ( ದಿಶಾ) ಜನರಿಗೆ ಅದರ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದರೆ, ಅದು ದೇಶದ್ರೋಹವೇ? ನಾನು ಪ್ರತಿಭಟನೆಯ ಅಥವಾ ಮೆರವಣಿಗೆಯ ಸಂಘಟಕಿಯಲ್ಲ. ಸಂಘಟಕರು ದೇಶದ್ರೋಹವನ್ನು ಎದುರಿಸುತ್ತಿದ್ದಾರೆ? ರ್ಯಾಲಿಯು ನ್ಯಾಯಸಮ್ಮತವಾಗಿದ್ದರೆ, ಅದಕ್ಕಾಗಿ ಕೆಲಸ ಮಾಡಿದ ನಾನು ಯಾವುದೇ ತಪ್ಪು ಮಾಡಿಲ್ಲ. 

ಕೋರ್ಟ್ : ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ರವರೇ, 
 ನೀವು ಇನ್ನೂ ಹೆಚ್ಚಿನದನ್ನು ಹೇಳಲಿಕ್ಕಿದೆಯೋ? ಏನಾದರೂ ಸಾಕ್ಷ್ಯ ಕೊಡುವುದಿದೆಯೋ ಅಥವಾ ಆದೇಶಕ್ಕಾಗಿ ನಾನು  ಲಿಸ್ಟ್ ಮಾಡಲೇ ? 

ಎಎಸ್ ಜಿ ರಾಜು : ಇಲ್ಲಿ ಅವಳ ಇತಿಹಾಸ ಅಪ್ರಸ್ತುತ. ನೀವು ಯಾರೊಂದಿಗೆ ಸಂವಹನ ನಡೆಸುತ್ತೀರೋ ಅವರು ಖಲಿಸ್ತಾನಿ. ಟೂಲ್ಕಿಟ್ ಅನ್ನು ಪ್ರತ್ಯೇಕವಾಗಿ ನೋಡಬಾರದು. ಖಂಡಿತವಾಗಿಯೂ ಹಿಂಸಾಚಾರದಲ್ಲಿ ಟೂಲ್ ಕಿಟ್ ಕಂಡುಬರುವುದಿಲ್ಲ. ಆದರೆ ನೀವು ಅವರನ್ನು ಪ್ರಚೋದಿಸಿದ್ದೀರಿ. ಅದಕ್ಕೆ ಸಾಕ್ಷ್ಯಚಿತ್ರವಿದೆ.

ಕೋರ್ಟ್ : ಈ ಸಾಕ್ಷ್ಯಚಿತ್ರ ಪುರಾವೆ ಎಲ್ಲಿದೆ? 

ಎಎಸ್ ಜಿ ರಾಜು : ಲಿಂಕ್ ಇದೆ. ನೀವು ಲಿಂಕ್ ಅನ್ನು ಕ್ಲಿಕ್ ಮಾಡಿ, ಅದು ಖಲಿಸ್ತಾನಿ ಚಳುವಳಿ ಲಿಂಕ್ ಎಂದು ನಿಮಗೆ ತಿಳಿಯುತ್ತದೆ. 

ಸಿದ್ದಾರ್ಥ್ ಅಗರ್ವಾಲ್ : ಐಟಿ ಕಾಯ್ದೆಯಡಿ, ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ ಈ ವೆಬ್‌ಸೈಟ್‌ಗಳನ್ನು ಏಕೆ ನಿರ್ಬಂಧಿಸಲಾಗಿಲ್ಲ? 

ಕೋರ್ಟ್ : ಟೂಲ್ಕಿಟ್ ಚಹಾ ಮತ್ತು ಯೋಗವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದೀರಿ. ಅದಕ್ಕೇನು ದಾಖಲೆ ಇದೆ ?

ಡಿಸಿಪಿ : ನಿರ್ಧಿಷ್ಟ ದಾಖಲೆ ಇಲ್ಲ. ಟೆಂಪ್ಲೇಟ್‌ಗಳು, ವೆಬ್‌ಸೈಟ್‌ಗಳು ಇತ್ಯಾದಿಗಳಿವೆ. ಕೆಲವು ನಿರ್ದಿಷ್ಟ ಕೆಲಸಗಳು ಭಾರತದ ಚಿಹ್ನೆಗಳನ್ನು ಗುರಿಯಾಗಿಸಿಕೊಂಡವು. ಇದು ಕೇವಲ ಯೋಗ ಮತ್ತು ಚಹಾ ಎಂದಲ್ಲ.

ದಿಶಾ ಜಾಮೀನು ಅರ್ಜಿ ಆದೇಶವನ್ನು ಫೆಬ್ರವರಿ 22 ರಂದು ಪ್ರಕಟಿಸಲಿದೆ.

Writer - ನವೀನ್ ಸೂರಿಂಜೆ

contributor

Editor - ನವೀನ್ ಸೂರಿಂಜೆ

contributor

Similar News