ಇಂಟರ್ನೆಟ್ ಸ್ಥಗಿತಕ್ಕೆ ತೆರಬೇಕಾದ ಬೆಲೆ

Update: 2021-02-25 19:30 GMT

ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಚಳವಳಿ ನಮ್ಮ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ವಾಗ್ವಾದದ ಒಂದು ಭಾಗವಾಗಿಬಿಟ್ಟಿದೆ. ಸರಕಾರ ತಂದಿರುವ ಕಾಯ್ದೆಯ ಗುಣ, ದೋಷಗಳ ವಿಷಯ ಹಾಗಿರಲಿ, ಕೇಂದ್ರ ಸರಕಾರವು ಆ ಮಸೂದೆಗಳನ್ನು ಮಂಡಿಸಿದ ರೀತಿ ಹಾಗೂ ಚಳವಳಿಯನ್ನು ಎದುರಿಸಲು ಅದು ತೆಗೆದುಕೊಂಡ ಕ್ರಮಗಳು ಹಲವು ರೀತಿಯ ಆತಂಕಗಳಿಗೆ ಕಾರಣವಾಗಿದೆ.

ಆಗಾಗ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದು ಇವುಗಳಲ್ಲಿ ಒಂದು ಮುಖ್ಯ ಆತಂಕವಾಗಿದೆ. ಹಲವು ಗಡಿ ಪ್ರದೇಶಗಳ ಸುತ್ತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಗೃಹ ಸಚಿವಾಲಯವು ಆಜ್ಞೆಗಳನ್ನು ಹೊರಡಿಸಿತು. ದುರದೃಷ್ಟವಶಾತ್ ಇಂತಹ ಕ್ರಮಗಳು ಹೊಸತೇನೂ ಅಲ್ಲ. ವಿಶ್ವದ ಇತರ ಯಾವುದೇ ಪ್ರಜಾಪ್ರಭುತ್ವಕ್ಕಿಂತ ಹೆಚ್ಚಾಗಿ ಭಾರತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 400ಕ್ಕೂ ಹೆಚ್ಚು ಬಾರಿ ಹೀಗೆ ಇಂಟರ್ನೆಟ್ ಶಟ್‌ಡೌನ್ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ 223 ದಿನಗಳ ದೀರ್ಘ ಕಾಲದ ವರೆಗೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಂಡಗಳೂ ಸೇರಿದಂತೆ ಹಲವರು ಇದನ್ನು ಜನರಿಗೆ ನೀಡಲಾದ ಸಾಮೂಹಿಕ ಶಿಕ್ಷೆ ಎಂದಿದ್ದಾರೆ.

2020ರ ಜನವರಿಯಲ್ಲಿ, ಇಂಟರ್ನೆಟ್ ಸೇವೆಗಳನ್ನು ಪಡೆಯುವುದು ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದು ಎಂದು ಸುಪ್ರೀಂಕೋರ್ಟ್ ಘೋಷಿಸಿತ್ತು. ಇಂಟರ್ನೆಟ್ ಶಟ್‌ಡೌನ್‌ಗಳ ಪರಿಣಾಮ ಏನಾಗುತ್ತದೆ ಎಂಬುದನ್ನು ದೇಶದಲ್ಲಿ ಸಾಂಕ್ರಾಮಿಕವೊಂದು ಹರಡಿದಾಗ ಬಹಳ ಸ್ಪಷ್ಟವಾಗಿ ಕಾಣುತ್ತದೆ. ಕೋವಿಡ್-19 ತೀವ್ರವಾಗಿ ಹರಡಿದಾಗ ಉತ್ತಮ ಇಂಟರ್ನೆಟ್ ಸಂಪರ್ಕ ಹಾಗೂ ಡಿಜಿಟಲ್ ಸಲಕರಣೆಗಳ ಪರಿಜ್ಞಾನವಿದ್ದವರು ಇಂಟರ್ನೆಟ್ ಸಂಪರ್ಕ ಇಲ್ಲದವರಿಗಿಂತ ಬಹಳ ಕಡಿಮೆ ತೊಂದರೆ ಅನುಭವಿಸಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ಶಕ್ತರಾದರು. ಡಿಜಿಟಲ್ ಸಾಕ್ಷರತೆ ಅಥವಾ ಸಂಪರ್ಕವಿಲ್ಲದವರು ಎಲ್ಲಾ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳಿಂದ ವಂಚಿತರಾಗಿ ಪಡಬಾರದ ಪಾಡು ಪಡಬೇಕಾಯಿತು.

ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಡಿಜಿಟಲ್ ಸಂಪರ್ಕದ ಮೇಲೆ ಸಂಪೂರ್ಣ ನಿಷೇಧ ಹೇರುವುದರಿಂದ ಗಂಭೀರ ಸ್ವರೂಪದ ಸಾಮಾಜಿಕ ಸಂಕಷ್ಟಗಳು ಉದ್ಭವಿಸಬಹುದು. ನಮ್ಮಲ್ಲಿ ಸಮಾಜದ ಅಂಚಿನಲ್ಲಿರುವವರು ಆರೋಗ್ಯ ಮತ್ತು ಸಮಾಜಕಲ್ಯಾಣ ಸವಲತ್ತುಗಳು ಸಿಗದೆ ಪರದಾಡಬೇಕಾಗುತ್ತದೆ. ಸೋಂಕಿನ ಅಪಾಯವಿರುವ ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು ಸೇರಿದಂತೆ ರೋಗಿಗಳಿಗಾಗಿ ಆಸ್ಪತ್ರೆಗಳು ಬಳಸುತ್ತಿರುವ ಜೀವರಕ್ಷಕ ಡಿಜಿಟಲ್ ಸೇವೆಗಳಿಗೆ ಅಡೆತಡೆಗಳು ಉಂಟಾಗಬಹುದು. ಆನ್‌ಲೈನ್ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕಲಿಕೆಯ ದಾರಿಗಳು ಮುಚ್ಚಿ ಹೋಗಬಹುದು. ಪತ್ರಕರ್ತರು ಪ್ರಕ್ಷುಬ್ಧ ಪ್ರದೇಶಗಳಿಂದ ವರದಿಮಾಡಲು ಅಸಾಧ್ಯವಾಗಬಹುದು.

ಇಂದು, ಬಹುತೇಕ ಎಲ್ಲಾ ವೈಟ್‌ಕಾಲರ್ ಉದ್ಯೋಗ ರಂಗಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕಾರ್ಯವೆಸಗುವಂತೆ ಪ್ರೋತ್ಸಾಹಿಸುತ್ತಿವೆ. ಇಂಟರ್ನೆಟ್ ಶಟ್‌ಡೌನ್‌ಗಳಿಂದಾಗಿ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು ಆರ್ಥಿಕ ಉತ್ಪನ್ನದಲ್ಲಿ ಬೃಹತ್ ಪ್ರಮಾಣದ ಏರುಪೇರುಗಳಾಗುತ್ತವೆ. ಹೀಗೆ ಇಂಟರ್ನೆಟ್ ಶಟ್‌ಡೌನ್‌ಗಳಿಂದಾಗಿ 2020ರಲ್ಲಿ ಭಾರತ 20,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ.

ಬೇರೆ ಯಾವುದೇ ದಾರಿ ಇಲ್ಲದಾಗ ಮಾತ್ರ ಇಂಟರ್ನೆಟ್ ನಿಷೇಧಗಳನ್ನು ಹೇರಬೇಕು. ತುರ್ತು ಪರಿಹಾರ ವ್ಯವಸ್ಥೆಗಳು ಜನರಿಗೆ ದೊರಕುವಂತೆ ಮೊದಲೇ ಏರ್ಪಾಡು ಮಾಡಿಕೊಂಡಿರಬೇಕು. ಕಾನೂನು ಅನುಷ್ಠಾನ ಏಜೆನ್ಸಿಗಳ ವಿಭಾಗಗಳು ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಬಳಸಿಕೊಂಡಲ್ಲಿ ಹಲವು ಬದಲಿ ಪರಿಹಾರಗಳು ಲಭ್ಯವಾಗಬಹುದು. ಜಾಗತೀಕರಣದ ಡಿಜಿಟಲೀಕರಣ ಮತ್ತು ಕನೆಕ್ಟಿವಿಟಿಯ ವೇಗ ತೀವ್ರಗೊಂಡಂತೆ ನಾಗರಿಕ ಹಕ್ಕುಗಳು ಹಾಗೂ ಭದ್ರತಾ ಕ್ರಮಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೆಚ್ಚುಹೆಚ್ಚು ಕಷ್ಟವಾಗಲಿದೆ. ಸರಕಾರಗಳು, ವಿಶೇಷವಾಗಿ ಪ್ರಜಾಸತ್ತಾತ್ಮಕ ಸರಕಾರಗಳು ಈ ಸವಾಲುಗಳನ್ನು ಎದುರಿಸಬಲ್ಲಂತಹ ಆಧುನಿಕ ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಬೇಕು.

ಕೃಪೆ: The hindu

(ಲೇಖಕರು ಎಐಸಿಸಿಯ ಸಾಮಾಜಿಕ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಹ ಸಮನ್ವಯಾಧಿಕಾರಿ ಆಗಿದ್ದಾರೆ.)

Writer - ಅನಿಲ್ ಕೆ. ಆ್ಯಂಟನಿ

contributor

Editor - ಅನಿಲ್ ಕೆ. ಆ್ಯಂಟನಿ

contributor

Similar News