ಕುವೈತ್: ವಿದೇಶೀಯರ ಆಗಮನಕ್ಕೆ ನಿಷೇಧ ವಿಸ್ತರಣೆ

Update: 2021-02-21 16:26 GMT

 ಕುವೈತ್ ಸಿಟಿ,ಫೆ.21: ಕೊರೋನ ವೈರಸ್ ಹಾವಳಿ ಮತ್ತೆ ಉಲ್ಬಣಿಸುವುದನ್ನು ತಡೆಯುವ ಉದ್ದೇಶದಿಂದ ಕುವೈತ್ ಆಡಳಿತವು ಮುಂದಿನ ಆದೇಶದವರೆಗೆ ಕುವೈತ್ ಪ್ರಜೆಗಳಲ್ಲದವರು ದೇಶಕ್ಕೆ ಆಗಮಿಸುವುದನ್ನು ನಿಷೇಧಿಸಿದೆ. ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಯಲು ಕೈಗೊಳ್ಳಲಾದ ನೂತನ ಆರೋಗ್ಯಪಾಲನಾ ಕ್ರಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಕುವೈತ್‌ನ ನಾಗರಿಕ ವಾಯು ಯಾನದ ಮಹಾನಿರ್ದೇಶನಾಲಯವು, ಫೆಬ್ರವರಿ 7ರಿಂದ ಕುವೈತ್ ಪ್ರಜೆಗಳಲ್ಲದವರು ಕುವೈತ್‌ಗೆ ಆಗಮಿಸುವುನ್ನು ನಿಷೇಧಿಸಿತ್ತು. ಇದೀಗ ಆ ನಿಷೇಧವನ್ನು ಅದು ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಿದೆ.

 ಫೆಬ್ರವರಿ 21ರ ಮಧ್ಯರಾತ್ರಿಯಿಂದ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗಾಗಿ ವಿಮಾನನಿಲ್ದಾಣವನ್ನು ಸಜ್ಜುಗೊಳಿಸಲು ನಾಗರಿಕ ವಾಯುಯಾನ ಇಲಾಖೆ ಹಾಗೂ ಆರೋಗ್ಯಪಾಲನಾ ಸಚಿವಾಲಯವು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲೇ ವಿದೇಶಿ ಪ್ರಯಾಣಿಕರಿಗೆ ನಿಷೇಧದ ಅವಧಿಯನ್ನು ವಿಸ್ತರಿಸಿರುವುದು ಅಚ್ಚರಿ ಮೂಡಿಸಿದೆ.

ಶುಕ್ರವಾರದಂದು ಕುವೈತ್ಗೆ ನಾಗರಿಕ ನಿರ್ದೇಶನಾಲಯವು ಪತ್ರಿಕಾಹೇಳಿಕೆಯೊಂದನ್ನು ನೀಡಿದ್ದು, ಅದರಲ್ಲಿ ಕುವೈತ್‌ಗೆ ಆಗಮಿಸುವ ಎಲ್ಲಾ ಕುವೈತಿಗಳು ಹಾಗೂ ಕುವೈತ್ ಪ್ರಜೆಗಳಲ್ಲದವರು ನೂತನ ಆರೋಗ್ಯಪಾಲನಾ ವಿಧಿವಿಧಾನಗಳನ್ನು ಅನುಸರಿಸಬೇಕೆಂದು ದೇಶಿಸಿತ್ತು. ಇದರ ಜೊತೆಗೆ ಕೊರೋನಾದ ಸೋಂಕಿನ ಅತ್ಯಂತ ಅಪಾಯಕ್ಕೊಳಗಾಗಿರುವ 25 ದೇಶಗಳಿಂದ ಆಗಮಿಸುವವರು 14 ದಿನಗಳ ಕಾಲ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ರುವುದನ್ನು ಕಡ್ಡಾಯಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News