ಭಾರತದ ವನಿತೆಯರಿಗೆ ಐದು ಚಿನ್ನ

Update: 2021-02-23 04:40 GMT

 ಬುಡ್ವಾ: ಮಾಂಟೆನೆಗ್ರೊದ ಬುಡ್ವಾದಲ್ಲಿ ನಡೆದ 30ನೇ ಆಡ್ರಿಯಾಟಿಕ್ ಪರ್ಲ್ ಯೂತ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ಸೋಮವಾರ ಎರಡು ಚಿನ್ನ ಗೆಲ್ಲುವುದರೊಂದಿಗೆ ಭಾರತದ ವನಿತೆಯರು ಈ ವರೆಗೆ ಒಟ್ಟು ಐದು ಚಿನ್ನ ಬಾಚಿಕೊಂಡಿದ್ದಾರೆ.

ಬಾಬಿರೋಜಿಸಾನ ಚಾನು (51 ಕೆ.ಜಿ.) ಮತ್ತು ಅರುಂಧತಿ ಚೌಧರಿ (69 ಕೆ.ಜಿ.) ಚಿನ್ನ ಹಾಗೂ ಲಕ್ಕಿ ರಾಣಾ (64 ಕೆ.ಜಿ.) ಬೆಳ್ಳಿ ಪದಕವನ್ನು ಭಾರತದ ಖಾತೆಗೆ ಜಮೆ ಮಾಡಿದರು.

 ಇದರೊಂದಿಗೆ ಭಾರತದ ವನಿತೆಯರು ಪಡೆದಿರುವ ಪದಕಗಳ ಸಂಖ್ಯೆ 10ಕ್ಕೆ ಏರಿದೆ. ಐದು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚು ಪಡೆಯುವುದರೊಂದಿಗೆ ಭಾರತ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಉಜ್ಬೇಕಿಸ್ತಾನ್ (2 ಚಿನ್ನ) ಮತ್ತು ಜೆಕ್ ರಿಪಬ್ಲಿಕ್ (1ಚಿನ್ನ) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

 ಮೂರು ಬಾರಿ ಖೇಲೋ ಇಂಡಿಯಾ ಚಿನ್ನದ ಪದಕ ವಿಜೇತೆ ಅರುಂಧತಿ ರವಿವಾರ ಉಕ್ರೇನ್‌ನ ಮರಿಯಾನಾ ಸ್ಟೊಯಿಕೊ ವಿರುದ್ಧ 5- 0 ಅಂತರದಲ್ಲಿ ಜಯ ಸಾಧಿಸಿದರು.

  ಎಂಸಿ ಮೇರಿ ಕೋಮ್ ಅವರ ಇಂಫಾಲ್ ಮೂಲದ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವ ಚಾನು ಅವರು ಏಶ್ಯನ್ ಜೂನಿಯರ್ ಚಾಂಪಿಯನ್ ಉಜ್ಬೇಕಿಸ್ತಾನದ ಸಬೀನಾ ಬೊಬೊಕುಲೋವಾ ಅವರನ್ನು 3-2 ಅಂತರದಿಂದ ಬಗ್ಗು ಬಡಿದರು.

ಲಕ್ಷಿ 5-0 ಅಂತರದಲ್ಲಿ ಬಾಕ್ಸರ್ ಲಿಯಾ ಪುಕ್ಕಿಲಾ ಎದುರು ಸೋಲನುಭವಿಸಿ ಬೆಳ್ಳಿ ಪದಕ ಗೆದ್ದರು.

 ಆಲ್ಫಿಯಾ ಪಠಾಣ್ (+ 81 ಕೆ.ಜಿ.), ವಿಂಕಾ (60 ಕೆ.ಜಿ.) ಮತ್ತು ಟಿ.ಸನಮಾಚಾ ಚಾನು (75 ಕೆ.ಜಿ) ಚಿನ್ನ ಪಡೆದಿದ್ದರು.

  ಪುರುಷರ ವಿಭಾಗದಲ್ಲಿ ಎರಡು ಪದಕಗಳೊಂದಿಗೆ 19 ಸದಸ್ಯರ ಭಾರತದ ತಂಡವು ಎರಡನೇ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News