ಕೋವಿಡ್-19ರ ಹೊಸ ಭಾರತೀಯ ತಳಿಗಳು ಹೆಚ್ಚು ಸಾಂಕ್ರಾಮಿಕ:ಏಮ್ಸ್ ಮುಖ್ಯಸ್ಥ

Update: 2021-02-21 14:05 GMT

 ಹೊಸದಿಲ್ಲಿ,ಫೆ.21: ದೇಶದ ಸಂಪೂರ್ಣ ಜನಸಂಖ್ಯೆಗೆ ಕೋವಿಡ್-19ರಿಂದ ರಕ್ಷಣೆ ದೊರೆಯಬೇಕಿದ್ದರೆ ಕನಿಷ್ಠ ಶೇ.80ರಷ್ಟು ಜನರಲ್ಲಿ ಪ್ರತಿಕಾಯಗಳು ಅಭಿವೃದ್ಧಿಗೊಂಡಿರಬೇಕು,ಹೀಗಾಗಿ ಕೊರೋನವೈರಸ್‌ಗೆ ಹರ್ಡ್ ಇಮ್ಯುನಿಟಿ ಅಥವಾ ಗುಂಪು ಪ್ರತಿರೋಧಕತೆ ಎನ್ನುವುದು ಭಾರತದ ಮಟ್ಟಿಗೆ ಮಿಥ್ಯೆಯಾಗಿದೆ ಎಂದು ಇಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ. ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು,ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ನೂತನ ಭಾರತೀಯ ರೂಪಾಂತರಿತ ತಳಿಗಳು ಹೆಚ್ಚು ಸಾಂಕ್ರಾಮಿಕ ಮತ್ತು ಅಪಾಯಕಾರಿಯಾಗುವ ಸಾಧ್ಯತೆಯನ್ನು ಪರಿಗಣಿಸಿದರೆ ದೇಶದಲ್ಲಿ ಹರ್ಡ್ ಇಮ್ಯುನಿಟಿಯನ್ನು ಸಾಧಿಸುವುದು ಕಷ್ಟವಾಗಲಿದೆ ಎಂದರು. ಹೊಸ ತಳಿಯು ಕೊರೋನವೈರಸ್‌ಗೆ ಪ್ರತಿಕಾಯಗಳನ್ನು ಬೆಳೆಸಿಕೊಂಡಿರುವ ಜನರಿಗೂ ಮರುಸೋಂಕನ್ನುಂಟು ಮಾಡಬಲ್ಲದು ಎಂದೂ ಅವರು ತಿಳಿಸಿದರು.

ಇದೇ ವೇಳೆ,ಭಾರತದಾದ್ಯಂತ ಕೊರೋನವೈರಸ್‌ನ 240 ಹೊಸ ಪ್ರಭೇದಗಳು ಪತ್ತೆಯಾಗಿದ್ದು,ಕಳೆದೊಂದು ವಾರದಿಂದ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣವಾಗಿವೆ ಎಂದು ಮಹಾರಾಷ್ಟ್ರದ ಕೋವಿಡ್ ಕಾರ್ಯಪಡೆಯ ಸದಸ್ಯ ಡಾ.ಶಶಾಂಕ ಜೋಶಿ ತಿಳಿಸಿದ್ದಾರೆ.

ಮಹಾರಾಷ್ಟ್ರ,ಕೇರಳ,ಮಧ್ಯಪ್ರದೇಶ,ಛತ್ತೀಸ್‌ಗಡ ಮತ್ತು ಪಂಜಾಬ್ ಗಳಲ್ಲಿ ಹೊಸ ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿವೆ.

ಹರ್ಡ್ ಇಮ್ಯುನಿಟಿ ಸಾಧಿಸಲು ಏಕೆ ಸಾಧ್ಯವಿಲ್ಲ ಎನ್ನುವುದನ್ನು ವಿವರಿಸಿದ ಡಾ.ಗುಲೇರಿಯಾ,ಕೊರೋನವೈರಸ್‌ನ ರೂಪಾಂತರಿತ ಅಥವಾ ಹೊಸ ಪ್ರಭೇದಗಳು ಪ್ರತಿರೋಧಕ ವ್ಯವಸ್ಥೆಯನ್ನು ಭೇದಿಸುವ ಸಾಮರ್ಥ್ಯ ಹೊಂದಿವೆ. ಲಸಿಕೆಗಳಿಂದ ಅಥವಾ ಹಿಂದೆ ಸೋಂಕಿಗೆ ಗುರಿಯಾಗಿ ಶರೀರದಲ್ಲಿ ಪ್ರತಿಕಾಯಗಳು ಅಭಿವೃದ್ಧಿಗೊಂಡಿರುವ ವ್ಯಕ್ತಿಗೂ ಈ ಪ್ರಭೇದಗಳು ಮರುಸೋಂಕನ್ನುಂಟು ಮಾಡಬಲ್ಲವು ಎಂದರು. ಇಂತಹ ಸ್ಥಿತಿಯಲ್ಲಿ ಕೋವಿಡ್ ಶಿಷ್ಟಾಚಾರಗಳ ಪಾಲನೆ ಅನಿವಾರ್ಯವಾಗಿದೆ, ಪರೀಕ್ಷೆ,ಸಂಪರ್ಕ ಪತ್ತೆ ಮತ್ತು ಐಸೊಲೇಷನ್‌ನಂತಹ ಕಠಿಣ ಕ್ರಮಗಳನ್ನು ಭಾರತವು ಮತ್ತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಹೊಸ ತಳಿಗಳ ವಿರುದ್ಧ ಕೋವಿಡ್-19 ಲಸಿಕೆಗಳು ಪರಿಣಾಮಕಾರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಲಸಿಕೆಗಳು ಪರಿಣಾಮಕಾರಿಯಾಗಲಿವೆ,ಆದರೆ ಅವುಗಳ ಪರಿಣಾಮಕಾರಿತ್ವ ಕಡಿಮೆಯಾಗಬಹುದು. ಉದಾಹರಣೆಗೆ ಕೋವಿಡ್‌ನಿಂದ ತಪ್ಪಿಸಿಕೊಳ್ಳುವುದು ಜನರಿಗೆ ಸಾಧ್ಯವಾಗದಿರಬಹುದು,ಆದರೆ ಅವರಿಗೆ ಸೋಂಕು ಸೌಮ್ಯ ಸ್ವರೂಪದ್ದಾಗಿರುತ್ತದೆ ಎಂದು ಹೇಳಿದರು. ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News