ವಿಜಯ್ ಹಝಾರೆ ಟ್ರೋಫಿ: ಹಿಮಾಚಲವನ್ನು ಮಣಿಸಿದ ಮುಂಬೈ

Update: 2021-03-01 18:41 GMT

ಜೈಪುರ: ವಿಜಯ್ ಹಝಾರೆ ಟ್ರೋಫಿಯ ಲೀಗ್ ಹಂತದಲ್ಲಿ ಅಜೇಯರಾಗಿ ಉಳಿದಿರುವ ದೇಶೀಯ ದೈತ್ಯ ಮುಂಬೈ ತಂಡ ಸೋಮವಾರ ತನ್ನ ಅಂತಿಮ ಎಲೈಟ್ ಗ್ರೂಪ್ ‘ಡಿ’ಪಂದ್ಯದಲ್ಲಿ ಹಿಮಾಚಲ ಪ್ರದೇಶವನ್ನು 200 ರನ್‌ಗಳಿಂದ ಸೋಲಿಸಿದೆ.

ಮುಂಬೈ ತಂಡವು ದಿಲ್ಲಿ, ಮಹಾರಾಷ್ಟ್ರ, ಪುದುಚೇರಿ ಮತ್ತು ರಾಜಸ್ಥಾನ ವಿರುದ್ಧ ಆಡಿರುವ ನಾಲ್ಕು ಪಂದ್ಯಗಳಲ್ಲೂ ಜಯ ಗಳಿಸಿತ್ತು.

ಮುಂಬೈನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಮುಂಬೈ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 321ರನ್ ಗಳಿಸಿತ್ತು. ಶಾರ್ದುಲ್ ಠಾಕೂರ್ 92 ರನ್, ಸೂರ್ಯಕುಮಾರ್ ಯಾದವ್ 91 ರನ್ ಮತ್ತು ಆದಿತ್ಯ ತಾರೆ 83 ರನ್ ಗಳಿಸಿ ತಂಡಕ್ಕೆ ದೊಡ್ಡ ಮೊತ್ತದ ಸವಾಲು ಕಲೆ ಹಾಕಲು ನೆರವಾದರು. ಬಳಿಕ ಹಿಮಾಚಲ ತಂಡ ಲೆಗ್ ಸ್ಪಿನ್ನರ್ ಪ್ರಶಾಂತ್ ಸೋಲಂಕಿ (31ಕ್ಕೆ 4), ಶಮ್ಸ್ ಮುಲಾನಿ(42ಕ್ಕೆ 3) ಮತ್ತು ಧವಳ್ ಕುಲಕರ್ಣಿ(8ಕ್ಕೆ 2) ದಾಳಿಗೆ ಸಿಲುಕಿ 24.1 ಓವರ್‌ಗಳಲ್ಲಿ 121ರನ್‌ಗಳಿಗೆ ಆಲೌಟಾಗಿದೆ. ಮುಂಬೈ ತಂಡ ಇದಕ್ಕೂ ಮೊದಲು ಹಿಮಾಚಲ ತಂಡದ ನಾಯಕ ಪಂಕಜ್ ಜೈಸ್ವಾಲ್, ರಿಷಿ ಧವನ್, ವೈಭವ್ ಅರೋರಾ ದಾಳಿಗೆ ಸಿಲುಕಿ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (2), ಪೃಥ್ವಿ ಶಾ (2) ಮತ್ತು ಶ್ರೇಯಸ್ ಅಯ್ಯರ್ (2) ಅವರನ್ನು ಬೇಗನೆ ಕಳೆದುಕೊಂಡಿತ್ತು. 13 ಓವರ್‌ಗಳಲ್ಲಿ 49ಕ್ಕೆ 4 ವಿಕೆಟ್ ಕಳೆದುಕೊಂಡ ಮುಂಬೈ ತಂಡಕ್ಕೆ ಐದನೇ ವಿಕೆಟ್‌ಗೆಸೂರ್ಯಕುಮಾರ್ ಯಾದವ್ ಮತ್ತು ಆದಿತ್ಯ ತಾರೆ 99 ರನ್‌ಗಳ ಜೊತೆಯಾಟ ನೀಡಿದರು. 30.4 ಓವರ್‌ಗಳಲ್ಲಿ ಮುಂಬೈ ತಂಡದ ಸ್ಕೋರ್ 148ಕ್ಕೆ ತಲುಪಿತು. ಸೂರ್ಯಕುಮಾರ್ ಯಾದವ್ ಮತ್ತು ಠಾಕೂರ್ ಶತಕ ವಂಚಿತಗೊಂಡರು.

31ನೇ ಓವರ್‌ನಲ್ಲಿ ಸೂರ್ಯಕುಮಾರ್ ಔಟಾದ ನಂತರ ತಾರೆ ಮತ್ತು ಶಾರ್ದುಲ್ ಆರನೇ ವಿಕೆಟ್‌ಗೆ 112 ರನ್ ಸೇರಿಸಿದರು. ಆಸ್ಟ್ರೇಲಿಯ ವಿರುದ್ಧದ ಬ್ರಿಸ್ಬೇನ್ ಟೆಸ್ಟ್‌ನ ವೀರರಲ್ಲಿ ಒಬ್ಬರಾದ ಶಾರ್ದುಲ್ ಆರು ಬೌಂಡರಿಗಳನ್ನು ಮತ್ತು 6 ಸಿಕ್ಸರ್ ಬಾರಿಸಿದರು. ಅವರು ಕೇವಲ 57 ಎಸೆತಗಳಲ್ಲಿ 92 ರನ್ ಗಳಿಸಿದರು.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News