ನವಾಲ್ನಿಗೆ ವಿಷಪ್ರಾಶನ ಮಾಡಿಸಿದ್ದು ರಶ್ಯ: ಅಮೆರಿಕ

Update: 2021-03-03 16:53 GMT

ವಾಶಿಂಗ್ಟನ್, ಮಾ. 3: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಗೆ ರಶ್ಯ ಸರಕಾರವೇ ವಿಷಪ್ರಾಶನ ಮಾಡಿಸಿದೆ ಎಂಬ ನಿರ್ಧಾರಕ್ಕೆ ಅವೆುರಿಕದ ಗುಪ್ತಚರ ಸಂಸ್ಥೆಗಳು ಬಂದಿವೆ. ಇದರ ಬೆನ್ನಿಗೇ, ಮಂಗಳವಾರ ಅಮೆರಿಕವು ಐರೋಪ್ಯ ಒಕ್ಕೂಟದ ಬೆಂಬಲದೊಂದಿಗೆ ರಶ್ಯದ ಹಿರಿಯ ಅಧಿಕಾರಿಗಳ ಮೇಲೆ ದಿಗ್ಬಂಧನಗಳನ್ನು ವಿಧಿಸಿದೆ.

ಇದು ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಬಳಿಕ, ಅವರ ಸರಕಾರವು ರಶ್ಯದ ವಿರುದ್ಧ ತೆಗೆದುಕೊಂಡಿರುವ ಮೊದಲ ಮಹತ್ವದ ಕ್ರಮವಾಗಿದೆ.

ರಶ್ಯದ ಎಫ್‌ಎಸ್‌ಬಿ ಭದ್ರತಾ ಸೇವೆಯ ನಿರ್ದೇಶಕ ಸೇರಿದಂತೆ ದೇಶದ ಏಳು ಹಿರಿಯ ಅಧಿಕಾರಿಗಳ ಅಮೆರಿಕದಲ್ಲಿರುವ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಅವರೊಂದಿಗೆ ನಡೆಸುವ ಯಾವುದೇ ವ್ಯವಹಾರಗಳು ಅಪರಾಧವಾಗಿರುತ್ತವೆ ಎಂದು ಬೈಡನ್ ಸರಕಾರ ಹೇಳಿದೆ.

ಕೆಜಿಬಿಯ ಉತ್ತರಾಧಿಕಾರಿ ಎಫ್‌ಎಸ್‌ಬಿಗೆ ಸೇರಿದ ಅಧಿಕಾರಿಗಳು 2020 ಆಗಸ್ಟ್ 20ರಂದು ನವಾಲ್ನಿಯ ಮೇಲೆ ನರದ ಮೇಲೆ ಪರಿಣಾಮ ಬೀರುವ ರಾಸಾಯನಿಕ ನೊವಿಚೊಕ್ ಪ್ರಯೋಗಿಸಿದ್ದಾರೆ ಎಂಬ ನಿರ್ಧಾರಕ್ಕೆ ಅಮೆರಿಕ ಗುಪ್ತಚರ ಇಲಾಖೆ ಅತ್ಯಂತ ಆತ್ಮವಿಶ್ವಾಸದಿಂದ ಬಂದಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ವರದಿಗಾರರಿಗೆ ತಿಳಿಸಿದರು.

ನವಾಲ್ನಿಯನ್ನು ಚಿಕಿತ್ಸೆಗಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಜರ್ಮನಿಗೆ ಸಾಗಿಸಲಾಗಿತ್ತು. ಅಲ್ಲಿ ಅವರು ಚೇತರಿಸಿಕೊಂಡ ಬಳಿಕ ಜನವರಿಯಲ್ಲಿ ರಶ್ಯಕ್ಕೆ ವಾಪಸಾಗಿದ್ದಾರೆ. ವಾಪಸಾದ ತಕ್ಷಣ ರಶ್ಯ ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

‘‘ರಶ್ಯವು ರಾಸಾಯನಿಕ ಅಸ್ತ್ರಗಳನ್ನು ಬಳಸಿದರೆ ಹಾಗೂ ಮಾನವಹಕ್ಕುಗಳನ್ನು ಉಲ್ಲಂಘಿಸಿದರೆ ಅವುಗಳ ಪರಿಣಾಮಗಳನ್ನು ಅದು ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶ ನೀಡಲು ಅಮೆರಿಕವು ಈ ಕ್ರಮಗಳನ್ನು ತೆಗೆದುಕೊಂಡಿದೆ’’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬೆಂಕಿಯೊಂದಿಗೆ ಆಟ ಬೇಡ: ರಶ್ಯ ಎಚ್ಚರಿಕೆ

ಮಾಸ್ಕೋ (ರಶ್ಯ), ಮಾ. 3: ರಶ್ಯ ಸರಕಾರದ ಅಧಿಕಾರಿಗಳ ಮೇಲೆ ಅಮೆರಿಕ ದಿಗ್ಬಂಧನಗಳನ್ನು ವಿಧಿಸಿದ ಬಳಿಕ ಆಕ್ರೋಶಗೊಂಡಿರುವ ರಶ್ಯ, ‘ಇಂಥ ಆಕ್ರಮಣವನ್ನು ಹಿಮ್ಮೆಟ್ಟಿಸುವುದಾಗಿ’ ಬುಧವಾರ ಎಚ್ಚರಿಕೆ ನೀಡಿದೆ.

 ‘‘ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ವ್ಯವಸ್ಥಿತವಾಗಿ ಹಾಗೂ ದೃಢನಿರ್ಧಾರದಿಂದ ರಕ್ಷಿಸುವ ನಮ್ಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಹಾಗೂ ಆಕ್ರಮಣವನ್ನು ಹಿಮ್ಮೆಟ್ಟಿಸುತ್ತೇವೆ’’ ಎಂದು ರಶ್ಯ ವಿದೇಶ ಸಚಿವಾಲಯದ ವಕ್ತಾರೆ ಮರಿಯಾ ಝಖರೊವ ಹೇಳಿದರು.

‘‘ಬೆಂಕಿಯೊಂದಿಗೆ ಆಟವಾಡಬೇಡಿ ಎಂಬುದಾಗಿ ನಾವು ನಮ್ಮ (ಅಮೆರಿಕದ) ಸಹೋದ್ಯೋಗಿಗಳನ್ನು ಒತ್ತಾಯಿಸುತ್ತೇವೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News