ಪುಣೆಯಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಪ್ರಾರಂಭ: ಶಾಲಾ ಕಾಲೇಜುಗಳ ಮುಚ್ಚುಗಡೆ

Update: 2021-02-21 14:39 GMT
ಸಾಂದರ್ಭಿಕ ಚಿತ್ರ

 ನಾಗ್ಪುರ,ಫೆ.21: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ಮುಂದುವರಿದರೆ ರಾಜ್ಯ ಸರಕಾರವು ಬಾಧಿತ ಪ್ರದೇಶಗಳಲ್ಲಿ ಸಂಜೆ ಐದು ಗಂಟೆಯಿಂದ ಬೆಳಗಿನ ಐದರವರೆಗೆ 12 ಗಂಟೆಗಳ ರಾತ್ರಿ ಕರ್ಫ್ಯೂವನ್ನು ಹೇರಬಹುದು ಎಂದು ಮಹಾರಾಷ್ಟ್ರದ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ ವಡೆಟ್ಟಿವಾರ್ ಅವರು ರವಿವಾರ ಇಲ್ಲಿ ತಿಳಿಸಿದರು. ನಿರ್ಧಾರವನ್ನು ಅಂತಿಮಗೊಳಿಸಲು ಮುಂದಿನ ವಾರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರೊಂದಿಗೆ ಸಭೆಯನ್ನು ನಡೆಸಲಾಗುವುದು ಎಂದರು.

ರಾಜ್ಯ ಸರಕಾರವು 12 ಗಂಟೆಗಳ ರಾತ್ರಿ ಕರ್ಫ್ಯೂ ಹೇರಲು ಹಾಗೂ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸುವ ಮತ್ತು 50ಕ್ಕೂ ಅಧಿಕ ಜನರಿಗೆ ಅವಕಾಶ ನೀಡುವ ಮದುವೆ ಹಾಲ್‌ಗಳಿಗೆ ಒಂದು ಲಕ್ಷ ರೂ.ಗಳ ಭಾರೀ ದಂಡವನ್ನು ಹೇರುವ ಬಗ್ಗೆ ಚಿಂತನೆ ನಡೆಸುತ್ತಿದೆ.

 ಇಡೀ ವಿದರ್ಭ ಪ್ರದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ನಾಗ್ಪುರದಲ್ಲಿಯೂ ಶುಕ್ರವಾರ ಒಂದೇ ದಿನ 750ಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ಸರಕಾರವು ಈಗಾಗಲೇ ಅಮರಾವತಿ,ವಾರ್ಧಾ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲಿ ಭಾಗಶಃ ಲಾಕ್‌ಡೌನ್ ಘೋಷಿಸಿದೆ. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋದರೆ ಸರಕಾರವು ರಾತ್ರಿ ಕರ್ಫ್ಯೂದಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗುತ್ತದೆ ಎಂದು ತಿಳಿಸಿದ ವಡೆಟ್ಟಿವಾರ್,ತಮ್ಮ ಪ್ರದೇಶಗಳಲ್ಲಿಯ ಸ್ಥಿತಿಯನ್ನು ಅವಲಂಬಿಸಿ ಲಾಕ್‌ಡೌನ್‌ಗಳ ಬಗ್ಗೆ ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗುವುದು. ಕರ್ಫ್ಯೂ ಸಮಯದಲ್ಲಿ ಮದುವೆ ಹಾಲ್‌ಗಳು,ಮಾರುಕಟ್ಟೆಗಳು,ಸಿನಿಮಾ ಮಂದಿರಗಳು ಮತ್ತು ಜನರು ಸೇರುವ ಇತರ ಸ್ಥಳಗಳನ್ನು ಮುಚ್ಚಲಾಗುವುದು. ಹೆಚ್ಚಿನ ಜನರು ಎಚ್ಚರಿಕೆಯನ್ನು ಗಾಳಿಗೆ ತೂರಿರುವುದು ಮತ್ತು ಕೋವಿಡ್-19 ಶಿಷ್ಟಾಚಾರಗಳನ್ನು ಪಾಲಿಸದಿರುವುದು ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದರು.

ತರಕಾರಿ ಮಾರುಕಟ್ಟೆಗಳಂತಹ ಸ್ಥಳಗಳು ನಿರ್ಬಂಧಗಳೊಂದಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಮಾತ್ರ ತೆರೆಯಲು ಅವಕಾಶ ನೀಡುವ ಬಗ್ಗೆಯೂ ಸರಕಾರವು ಚಿಂತನೆ ನಡೆಸುತ್ತಿದೆ ಎಂದೂ ಸಚಿವರು ತಿಳಿಸಿದರು.

ಆದರೆ ಸರಕಾರದ ಕ್ರಮಕ್ಕೆ ಸಾರ್ವಜನಿಕ ಆರೋಗ್ಯ ತಜ್ಞರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಪ್ರಕರಣಗಳ ಏರಿಕೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ಆಡಳಿತವು ಈ ಪ್ರದೇಶಗಳಲ್ಲಿ ಮಾತ್ರ ಕಟ್ಟುನಿಟ್ಟಿನ ನಿಗಾಯಿರಿಸುವ ಅಗತ್ಯವಿದೆ. ಲಾಕ್‌ಡೌನ್‌ಗಳು ಆರ್ಥಿಕತೆಗೆ ಮಾರಕವಾಗುತ್ತವೆ. ಅಮರಾವತಿ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲಿ ಭಾಗಶಃ ಲಾಕ್‌ಡೌನ್ ಹೇರಲಾಗಿದೆ. ಇವು ಸೋಂಕು ಹರಡುವುದನ್ನು ನಿಲ್ಲಿಸಲು ನೆರವಾಗುವುದಿಲ್ಲ. ವ್ಯಾಪಕ್ ಲಾಕ್‌ಡೌನ್‌ಗಳ ಬದಲು ಕಂಟೈನ್ಮೆಂಟ್ ವಲಯಗಳ ಮೇಲೆ ಸ್ಥಳೀಯ ಅಧಿಕಾರಿಗಳು ಹೆಚ್ಚು ನಿಗಾಯಿರಿಸಬೇಕು ಮತ್ತು ಅಂತಹ ಸ್ಥಳಗಳಲ್ಲಿ ಕನಿಷ್ಠ 10 ದಿನಗಳ ಕಾಲ ನಿರ್ಬಂಧಗಳು ಜಾರಿಯಲ್ಲಿರಬೇಕು ಎಂದು ಕೋವಿಡ್ ನಿಯಂತ್ರಣ ಕುರಿತು ರಾಜ್ಯ ಸರಕಾರಕ್ಕೆ ಸಲಹೆಗಾರರಾಗಿರುವ ಡಾ.ಸುಭಾಷ ಸಾಳುಂಕೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ತನ್ಮಧ್ಯೆ ಮುಂಬೈ ಮಹಾನಗರದಲ್ಲಿ ಲಾಕ್‌ಡೌನ್ ಹೇರುವುದಾಗಿ ಮೇಯರ್ ಕಿಶೋರಿ ಪೆಡ್ನೇಕರ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಕಳೆದ ಏಳು ದಿನಗಳಿಂದ ಕೇರಳ,ಮಹಾರಾಷ್ಟ್ರ,ಪಂಜಾಬ,ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದಲ್ಲಿ ದೈನಂದಿನ ಹೊಸ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರವಿವಾರ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News