ಲೈಂಗಿಕ ಕಿರುಕುಳ ಪ್ರಕರಣದ ರದ್ದತಿ ಕೋರಿದ್ದ ಆರೋಪಿ ನ್ಯಾಯಾಧೀಶರ ಅರ್ಜಿ ತಿರಸ್ಕರಿಸಿದ ಸುಪ್ರೀಂ

Update: 2021-02-27 16:44 GMT

ಹೊಸದಿಲ್ಲಿ, ಫೆ.27: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರೊಬ್ಬರು, ತನ್ನ ವಿರುದ್ಧದ ಶಿಸ್ತು ಕ್ರಮ ನಡಾವಳಿಯನ್ನು ಕೈಬಿಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

‘ಲೈಂಗಿಕ ಕಿರುಕುಳ ಪ್ರಕರಣಗಳನ್ನು ಈ ರೀತಿ ಮರೆಮಾಚುವ ಪ್ರಯತ್ನಕ್ಕೆ ನಾವು ಅವಕಾಶ ನೀಡುವುದಿಲ್ಲ. ನೀವು ತುಂಬಾ ತೆಳುವಾದ ಮಂಜುಗಡ್ಡೆಯ ಮೇಲೆ ನಡೆಯುತ್ತಿದ್ದೀರಿ. ನೀವು ಖುಲಾಸೆಗೊಳ್ಳುವ ಅವಕಾಶವೂ ಇರಬಹುದು. ಆದರೆ ಈಗ ಇರುವ ವಿಷಯದಂತೆ ನೀವು ಅಪರಾಧಿಯಾಗಿದ್ದೀರಿ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಬೋಪಣ್ಣ ಮತ್ತು ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಹೇಳಿದೆ ಮತ್ತು ತನಿಖೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಅರ್ಜಿಯನ್ನು ಹಿಂಪಡೆಯುವ ಅವಕಾಶವನ್ನು ಅರ್ಜಿದಾರರಿಗೆ ನೀಡಿದೆ.

ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದ ಮಹಿಳೆ ಬಳಿಕ ದೂರನ್ನು ಹಿಂಪಡೆದಿದ್ದರೂ, ಕರ್ತವ್ಯದ ಸ್ಥಳದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ತಡೆಯುವ ಕಾನೂನು(ಪಿಒಎಸ್‌ಎಚ್) ಅನ್ವಯ ದಾಖಲಿಸಿದ್ದ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ವಿಭಾಗೀಯ ವಿಚಾರಣೆ ಮುಂದುವರಿದಿದೆ. ಹಿರಿಯ ಜಿಲ್ಲಾ ನ್ಯಾಯಾಧೀಶ ಶಂಭೂ ರಘುವಂಶಿ ತನಗೆ ಅನುಚಿತ ವಾಟ್ಸಾಪ್ ಸಂದೇಶ ರವಾನಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನ್ಯಾಯಾಲಯದ ಕಿರಿಯ ಅಧಿಕಾರಿಯೊಬ್ಬರು 2018ರಲ್ಲಿ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಿ ಹೈಕೋರ್ಟ್‌ನ ವಿಭಾಗೀಯ ವಿಚಾರಣೆಗೆ ಆದೇಶಿಸಲಾಗಿತ್ತು. ಆದರೆ ಮಹಿಳೆ ಬಳಿಕ ದೂರನ್ನು ಹಿಂಪಡೆದಿರುವುದರಿಂದ ವಿಭಾಗೀಯ ವಿಚಾರಣೆ ಅನಗತ್ಯ ಎಂದು ನ್ಯಾಯಾಧೀಶ ರಘುವಂಶಿಯ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು. ಮುಜುಗರದಿಂದಾಗಿ ಮಹಿಳೆ ದೂರು ಹಿಂಪಡೆದಿರಬಹುದು. ಆದರೆ ಹೈಕೋರ್ಟ್‌ನ ವಿಭಾಗೀಯ ವಿಚಾರಣೆಗೆ ಇದು ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News