ವಾಹಿನಿಗೆ ಮರಳಿದ ರಾಜ್‌ ದೀಪ್‌ ಸರ್ದೇಸಾಯಿ: ವಜಾಗೊಳಿಸುವಂತೆ ಬಿಜೆಪಿ ನಾಯಕರಿಂದ ಸರಣಿ ಟ್ವೀಟ್!‌

Update: 2021-02-24 07:33 GMT
Photo: facebook.com/rajdeepsardesai

ಹೊಸದಿಲ್ಲಿ: ಜನವರಿ 26ರಂದು ದಿಲ್ಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ರೈತನೊಬ್ಬನ ಸಾವಿನ ಕುರಿತಂತೆ ತಪ್ಪಾಗಿ ಟ್ವೀಟ್  ಮಾಡಿದ್ದಕ್ಕಾಗಿ ಇಂಡಿಯಾ ಟುಡೆ ತನ್ನ ಪ್ರಮುಖ ಆ್ಯಂಕರ್ ಹಾಗೂ ಸಲಹಾ ಸಂಪಾದಕ ರಾಜದೀಪ್ ಸರ್ದೇಸಾಯಿ ಅವರನ್ನು ಎರಡು ವಾರಗಳ ಕಾಲ ಕೆಲಸದಿಂದ ವಜಾಗೊಳಿಸಿ ಅವರ ವೇತನವನ್ನೂ ಕಡಿತಗೊಳಿಸಿತ್ತು. ಈಗ ಮತ್ತೆ  ರಾಜದೀಪ್ ಇಂಡಿಯಾ ಟುಡೇ ವಾಹಿನಿಯಲ್ಲಿ ತಮ್ಮ ಕಾರ್ಯಕ್ರಮ ಆರಂಭಿಸಿದ್ದಾರೆ. ಆದರೆ ಇದು ರಾಜದೀಪ್ ವಿರೋಧಿಗಳಿಗೆ ಹಿಡಿಸಿಲ್ಲ ಎಂದು newslaundry.com ವರದಿ ತಿಳಿಸಿದೆ. ಪ್ರಮುಖವಾಗಿ ಬಿಜೆಪಿ ಬೆಂಬಲಿಗರು #ಅರುಣ್‍ಪುರಿಸ್ಯಾಕ್‍ರಾಜದೀಪ್  ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡಿ ರಾಜದೀಪ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಈಗಾಗಲೇ ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.

ಜಲಶಕ್ತಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರತನ್ ಲಾಲ್ ಕಟಾರಿಯಾ ಟ್ವೀಟ್ ಮಾಡಿ ಸರ್ದೇಸಾಯಿ "ಒಬ್ಬ ವರದಿಗಾರನಲ್ಲ" ಎಂದು ಬರೆದಿದ್ದರೆ, ಬಿಜೆಪಿಯ ಅಧಿಕೃತ ವಕ್ತಾರ ಸುರೇಶ್ ನಖುವಾ ಟ್ವೀಟ್ ಮಾಡಿ ಸರ್ದೇಸಾಯಿ ಅವರು"ನಕಲಿ ಸುದ್ದಿ ಪ್ರಕಟಿಸುವವರು" ಎಂದು ಬರೆದಿದ್ದಾರೆ.

ಇನ್ನೊಬ್ಬ ಬಿಜೆಪಿ ವಕ್ತಾರ ತಜಿಂದರ್ ಬಾಲ್ ಸಿಂಗ್ ಬಗ್ಗ ಹಾಗೂ ಬಿಜೆಪಿಯ ಉತ್ತರಾಖಂಡ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ಟ್ ಟ್ವೀಟ್ ಮಾಡಿ ಇಂತಹುದೇ ಪೋಸ್ಟ್ ಮಾಡಿದ್ದಾರೆ. ಸುರೇಶ್ ಭಟ್ಟ್ ಅವರು ತಮ್ಮ ಟ್ವೀಟ್‍ನಲ್ಲಿ "ನಕಲಿ ಸುದ್ದಿ ಹರಡಿ ಈಗ ಮತ್ತೆ ರಾಜದೀಪ್ ಸರ್ದೇಸಾಯಿ ಇಂಡಿಯಾ ಟುಡೆಗೆ ಮರಳಿದ್ದಾರೆ" ಎಂದು ಬರೆದಿದ್ದಾರೆ.

ಬಿಜೆಪಿಯ ವಕ್ತಾರ ಗೌರವ್ ಗೋಯೆಲ್ ಕೂಡ ಟ್ವೀಟ್ ಮಾಡಿ "ತಾರಾ ನಕಲಿ ಸುದ್ದಿ ಪತ್ರಕರ್ತನಿಗೆ ಯಾವುದೇ ಹುದ್ದೆ ಅಥವಾ ಕೆಲಸ ನೀಡಬಾರದು" ಎಂದು ಬರೆದಿದ್ದಾರೆ.

ಇಂಡಿಯಾ ಟುಡೆ ಹಿಂದಿ ಮ್ಯಾಗಜೀನ್‍ನ ಮಾಜಿ ಆಡಳಿತ ಸಂಪಾದಕ ದಿಲೀಪ್ ಮಂಡಲ್ ಅವರು ರಾಜದೀಪ್ ಕುರಿತ ಹ್ಯಾಶ್ ಟ್ಯಾಗ್‍ಗೆ ತಮ್ಮ ಒಪ್ಪಿಗೆ ಸೂಚಿಸಿಲ್ಲ, ಆದರೆ ರಾಜದೀಪ್ ಅವರ ಸ್ಥಾನದಲ್ಲಿ ತಾನಿರುತ್ತಿದ್ದರೆ ಇಷ್ಟರೊಳಗಾಗಿ ರಾಜೀನಾಮೆ ನೀಡುತ್ತಿದ್ದೆ ಎಂದು ಬರೆದಿದ್ದಾರೆ.

ಟ್ರ್ಯಾಕ್ಟರ್ ರ್ಯಾಲಿ ವೇಳೆ ರೈತ ಪೊಲೀಸ್ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಆರಂಭದಲ್ಲಿ ಟ್ವೀಟ್ ಮಾಡಿದ್ದ ರಾಜದೀಪ್ ನಂತರ ಪೊಲೀಸರು ಆತ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮೃತಪಟ್ಟಿದ್ದಾನೆಂದು ಹೇಳಿದ ನಂತರ ತಮ್ಮ ಮೊದಲ ಟ್ವೀಟ್ ಡಿಲೀಟ್ ಮಾಡಿದ್ದರು.

ತಾವು ಮಾಡಿದ ತಪ್ಪಿನ ಕುರಿತು ರಾಜದೀಪ್ ನಂತರ ತಮ್ಮ ಟಿವಿ ಕಾರ್ಯಕ್ರಮದಲ್ಲೂ ವಿವರಿಸಿದ್ದರಲ್ಲದೆ ಟ್ರ್ಯಾಕ್ಟರ್ ಉರುಳಿ ಆತ ಸಾವನ್ನಪ್ಪಿದ್ದಾನೆಂದು ಪೊಲೀಸರು ಬಿಡುಗಡೆಗೊಳಿಸಿದ ವೀಡಿಯೋ ತಿಳಿಸುತ್ತದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News