ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಬೆಲೆಯ ದಿನವಹಿ ಪರಿಷ್ಕರಣೆ: ಖಜಾನೆ ತುಂಬಿಸುವ ಸುಲಭ ಉಪಾಯವೇ?

Update: 2021-02-26 19:30 GMT

ತೈಲ ಉತ್ಪನ್ನಗಳ ಬೆಲೆ ಏರಿಕೆಯ ವಿರುದ್ಧ ನಿರಂತರ ಪ್ರತಿಭಟನಾ ಚಳವಳಿಗಳನ್ನು ಸಂಘಟಿಸುತ್ತಾ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಡೀಸೆಲ್ ಬೆಲೆಯನ್ನು ರೂ. 30ಕ್ಕೆ ಮತ್ತು ಪೆಟ್ರೋಲ್ ಬೆಲೆಯನ್ನು ರೂ. 40ಕ್ಕೆ ಇಳಿಸುವ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದು ಇದೀಗ ಆರೂವರೆ ವರ್ಷಗಳಾದರೂ ಒಂದು ದಿನದ ಮಟ್ಟಿಗಾದರೂ ಅದನ್ನು ಈಡೇರಿಸಿದೆಯೇ? ಕಚ್ಚಾ ತೈಲ ಬೆಲೆ ತೀವ್ರ ಕುಸಿತ ಕಂಡಾಗಲೂ ಬೆಲೆ ಇಳಿಸಿ ಗ್ರಾಹಕರಿಗೆ ಅನುಕೂಲ ಮಾಡಿದೆೆಯೇ? ಸರಕಾರ ಅದನ್ನು ಎಂದೂ ಮಾಡಿಲ್ಲ. ಬದಲಾಗಿ ಕಚ್ಚಾ ತೈಲ ಬೆಲೆ ತೀವ್ರ ಇಳಿಕೆಯಾದಾಗೆಲ್ಲಾ ತೈಲ ಉತ್ಪನ್ನಗಳ ಮೂಲ ಬೆಲೆಗೆ ಹೆಚ್ಚುವರಿ ಅಬಕಾರಿ ಸುಂಕ ಸೇರಿಸಿ ಮಾರಾಟ ಬೆಲೆಗಳನ್ನು ಏರುಗತಿಯಲ್ಲೇ ಇಟ್ಟು ಗ್ರಾಹಕರಿಗೆ ಉದ್ದಕ್ಕೂ ವಂಚಿಸುತ್ತಾ ಬಂದಿದೆ.


ಭಾಗ-1

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ರಾಜಕೀಯ ಪಕ್ಷಗಳ ಕರೆಯಂತೆ ಸಂಘಟಿಸಲಾದ ಧರಣಿ, ರ್ಯಾಲಿ, ಭಾರತ್ ಬಂದ್ ಇತ್ಯಾದಿ ಚಳವಳಿಗಳ ಇತಿಹಾಸ ಕೆದಕಿ ನೋಡಿದರೆ 2008 ಮತ್ತು 2014ರ ಮಧ್ಯೆ ಕಚ್ಚಾ ತೈಲದ ತೀವ್ರ ಬೆಲೆ ಏರಿಕೆ ಸಂದರ್ಭದಲ್ಲಿ ಅಂದಿನ ಯುಪಿಎ ಸರಕಾರ ನಿಗದಿತ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಸಂದರ್ಭಗಳಲ್ಲಿ ಅಂದಿನ ಮುಖ್ಯ ವಿರೋಧ ಪಕ್ಷ ಬಿಜೆಪಿ ಆಗಾಗ ಕರೆಕೊಟ್ಟು ಸಂಘಟಿಸಲಾದ ಪ್ರತಿಭಟನೆ, ರ್ಯಾಲಿ, ಬಂದ್ ಚಳವಳಿಗಳಿಗೆ ಬಹುಶಃ ಅಗ್ರಸ್ಥಾನ ಸಲ್ಲುವುದು. 2004ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಆರಂಭದ ಮೂರು ವರ್ಷಗಳ ಅವಧಿಯಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಒಂದರ 30ರಿಂದ 50 ಡಾಲರ್ ಮಧ್ಯೆ ಬಹುತೇಕ ಸ್ಥಿರವಾಗಿದ್ದುದರಿಂದ ತೈಲ ಉತ್ಪನ್ನಗಳ ಬೆಲೆ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ಆತಂಕ ಇರಲಿಲ್ಲ. ಆದರೆ 2007ನೇ ವರ್ಷದ ಮಧ್ಯಭಾಗದಿಂದ ಕಚ್ಚಾ ತೈಲ ಬೆಲೆ ನಿರಂತರ ಏರುತ್ತಾ ವರ್ಷಾಂತ್ಯದಲ್ಲಿ ಬ್ಯಾರೆಲ್ ಒಂದರ 75 ಡಾಲರ್ ದಾಟಿ 2008ರ ಎಪ್ರಿಲ್ ತಿಂಗಳಲ್ಲಿ ಪ್ರಥಮ ಬಾರಿಗೆ ಬ್ಯಾರಲ್ ಒಂದರ 100 ಡಾಲರ್‌ಗೂ ಮೀರಿ 103.44 ಡಾಲರ್‌ಗೆ ಏರಿತು. ಮುಂದೆಯೂ ಅದೇ ರೀತಿ ಏರುತ್ತಾ 2008ರ ಜುಲೈ ತಿಂಗಳಲ್ಲಿ ಕಚ್ಚಾ ತೈಲ ಬೆಲೆ ಇತಿಹಾಸದಲ್ಲಿ ಸರ್ವಕಾಲೀನ ಗರಿಷ್ಠ ಬೆಲೆಯಾದ 145.31 ಡಾಲರ್‌ಗೆ ಏರಿ ದಾಖಲೆ ನಿರ್ಮಿಸಿತ್ತು. ಅಲ್ಲದೆ ಪೂರ್ತಿ ಜುಲೈ ತಿಂಗಳ ಉದ್ದಕ್ಕೂ ತೈಲ ಬೆಲೆ ಏರುಗತಿಯಲ್ಲೇ ಇದ್ದು ತಿಂಗಳ ಸರಾಸರಿ 131.27 ಡಾಲರ್ ತಲುಪಿತು. ಇಂತಹ ಅಪಾರ ಒತ್ತಡ ಸನ್ನಿವೇಶದಲ್ಲಿ ಅಂದಿನ ಯುಪಿಎ ಸರಕಾರ ಪೆಟ್ರೋಲ್ ಲೀಟರ್ ಒಂದರ ರೂ. 4.28 ಏರಿಸಿ ಮಾರಾಟ ಬೆಲೆ ರೂ. 57.17 ಹಾಗೂ ಡೀಸೆಲ್‌ಗೆ ಲೀಟರ್‌ಗೆ ರೂ. 2.76 ಏರಿಸಿ ರೂ 39.16ಕ್ಕೆ ಏರಿಸಿದಾಗ ಅಂದಿನ ಮುಖ್ಯ ವಿರೋಧ ಪಕ್ಷ ಭಾರತೀಯ ಜನತಾ ಪಕ್ಷ ಸದರಿ ಬೆಲೆ ಏರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ತನ್ನ ಮಿತ್ರ ಪಕ್ಷಗಳೊಂದಿಗೆ ಸೇರಿ ದೇಶಾದ್ಯಂತ ಬೃಹತ್ ಧರಣಿ, ರ್ಯಾಲಿ ಮುಂತಾದ ಚಳವಳಿ ಸಂಘಟಿಸಿದ್ದಲ್ಲದೆ ಭಾರತ್ ಬಂದ್‌ಗೂ ಕರೆಕೊಟ್ಟು ಬಂದ್, ಹರತಾಳ ನಡೆಸಿತ್ತು. ಅಷ್ಟೇ ಅಲ್ಲದೆ ಅಧಿವೇಶನದಲ್ಲಿದ್ದ ಲೋಕಸಭಾ ಕಲಾಪ ಐದಾರು ವಾರ ನಡೆಯಗೊಡದೆ ಗಲಭೆ, ಗದ್ದಲಗಳ ನಡುವೆ ಕೊನೆಗೆ ಅಧಿವೇಶನವನ್ನು ಮೊಟಕುಗೊಳಿಸಲಾಯಿತು.

ಈ ರೀತಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧದ ಚಳವಳಿಯೊಂದಿಗೆ ಇತರ ಅಗತ್ಯ ವಸ್ತುಗಳಾದ ತೊಗರಿ, ಈರುಳ್ಳಿ, ಟೊಮ್ಯಾಟೋ, ಇತ್ಯಾದಿ ವಸ್ತುಗಳ ಬೆಲೆ ಏರಿಕೆ ವಿಚಾರದಲ್ಲೂ ಆಗಾಗ ಪ್ರತಿಭಟನಾ ರ್ಯಾಲಿ ಸಂಘಟಿಸುತ್ತಾ ಸದರಿ ಬೆಲೆ ಏರಿಕೆ ವಿಷಯವನ್ನು 2014ರ ಮಹಾ ಚುನಾವಣೆಯವರೆಗೂ ಜೀವಂತವಾಗಿರಿಸಿದ ಬಿಜೆಪಿ ಮತ್ತೆ ಚುನಾವಣಾ ಪ್ರಚಾರದಲ್ಲೂ ಎಲ್ಲೆಡೆ ಪ್ರಸ್ತಾಪಿಸಿತು. ಹೀಗೆ ಈ ಬೆಲೆ ಏರಿಕೆ ವಿಷಯದ ಬಗ್ಗೆ ಗರಿಷ್ಠ ಪ್ರಚಾರ ಗೈದ ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರ ಪಕ್ಷವನ್ನು ಅಧಿಕಾರಕ್ಕೇರಿಸಿದರೆ ಜನರಿಗೆ ಪೆಟ್ರೋಲ್ ಲೀಟರ್‌ಗೆ ರೂ. 40ರಂತೆ ಮತ್ತು ಡೀಸೆಲ್ ರೂ. 30ರಂತೆ ಮಾರಾಟ ಮಾಡುವುದಾಗಿ ಭರವಸೆ ಕೊಟ್ಟು, 2014ರಲ್ಲಿ ಅಧಿಕಾರಕ್ಕೆ ಬಂತು. ಇಷ್ಟರಲ್ಲೇ ಎರಡನೇ ಅವಧಿಗೂ ಆರಿಸಿ ಬಂದು ಅಧಿಕಾರ ಚಲಾಯಿಸುತ್ತಿರುವ ಮಾನ್ಯ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ತೈಲ ಉತ್ಪನ್ನಗಳು ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆಯನ್ನು ಹತೋಟಿಗೆ ತಂದು ತನ್ನ ಚುನಾವಣಾ ಭರವಸೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ? ಎಂಬ ಪ್ರಶ್ನೆಯೊಂದಿಗೆ ಹಿಂದಿನ ಯುಪಿಎ ಸರಕಾರ ನಿಗದಿತ ತೈಲ ಉತ್ಪನ್ನಗಳ ಮಾರಾಟ ಬೆಲೆಯನ್ನು ಈಗಿನ ಸರಕಾರ ನಿಗದಿತ ಬೆಲೆಯೊಂದಿಗೆ ತುಲನಾತ್ಮಕ ವಿಶ್ಲೇಷಣೆ ಮಾಡುವುದೇ ಈ ಲೇಖನದ ಉದ್ದೇಶ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ಪ್ರಥಮ ವರ್ಷ 2004-05 ಎಪ್ರಿಲ್‌ನಲ್ಲಿ ದಾಖಲಾದ ವರ್ಷದ ಗರಿಷ್ಠ ಕಚ್ಚಾ ತೈಲ ಬೆಲೆ ಬ್ಯಾರಲ್ ಒಂದರ 45.84 ಅಮೆರಿಕನ್ ಡಾಲರ್‌ನಿಂದಾಗಿ ನಿಗದಿತ ಮಾರಾಟದ ಬೆಲೆ ಪೆಟ್ರೋಲ್‌ಗೆ ಲೀಟರ್ ಒಂದರ ರೂ. 45.51 ಇದ್ದರೆ, ಡೀಸೆಲ್‌ಗೆ ರೂ. 30.80 ಇತ್ತು. ಮೇಲಿನ ಕಚ್ಚಾ ತೈಲ ಬೆಲೆಗೆ 2016 ಆಗಸ್ಟ್ ತಿಂಗಳಲ್ಲಿ ಚಾಲ್ತಿಯಲ್ಲಿದ್ದ ಕಚ್ಚಾ ತೈಲದ ಸಮಾನ ಬೆಲೆ ಬ್ಯಾರಲ್ ಒಂದರ 45.77 ಅ.ಡಾಲರ್ ಇದ್ದಾಗ ಮೋದಿ ನೇತೃತ್ವದ ಬಿಜೆಪಿ ಸರಕಾರದ ನಿಗದಿತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ ರೂ. 65.58 ಮತ್ತು ರೂ. 55.97. ಈ ಮಾರಾಟ ಬೆಲೆಗಳು ಹಿಂದಿನ ಸರಕಾರದ ಕಚ್ಚಾ ತೈಲ ಬೆಲೆಯ ವಿರುದ್ಧ ನಿಗದಿತ ಮಾರಾಟ ಬೆಲೆಗಿಂತ ಕ್ರಮವಾಗಿ ಶೇ.44 ಮತ್ತು ಶೇ.81ರಷ್ಟು ಹೆಚ್ಚಿಗೆ ಇತ್ತು. ಆದೇ ರೀತಿ ಮುಂದಿನ ವರ್ಷ 2006ರ ಜೂನ್ ತಿಂಗಳಲ್ಲಿದ್ದ (ವರ್ಷದ ಗರಿಷ್ಠ) ತೈಲ ಬೆಲೆ ಬ್ಯಾರಲ್ ಒಂದರ 69.17 ಡಾಲರ್ ಇದ್ದಾಗ ಅಂದಿನ ಸರಕಾರದ ನಿಗದಿತ ಮಾರಾಟ ಬೆಲೆಗೆ ಸಮಾನವಾಗಿ 2018ರ ಜನವರಿಯಲ್ಲಿದ್ದ ಕಚ್ಚಾ ತೈಲ ಬೆಲೆ 69.18 ಡಾಲರ್ ಇದ್ದಾಗ ಬಿಜೆಪಿ ಸರಕಾರದ ನಿಗದಿತ ಮಾರಾಟ ಬೆಲೆಗಳು ಪೆಟ್ರೋಲ್‌ಗೆ ರೂ. 72.22 ಮತ್ತು ಡೀಸೆಲ್‌ಗೆ ರೂ.64.15. ಈ ಮಾರಾಟ ಬೆಲೆಗಳು ಹಿಂದಿನ ಕಾಂಗ್ರೆಸ್/ಯುಪಿಎ ಸರಕಾರದ ನಿಗದಿತ ಬೆಲೆಗಳಿಂದ ಕ್ರಮವಾಗಿ ಶೇ. 39 ಮತ್ತು ಶೇ. 71ರಷ್ಟು ಅಧಿಕವಾಗಿದೆ.

ಇನ್ನು 2007ರ ನವೆಂಬರ್‌ನಲ್ಲಿ ದಾಖಲಾದ ಗರಿಷ್ಠ ಕಚ್ಚಾ ತೈಲ ಬೆಲೆ 86.87 ಡಾಲರ್‌ಗೆ ಏರಿದಾಗ ಅಂದಿನ ಸರಕಾರದ ನಿಗದಿತ ಮಾರಾಟ ಬೆಲೆಗಳು-ಪೆಟ್ರೋಲ್‌ಗೆ ರೂ. 52.86 ಮತ್ತು ಡೀಸೆಲ್‌ಗೆ ರೂ. 36.40. ಮೇಲಿನ ಕಚ್ಚಾ ತೈಲ ಬೆಲೆಗೆ ಸಮಾನವಾಗಿ 2014ರ ಅಕ್ಟೋಬರ್‌ನಲ್ಲಿ ಚಾಲ್ತಿಯಲ್ಲಿದ್ದ ತೈಲ ಬೆಲೆ 87.40 ಡಾಲರ್ ಇದ್ದಾಗ ಈಗಿನ ಬಿಜೆಪಿ ಸರಕಾರದ ನಿಗದಿತ ಮಾರಾಟ ಬೆಲೆಗಳು ಪೆಟ್ರೋಲ್ ಮತ್ತು ಡೀಸೆಲ್‌ಗೆ ಕ್ರಮವಾಗಿ ರೂ. 73.45 ಮತ್ತು 62.25. ಬಿಜೆಪಿ ಸರಕಾರ ನಿಗದಿತ ಈ ಬೆಲೆಗಳು ಹಿಂದಿನ ಸರಕಾರದ ನಿಗದಿತ ಮಾರಾಟ ಬೆಲೆಗಿಂತ ಕ್ರಮವಾಗಿ ಶೇ. 41 ಮತ್ತು ಶೇ. 71ರಷ್ಟು ಅಧಿಕವಾಗಿದೆ. ಮುಂದಿನ 2007-08ರ ವರ್ಷದಲ್ಲಿ ಆರಂಭವಾಗುತ್ತದೆ ಕಚ್ಚಾ ತೈಲದ ವಿಪರೀತ ಬೆಲೆ ಏರಿಕೆಯ ಅವಧಿ. 2007ರ ಜುಲೈಯಿಂದ ಆರಂಭಗೊಂಡ ಕಚ್ಚಾತೈಲದ ಬೆಲೆ ತೀವ್ರವಾಗಿ ಏರುತ್ತಾ 2008ರ ಜುಲೈನಲ್ಲಿ ಬ್ಯಾರಲ್ ಒಂದರ 145.31 ಡಾಲರ್‌ಗೆ ಏರಿ ದಾಖಲೆ ನಿರ್ಮಿಸುತ್ತದೆ. ಈ ಕ್ಲಿಷ್ಟ, ಅನಿವಾರ್ಯ ಒತ್ತಡದ ಸಂದರ್ಭದಲ್ಲಿ ಅಂದಿನ ಯುಪಿಎ ಸರಕಾರ ಪೆಟ್ರೋಲ್ ಬೆಲೆಯನ್ನು ರೂ. 52.89ರಿಂದ ರೂ. 57.17ಕ್ಕೆ ಹಾಗೂ ಡೀಸೆಲ್ ಬೆಲೆಯನ್ನು ರೂ. 37.40ರಿಂದ ರೂ. 39.16ಕ್ಕೆ ಏರಿಕೆ ಮಾಡಿತ್ತು. ಈ ಮಾರಾಟ ಬೆಲೆಗಳು ಪ್ರಸ್ತುತ ಆಗುತ್ತಿರುವ ಶೇ. 247 ಬೆಲೆ ಏರಿಕೆಗೆ ಹೋಲಿಸಿದರೆ ಅದು ತೀರಾ ಕನಿಷ್ಠ.

ಆ ಸಂದರ್ಭ 2008ರ ಎಪ್ರಿಲ್‌ನಿಂದ ಸೆಷ್ಟಂಬರ್ 2008ರ ತನಕ 6 ತಿಂಗಳ ಕಚ್ಚಾ ತೈಲ ಬೆಲೆಯ ಮಾಸಿಕ ಸರಾಸರಿ ಬೆಲೆ ಬ್ಯಾರಲ್ ಒಂದರ 115.15 ಡಾಲರ್ ಇದ್ದರೆ, ಪೆಟ್ರೋಲ್ ಮತ್ತು ಡೀಸೆಲ್ ಸರಾಸರಿ ಮಾರಾಟ ಬೆಲೆ ಲೀಟರ್ ಒಂದರ ರೂ. 55.18 ಮತ್ತು ರೂ. 37.45 ಇತ್ತು. ಅಂದು ಕಚ್ಚಾತೈಲದ ಬೆಲೆ ಏರಿಕೆ ಪ್ರಮಾಣ-ಎಪ್ರಿಲ್ 2007ರ 58.80 ಡಾಲರ್‌ನಿಂದ 145.31 ಡಾಲರ್. ಅಂದರೆ ಶೇ.247. ಪೆಟ್ರೋಲ್ ಮಾರಾಟ ಬೆಲೆ 2007ರ ಎಪ್ರಿಲ್ ರೂ. 50.62ರಿಂದ ಜುಲೈ 2008 ರವರೆಗೆ ಮಾರಾಟ ಬೆಲೆ ರೂ. 57.15. ಅಂದರೆ ಬೆಲೆ ಏರಿಕೆ ಶೇ. 12.5. ಡೀಸೆಲ್ ಮಾರಾಟ ಬೆಲೆಯ ವೃದ್ಧಿ ರೂ. 36.40ರಿಂದ ರೂ. 39.80. ಅಂದರೆ ಬೆಲೆ ಏರಿಕೆ ಶೇ. 10ಕ್ಕಿಂತಲೂ ಕಡಿಮೆ. ಕಚ್ಚಾ ತೈಲದ ಬೆಲೆ ಏರಿಕೆ ಪ್ರಮಾಣ ಶೇ. 247 ಇದ್ದಾಗ್ಯೂ ಅಂದಿನ ಸರಕಾರ ಗ್ರಾಹಕರ ಮತ್ತು ಜನ ಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಬೆಲೆಯನ್ನು ಕ್ರಮವಾಗಿ ಶೇ. 12.5 ಮತ್ತು 10ರಷ್ಟು ಕನಿಷ್ಠ ಪ್ರಮಾಣದಲ್ಲಿ ಪರಿಷ್ಕರಿಸಿರುವುದನ್ನು ಗಮನಿಸಬಹುದು. ನಂತರ 2009ರಲ್ಲಿ ಕಚ್ಚಾ ತೈಲ ಬೆಲೆ ಸ್ವಲ್ಪಕಡಿಮೆಯಾಗಿ ನವೆಂಬರ್ ತಿಂಗಳಲ್ಲಿ ಚಾಲ್ತಿಯಲ್ಲಿದ್ದ (ವರ್ಷದ ಗರಿಷ್ಠ) ಬೆಲೆ 77.71 ಡಾಲರ್‌ಗೆ ಬಂತು. ಈ ಸಂದರ್ಭದಲ್ಲಿ ಅಂದಿನ ಸರಕಾರದ ನಿಗದಿತ ಮಾರಾಟ ಬೆಲೆಗಳು ಪೆಟ್ರೋಲ್ ಮತ್ತು ಡೀಸೆಲ್‌ಗೆ ಕ್ರಮವಾಗಿ ರೂ. 50.73 ಮತ್ತು ರೂ. 37.05. ಆದರೆ ಮೇ, 2018ರಲ್ಲಿ ದಾಖಲಾದ ಮೇಲಿನ ಬಹುತೇಕ ಸಮಾನ ಕಚ್ಚಾ ತೈಲ ಬೆಲೆ 76.93 ಡಾಲರ್ ಇದ್ದಾಗ ಬಿಜೆಪಿ ಸರಕಾರದ ನಿಗದಿತ ಪೆಟ್ರೋಲ್ ಮತ್ತು ಡೀಸೆಲ್‌ನ ಮಾರಾಟ ಬೆಲೆಗಳು ಕ್ರಮವಾಗಿ ರೂ. 79.00 ಮತ್ತು ರೂ. 69.41. ಈ ಮಾರಾಟ ಬೆಲೆಗಳು ಮೇಲೆ ನಮೂದಿತ ಯುಪಿಎ ಸರಕಾರ ನಿಗದಿತ ಬೆಲೆಗಿಂತ ಕ್ರಮವಾಗಿ ಶೇ. 56 ಮತ್ತು ಶೇ. 87ರಷ್ಟು ಅಧಿಕವಾಗಿದೆ. ಮುಂದಿನ ಐದು ವರ್ಷಗಳು ಅಂದರೆ 2010ರಿಂದ 2014ರ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ನಿರಂತರ ಬಹುತೇಕ 100 ಡಾಲರ್‌ಗಿಂತ ಹೆಚ್ಚೇ ಇದ್ದ ಅವಧಿ.

ಹೀಗೆ 2010-11ರಲ್ಲಿ ಕಚ್ಚಾ ತೈಲ ಬೆಲೆ ವಾರ್ಷಿಕ ಸರಾಸರಿ 88.21 ಡಾಲರ್, 2011-12ರಲ್ಲಿ 113.30 ಡಾಲರ್, 2012-13ರಲ್ಲಿ 108.99 ಡಾಲರ್, 2013-14ರಲ್ಲಿ 106.40 ಡಾಲರ್ ಮತ್ತು 2014 (ಎಪ್ರಿಲ್‌ನಿಂದ ಜೂನ್ 2014ರವರೆಗೆ) ರಲ್ಲಿ 107.26 ಡಾಲರ್‌ಗಳು. 2009ರಿಂದ 2014ರವರೆಗಿನ ಎಲ್ಲಾ ಐದು ವರ್ಷಗಳ ಒಟ್ಟಾರೆ ಸರಾಸರಿ ಕಚ್ಚಾತೈಲ ಬೆಲೆ 104.83 ಡಾಲರ್ ಆಗಿದ್ದರೆ, ಆಗಿನ ಯುಪಿಎ ಸರಕಾರ ಎಲ್ಲಾ 5 ವರ್ಷಗಳ ಅವಧಿಯಲ್ಲಿ ನಿಗದಿತ ಮಾರಾಟ ಬೆಲೆಗಳ ಒಟ್ಟು ಸರಾಸರಿ ಬೆಲೆಗಳು ಪೆಟ್ರೋಲ್ ಮತ್ತು ಡೀಸೆಲ್‌ಗೆ ಕ್ರಮವಾಗಿ ರೂ.73.57 ಮತ್ತು ರೂ.52.98 ಆಗಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮೇ, 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಆರಂಭದ 3 ತಿಂಗಳು (ಜೂನ್-ಆಗಸ್ಟ್ 2014) ವರೆಗೆ ಮಾತ್ರ 100 ಡಾಲರ್ ಆಸುಪಾಸಿನಲ್ಲಿ ತೈಲ ಬೆಲೆಯಿತ್ತು. ಮುಂದಿನ ಯಾವುದೇ ಅವಧಿಯಲ್ಲಿ ಕಚ್ಚಾ ತೈಲ 79 ಡಾಲರ್ ಮೀರಿ ಏರದೆ ಇರುವುದರಿಂದ ಮೇಲಿನ 5 ವರ್ಷಗಳ ಸರಾಸರಿ ಕಚ್ಚಾ ತೈಲ ಬೆಲೆ 104.83 ಡಾಲರ್‌ಗೆ ಸಮಾನ ಬೆಲೆಗಳು ಲಭ್ಯವಿರದ ಕಾರಣ ತುಲನಾತ್ಮಕ ವಿಶ್ಲೇಷಣೆ ಸಾಧ್ಯವಾಗುತ್ತಿಲ್ಲ. ಮೇಲಿನ ಐದು ವರ್ಷಗಳ ಕಚ್ಚಾ ತೈಲ ಒಟ್ಟಾರೆ ಸರಾಸರಿ ಬೆಲೆ 104.83 ಡಾಲರ್‌ಗಳ ವಿರುದ್ಧ ಅಂದಿನ ಸರಕಾರ ನಿಗದಿತ 5 ವರ್ಷಗಳ ಮಾರಾಟ ಬೆಲೆಗಳ ಸರಾಸರಿ ಪೆಟ್ರೋಲ್ ರೂ.73.57 ಮತ್ತು ಡೀಸೆಲ್ 52.98 ಆಗಿತ್ತು.

ಎರಡು ಒಕ್ಕೂಟ ಸರಕಾರಗಳ ಬೆಲೆ ಪರಿಷ್ಕರಣೆಯಲ್ಲಿ ಗಮನಿಸಬೇಕಾದ ಅಂಶಗಳು
ಕನಿಷ್ಠ ಮಾರಾಟ ಬೆಲೆ ಭರವಸೆ ಕೊಟ್ಟ ಬಿಜೆಪಿ ಒಂದು ದಿನಕ್ಕಾದರೂ ಅದನ್ನು ಈಡೇರಿಸಿದೆಯೇ? ತೈಲ ಉತ್ಪನ್ನಗಳ ಬೆಲೆ ಏರಿಕೆಯ ವಿರುದ್ಧ ನಿರಂತರ ಪ್ರತಿಭಟನಾ ಚಳವಳಿಗಳನ್ನು ಸಂಘಟಿಸುತ್ತಾ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಡೀಸೆಲ್ ಬೆಲೆಯನ್ನು ರೂ. 30ಕ್ಕೆ ಮತ್ತು ಪೆಟ್ರೋಲ್ ಬೆಲೆಯನ್ನು ರೂ 40ಕ್ಕೆ ಇಳಿಸುವ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದು ಇದೀಗ ಆರೂವರೆ ವರ್ಷಗಳಾದರೂ ಒಂದು ದಿನದ ಮಟ್ಟಿಗಾದರೂ ಅದನ್ನು ಈಡೇರಿಸಿದೆಯೇ? ಕಚ್ಚಾತೈಲ ಬೆಲೆ ತೀವ್ರ ಕುಸಿತ ಕಂಡಾಗಲೂ ಬೆಲೆ ಇಳಿಸಿ ಗ್ರಾಹಕರಿಗೆ ಅನುಕೂಲ ಮಾಡಿದೆೆಯೇ? ಸರಕಾರ ಅದನ್ನು ಎಂದೂ ಮಾಡಿಲ್ಲ. ಬದಲಾಗಿ ಕಚ್ಚಾ ತೈಲ ಬೆಲೆ ತೀವ್ರ ಇಳಿಕೆಯಾದಾಗೆಲ್ಲಾ ತೈಲ ಉತ್ಪನ್ನಗಳ ಮೂಲ ಬೆಲೆಗೆ ಹೆಚ್ಚುವರಿ ಅಬಕಾರಿ ಸುಂಕ ಸೇರಿಸಿ ಮಾರಾಟ ಬೆಲೆಗಳನ್ನು ಏರುಗತಿಯಲ್ಲೇ ಇಟ್ಟು ಗ್ರಾಹಕರಿಗೆ ಉದ್ದಕ್ಕೂ ವಂಚಿಸುತ್ತಾ ಬಂದಿದೆ. ಕೋವಿಡ್-19ರ ಸಮಸ್ಯೆಯನ್ನು ತಡೆಯುವ ದೃಷ್ಟಿಯಲ್ಲಿ ಲಾಕ್‌ಡೌನ್ ಘೋಷಣೆಯಾದ ನಂತರ ಎಪ್ರಿಲ್ (2020) ತಿಂಗಳಲ್ಲಿ ಜಾಗತಿಕಮಟ್ಟದಲ್ಲಿ ಬೇಡಿಕೆ ಕುಸಿತಗೊಂಡು ಕಚಾ ್ಚತೈಲ ಬೆಲೆ ತೀವ್ರ ಕುಸಿತಗೊಂಡು ಬ್ಯಾರಲ್ ಒಂದರ 20.46 ಡಾಲರ್‌ಗೆ ಇಳಿದಾಗಲೂ ಪೆಟ್ರೋಲ್‌ಗೆ ರೂ. 73.55 ಹಾಗೂ ಡೀಸೆಲ್‌ಗೆ ರೂ. 65.62ರಷ್ಟು ಹೆಚ್ಚಿನ ಬೆಲೆಯಲ್ಲಿದ್ದು, ಕೋವಿಡ್-19ರ ಸಂಕಷ್ಟ ಕಾಲದಲ್ಲೂ 3/4 ತಿಂಗಳುಗಳ ಕಾಲ ಅದೇ ಬೆಲೆ ಖಾಯಂ ಮಾಡಿದ್ದ ‘ಖ್ಯಾತಿ’ ಬಿಜೆಪಿ ಸರಕಾರದ್ದು.

ಈ ತೈಲ ಉತ್ಪನ್ನಗಳ ಮಾರಾಟ ಬೆಲೆಗಳ ತುಲನೆ ವಿಚಾರಕ್ಕೆ ಬಂದಾಗ ಒಂದು ಮುಖ್ಯ ವಿಷಯ ಗಮನಿಸಬೇಕಾಗಿದೆ. ಅದೇನೆಂದರೆ ಮೇಲೆ ಹೇಳಿರುವಂತೆ ಕಚ್ಚಾ ತೈಲ ದಾಖಲೆ ಮಟ್ಟಕ್ಕೆ (145.31 ಡಾಲರ್) ಏರಿದಾಗ ಅಂದಿನ ಕಾಂಗ್ರೆಸ್/ಯುಪಿಎ ಸರಕಾರ ನಿಗದಿತ ಪೆಟ್ರೋಲ್ / ಡೀಸೆಲ್ ಮಾರಾಟ ಬೆಲೆಗಳು ಕ್ರಮವಾಗಿ ರೂ. 57.18 ಮತ್ತು 39.16 ಇನ್ನೂ ಕಳೆದ ಎಪ್ರಿಲ್ (2020) ನಲ್ಲಿ ಕೋವಿಡ್-19ರ ಅತೀವ ಸಂಕಷ್ಟ ಸಂದರ್ಭದಲ್ಲಿ ತೈಲ ಬೆಲೆ ತೀವ್ರ ಕುಸಿತಗೊಂಡ ಸಂದರ್ಭದಲ್ಲಿ ಮೇಲೆ ಹೇಳಿರುವಂತೆ ಬಿಜೆಪಿ ಸರಕಾರ ನಿಗದಿತ ಪೆಟ್ರೋಲ್ ಮತ್ತು ಡೀಸೆಲ್‌ನ ಮಾರಾಟ ಬೆಲೆಗಳು ಕ್ರಮವಾಗಿ ರೂ. 73.55 ಮತ್ತು ರೂ. 65.62. ಸದರಿ ತೈಲ ಬೆಲೆ 20.46 ಡಾಲರ್ ವಿರುದ್ಧ್ಧ ನಿಗದಿತ ಮಾರಾಟ ಬೆಲೆಗಳೂ 2008ರಲ್ಲಿ ಗರಿಷ್ಠ ಬೆಲೆ (145.31 ಡಾಲರ್) ವಿರುದ್ಧ್ದ ಯುಪಿಎ ಸರಕಾರ ನಿಗದಿತ (ರೂ. 57.18 ಮತ್ತು ರೂ. 39.16) ಮಾರಾಟ ಬೆಲೆಗಿಂತಲೂ ಹೆಚ್ಚಾಗಿತ್ತು ಎಂಬುದನ್ನು ಮಾನ್ಯ ಗ್ರಾಹಕರು ತಿಳಿದುಕೊಂಡರೆ ಈ ಸರಕಾರ ನಡೆಸುವವರ ಮನಸ್ಸು ಎಷ್ಟು ಕಠೋರ ಮತ್ತು ಜನ ಸಾಮಾನ್ಯರ ವಿರುದ್ಧವಾಗಿದೆ ಎಂಬುದನ್ನು ಅರ್ಥೈಸಲು ಸಾಧ್ಯ! ಈ ರೀತಿ ಕಚ್ಚಾ ತೈಲ ಬೆಲೆ ತೀವ್ರ ಕುಸಿತ (20.46 ಡಾಲರ್- ಎರಡು ದಶಕಗಳ ಕನಿಷ್ಠ ಬೆಲೆ) ಕಂಡಾಗ ಒಂದಷ್ಟು ದಿನಗಳಿಗಾದರೂ ಕನಿಷ್ಠ ಬೆಲೆಯಲ್ಲಿ ತೈಲ ಉತ್ಪನ್ನಗಳನ್ನು ನೀಡಲಾಗದ ಕಠೋರ ಮನಸ್ಕರಿವರು.

Writer - ಎಸ್. ವಿ. ಅಮೀನ್

contributor

Editor - ಎಸ್. ವಿ. ಅಮೀನ್

contributor

Similar News