ಹೆಚ್ಚು ಹಾರಾಡದಿರಿ, ನಿಮ್ಮ ವಿದ್ಯುತ್ ವ್ಯವಸ್ಥೆಯನ್ನೇ ನಿಲ್ಲಿಸುತ್ತೇವೆಂದು ಚೀನಾ ಭಾರತವನ್ನು ಬೆದರಿಸುತ್ತಿದೆಯೇ?

Update: 2021-03-01 14:00 GMT

ನ್ಯೂಯಾರ್ಕ್,ಮಾ.1: ಭಾರತದ ವಿದ್ಯುತ್ ಸ್ಥಾವರಗಳನ್ನು ಮತ್ತು ಬಂದರುಗಳನ್ನು ತಮ್ಮ ಸೈಬರ್ ದಾಳಿಗೆ ಗುರಿಯಾಗಿಸಿಕೊಂಡಿರುವ ಚೀನಾದ ಹ್ಯಾಕರ್‌ ಗಳು ಕಳೆದ ವರ್ಷ ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆಗಳ ನಾಲ್ಕು ತಿಂಗಳ ಬಳಿಕ ಮುಂಬೈ ಮಹಾನಗರಿಯಲ್ಲಿ ವಿದ್ಯುತ್ ಪೂರೈಕೆಯನ್ನು ಸ್ತಬ್ಧಗೊಳಿಸುವ ಮೂಲಕ ಎಚ್ಚರಿಕೆಯ ಸಂಕೇತವನ್ನು ರವಾನಿಸಿದ್ದರು ಎಂದು ಅಮೆರಿಕ ಮೂಲದ ಸೈಬರ್ ಇಂಟಲಿಜನ್ಸ್ ಕಂಪನಿ ‘ರೆಕಾರ್ಡೆಡ್ ಫ್ಯೂಚರ್’ನ ಅಧ್ಯಯನ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ. 

ಅ.13ರಂದು ಗಲ್ವಾನ್ ನಿಂದ 1500 ಮೈಲುಗಳಿಗಿಂತಲೂ ಹೆಚ್ಚು ದೂರದಲ್ಲಿರುವ ಎರಡು ಕೋಟಿ ಜನರು ವಾಸವಾಗಿರುವ ಮುಂಬೈಯಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ನಡುವೆಯೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ರೈಲುಗಳು ಸ್ಥಗಿತಗೊಂಡಿದ್ದವು, ಶೇರು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು ಮತ್ತು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳನ್ನು ಚಾಲೂ ಸ್ಥಿತಿಯಲ್ಲಿರಿಸಲು ತುರ್ತು ಜನರೇಟರ್ ಗಳನ್ನು ಬಳಸಬೇಕಾಗಿ ಬಂದಿತ್ತು ಎಂದು ವರದಿಯು ಹೇಳಿದೆ. 

ಭಾರತದ ವಿದ್ಯುತ್ ಗ್ರಿಡ್ ಗಳ ವಿರುದ್ಧ ಚೀನಾದ ವ್ಯಾಪಕ ಸೈಬರ್ ಅಭಿಯಾನದ ಭಾಗವಾಗಿ ಗಲ್ವಾನ್ ಕಣಿವೆಯಲ್ಲಿನ ಸಂಘರ್ಷಕ್ಕೂ ಮುಂಬೈಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಕ್ಕೂ ಪರಸ್ಪರ ನಂಟು ಇದ್ದಿರಬಹುದು ಎಂದಿರುವ ರೆಡ್ ಫ್ಯೂಚರ್,ಭಾರತವು ತನ್ನ ಗಡಿ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸಿದರೆ ಇಡೀ ದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಮತ್ತು ತನಗೆ ಆ ಸಾಮರ್ಥ್ಯವಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ಚೀನಾ ರವಾನಿಸಿರುವಂತಿದೆ ಎಂದು ಹೇಳಿದೆ.

ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವ್ಯೆಹಾತ್ಮಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಚೀನಾದೊಂದಿಗೆ ಗುರುತಿಸಿಕೊಂಡಿರುವ ‘ರೆಡ್ ಇಕೋ’ದಂತಹ ಗುಂಪುಗಳು ನಡೆಸುತ್ತಿರುವ ಸೈಬರ್ ಕಾರ್ಯಾಚರಣೆಗಳು ನಿರಂತರವಾಗಿ ಹೆಚ್ಚಬಹುದು ಎಂದು ತಾನು ನಿರೀಕ್ಷಿಸಿರುವುದಾಗಿ ರೆಡ್ ಫ್ಯೂಚರ್ ತನ್ನ ವರದಿಯಲ್ಲಿ ತಿಳಿಸಿದೆ.

ಹೈ-ವೋಲ್ಟೇಜ್ ಪ್ರಸರಣ ಉಪಕೇಂದ್ರಗಳು ಮತ್ತು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಸೇರಿದಂತೆ ಭಾರತದಾದ್ಯಂತ ವಿದ್ಯುತ್ ಪೂರೈಕೆಯನ್ನು ನಿರ್ವಹಿಸುತ್ತಿರುವ ನಿಯಂತ್ರಣ ವ್ಯವಸ್ಥೆಗಳಲ್ಲಿ ಚೀನಾದ ಮಾಲ್ವೇರ್‌ ಗಳು ಸ್ಥಾಪನೆಗೊಂಡಿವೆ ಎನ್ನುವುದನ್ನು ಅಧ್ಯಯನವು ತೋರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಚೀನಿ ಹ್ಯಾಕರ್‌ ಗಳು ಸಿಸ್ಟಮ್‌ ನಲ್ಲಿ ತಮ್ಮ ಹಿಂಬಾಗಿಲ ಪ್ರವೇಶಕ್ಕಾಗಿ ಭಾರತೀಯ ನೆಟ್ವರ್ಕ್ ಗಳಲ್ಲಿ ’ಶಾಡೋಪ್ಯಾಡ್’ ಎಂಬ ಮಾಲ್ವೇರ್ ಅನ್ನು ನುಸುಳಿಸಿದ್ದು, ಈ ಮಾಲ್ವೇರ್ನ್ನು ಇತರ ಚೀನಿ ಬೇಹುಗಾರಿಕೆ ತಂಡಗಳೂ ಬಳಸುತ್ತಿವೆ. ಚೀನಾದ ಹೆಚ್ಚಿನ ಮಾಲ್ವೇರ್ ಗಳನ್ನು ಕ್ರಿಯಾಶೀಲಗೊಳಿಸಲಾಗಿಲ್ಲ. ಭಾರತೀಯ ವಿದ್ಯುತ್ ವ್ಯವಸ್ಥೆಯಲ್ಲಿ ಪ್ರವೇಶಿಸಲು ತನಗೆ ಸಾಧ್ಯವಿಲ್ಲದ್ದರಿಂದ ದೇಶಾದ್ಯಂತ ವ್ಯೂಹಾತ್ಮಕ ವಿದ್ಯುತ್ ವಿತರಣೆ ವ್ಯವಸ್ಥೆಗಳಲ್ಲಿ ನೆಲೆಗೊಳಿಸಿರಬಹುದಾದ ಕೋಡ್ ನ ವಿವರಗಳನ್ನು ಪರೀಕ್ಷಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಹೇಳಿರುವ ರೆಡ್ ಫ್ಯೂಚರ್, ತಾನು ಈ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ, ಆದರೆ ಮಾಲ್ವೇರ್ಗಳನ್ನು ತಾವು ಪತ್ತೆ ಹಚ್ಚಿದ್ದೇವೆಯೇ ಎಂಬ ಬಗ್ಗೆ ಅವರು ತನಗೆ ಯಾವುದೇ ಮರುಮಾಹಿತಿಯನ್ನು ಒದಗಿಸಿಲ್ಲ ಎಂದಿದೆ.

ಸೈಬರ್ ದಾಳಿಗೂ ಉಭಯ ದೇಶಗಳ ನಡುವಿನ ಇತ್ತೀಚಿನ ಗಡಿ ಉದ್ವಿಗ್ನತೆಗೂ ತಳುಕು ಹಾಕಿರುವ ರೆಡ್ ಫ್ಯೂಚರ್, ಚೀನಾದ ಸೈಬರ್ ಅಭಿಯಾನವು ತನ್ನ ದಾಳಿಗೆ ಗುರಿಯಾಗಿಸಿಕೊಂಡಿರುವ ಭಾರತದ 10 ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಕೇಂದ್ರಗಳನ್ನು ಹಾಗೂ ಎರಡು ಬಂದರುಗಳನ್ನು ತಾನು ಗುರುತಿಸಿರುವುದಾಗಿ ತಿಳಿಸಿದೆ.

ಭಾರತವೂ ಸೈಬರ್ ಬೇಹುಗಾರಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿರುವ ವರದಿಯು ಭಾರತ ಸರಕಾರದಿಂದ ಪ್ರಾಯೋಜಿತವೆಂದು ಶಂಕಿಸಲಾಗಿರುವ ‘ಸೈಡ್ವಿಂಡರ್’ಗುಂಪು 2020ರಲ್ಲಿ ಚೀನಿ ಸೇನೆ ಮತ್ತು ಸರಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿತ್ತು ಎಂದಿದೆ.

ಗಡಿ ಉದ್ವಿಗ್ನತೆಯನ್ನು ಶಮನಗೊಳಿಸಲು ಭಾರತ ಮತ್ತು ಚೀನಾ ಇತ್ತೀಚಿಗೆ ಒಪ್ಪಿಕೊಂಡಿವೆಯಾದರೂ ಬೇಹುಗಾರಿಕೆಯನ್ನು ನಡೆಸಲು ಅಥವಾ ನೆಟ್ವರ್ಕ್ ಗಳನ್ನು ಪ್ರವೇಶಿಸಲು ಅವು ತಮ್ಮ ಸೈಬರ್ ಕಾರ್ಯಾಚರಣೆಗಳನ್ನು ಮುಂದುವರಿಸಲಿವೆ ಎಂದಿರುವ ವರದಿಯು, ದಕ್ಷಿಣ,ಪಶ್ಚಿಮ,ಪೂರ್ವ ಮತ್ತು ಈಶಾನ್ಯ ಭಾರತಗಳಲ್ಲಿನ ಪ್ರಾದೇಶಿಕ ಲೋಡ್ ಡಿಸ್ಪಾಚಿಂಗ್ ಸೆಂಟರ್(ಎಲ್ಡಿಸಿ)ಗಳು,ದಿಲ್ಲಿ ಮತ್ತು ತೆಲಂಗಾಣಗಳಲ್ಲಿಯ ರಾಜ್ಯ ಎಲ್ಡಿಸಿಗಳು ಹಾಗೂ ಕರ್ನಾಟಕದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೂಡಿಗಿ ಗ್ರಾಮದಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ)ದ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಅನ್ನು ಚೀನಾ ಗುರಿಯಾಗಿಸಿಕೊಂಡಿದೆ ಎಂದಿದೆ. ಇದೇ ರೀತಿ ಮುಂಬೈ ಪೋರ್ಟ್ ಟ್ರಸ್ಟ್ ಮತ್ತು ತಮಿಳುನಾಡಿನ ತೂತ್ತುಕುಡಿ ಬಂದರುಗಳು ಚೀನಿ ಹ್ಯಾಕರ್ಗಳ ಗುರಿಯಾಗಿವೆ ಎಂದು ಅದು ತಿಳಿಸಿದೆ.

ಕಳೆದ ಅಕ್ಟೋಬರ್ ನಲ್ಲಿ ಥಾಣೆ ಜಿಲ್ಲೆಯ ಪಡ್ಘಾ ಎಲ್ಡಿಸಿಯಲ್ಲಿ ವೈಫಲ್ಯದಿಂದಾಗಿ ಮುಂಬೈಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದಾಗ ಸ್ಥಳೀಯ ಮಾಧ್ಯಮವೊಂದು ಅಲ್ಲಿ ಪತ್ತೆಯಾಗಿದ್ದ ಮಾಲ್ವೇರ್ನೊಂದಿಗೆ ಅದನ್ನು ತಳುಕು ಹಾಕಿದ್ದನ್ನು ವರದಿಯು ಉಲ್ಲೇಖಿಸಿದೆ.

ತನ್ಮಧ್ಯೆ ಹಲವಾರು ತಜ್ಞರು ಭಾರತದ ವಿದ್ಯುತ್ ಕ್ಷೇತ್ರದಲ್ಲಿಯ ಮತ್ತು ರೈಲ್ವೆ ವ್ಯವಸ್ಥೆಯಲ್ಲಿನ ಚೀನಿ ನಿರ್ಮಿತ ಹಾರ್ಡ್ವೇರ್ಗಳನ್ನು ಬದಲಿಸುವಂತೆ ನರೇಂದ್ರ ಮೋದಿ ಸರಕಾರಕ್ಕೆ ತಮ್ಮ ಕರೆಯನ್ನು ಪುನರುಚ್ಚರಿಸಿದ್ದಾರೆ. ನಾವಿನ್ನೂ ವಿದೇಶಿ ಹಾರ್ಡ್ವೇರ್ ಮತ್ತು ವಿದೇಶಿ ಸಾಫ್ಟ್‌ ವೇರ್‌ ಗಳ ಅವಲಂಬನೆಯಿಂದ ಹೊರಬರಲು ಸಾಧ್ಯವಾಗಿಲ್ಲ ಎನ್ನುವುದೇ ಸಮಸ್ಯೆಯಾಗಿದೆ ಎಂದಿದ್ದಾರೆ ಸೈಬರ್ ತಜ್ಞರೂ ಆಗಿರುವ ನಿವೃತ್ತ ಲೆ.ಜ.ಡಿ.ಎಸ್.ಹೂಡಾ.

ಚೀನಿ ಕಂಪನಿಗಳು ಸೇರಿದಂತೆ ಭಾರತದ ಐಟಿ ಗುತ್ತಿಗೆಗಳನ್ನು ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಟುಸತ್ಯವೆಂದರೆ ಹಾಲಿ ಇರುವ ಮೂಲಸೌಕರ್ಯಗಳಿಂದ ಕಳಚಿಕೊಳ್ಳುವುದು ತುಂಬ ದುಬಾರಿಯ ಮತ್ತು ಕಷ್ಟದ ಕೆಲಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News