ದೇಶದ ಕೋವಿಡ್ ಲಸಿಕೆ ಅಭಿಯಾನಕ್ಕೆ ಖಾಸಗಿ ಸಹಯೋಗ

Update: 2021-02-23 03:49 GMT

ಹೊಸದಿಲ್ಲಿ, ಫೆ.23: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಏರುಗತಿಯಲ್ಲಿ ಸಾಗುತ್ತಿರುವ ನಡುವೆಯೇ, 50 ವರ್ಷ ಮೇಲ್ಪಟ್ಟ ಮತ್ತು ಸಹ ಅಸ್ವಸ್ಥತೆ ಹೊಂದಿರುವ ವರ್ಗಕ್ಕೆ ಲಸಿಕೆ ನೀಡುವ ನಿಟ್ಟಿನಲ್ಲಿ ಖಾಸಗಿ ವಲಯದ ಸಹಕಾರ ಪಡೆಯಲು ಕೇಂದ್ರ ಸರಕಾರ ನಿರ್ಧರಿಸಿದೆ.

ಗೃಹ ಸಚಿವ ಅಮಿತ್ ಶಾ ಈ ಸಂಬಂಧ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ತ್ವರಿತಗೊಳಿಸಲು ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದರು. 50 ವರ್ಷ ಮೇಲ್ಪಟ್ಟ ವರ್ಗದಲ್ಲಿ ಸುಮಾರು 27 ಕೋಟಿ ಮಂದಿಗೆ ಲಸಿಕೆ ಹಾಕಬೇಕಾಗಿರುವುದರಿಂದ ಖಾಸಗಿಯ ಸಹಕಾರ ಬಯಸಿದೆ.

ಖಾಸಗಿ ವಲಯದ ದೊಡ್ಡ ಪ್ರಮಾಣದ ಪಾಲ್ಗೊಳ್ಳುವಿಕೆಯೊಂದಿಗೆ ಮುಂದಿನ ಹಂತದ ಲಸಿಕೆ ಅಭಿಯಾನದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದ್ದಾರೆ.

"ಈಗ ಕೂಡಾ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವಲ್ಲಿ ಖಾಸಗಿ ವಲಯ ಪ್ರಮುಖ ಪಾತ್ರ ವಹಿಸುತ್ತಿದೆ. 10 ಸಾವಿರ ಲಸಿಕಾ ಸೆಷನ್‌ಗಳ ಪೈಕಿ 2,000 ಸೆಷನ್‌ಗಳನ್ನು ಖಾಸಗಿ ವಲಯ ಪಾಲುದಾರಿಕೆ ನೀಡಿದೆ. ಮುಂದಿನ ಹಂತದಲ್ಲಿ ಈ ಅಭಿಯಾನ ಮತ್ತಷ್ಟು ವೇಗ ಪಡೆಯಲಿದ್ದು, ಖಾಸಗಿ ವಲಯದ ತೊಡಗಿಸಿಕೊಳ್ಳುವಿಕೆ ಮತ್ತಷ್ಟು ವಿಸ್ತೃತವಾಗಲಿದೆ" ಎಂದು ವಿವರಿಸಿದರು.

ಈಗಾಗಲೇ ಶೇಕಡ 67ರಷ್ಟು ಆರೋಗ್ಯ ಸಿಬ್ಬಂದಿ ಮತ್ತು ಶೇಕಡ 40ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿದಿನ 50 ಸಾವಿರ ಸೆಷನ್‌ಗಳನ್ನು ಹೊಂದಲು ನಿರ್ಧರಿಸಲಾಗಿದೆ. ಈಗಾಗಲೇ 11.15 ಲಕ್ಷ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಶೇಕಡ 40-50ರಷ್ಟು ಸೆಷನ್‌ಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News