ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯನ್ನು ನಿರ್ದೋಷಿ ಎಂದು ಘೋಷಿಸಿದ ಕೋರ್ಟ್

Update: 2021-03-04 14:21 GMT

ಲಕ್ನೋ: ಅತ್ಯಾಚಾರ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ 20 ವರ್ಷ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಈ ವರ್ಷದ ಜನವರಿ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ ನಿರ್ದೋಷಿ ಎಂದು ಘೋಷಿಸಿದೆ. ಈ ವ್ಯಕ್ತಿ ಬುಧವಾರ ಸಂಜೆ ಆಗ್ರಾ ಕೇಂದ್ರ ಕಾರಾಗೃಹದಿಂದ ಹೊರ ಬಂದಿದ್ದಾನೆ.

ವಿಷ್ಣು ತಿವಾರಿ ಎಂಬ  43 ವರ್ಷದ ವ್ಯಕ್ತಿ 23 ವರ್ಷದವನಿರುವಾಗ ತಾನು ಮಾಡದ ಅಪರಾಧಕ್ಕೆ ಶಿಕ್ಷೆಗೊಳಗಾಗಿದ್ದ. ಬಿಡುಗಡೆಗೊಂಡ ಆತ ಉತ್ತರ ಪ್ರದೇಶದ ಲಲಿತಪುರ್ ಜಿಲ್ಲೆಯಲ್ಲಿರುವ ತನ್ನ ಗ್ರಾಮಕ್ಕೆ ತೆರಳಿದ್ದಾನೆ. ತಾನು ಗದ್ದೆಯತ್ತ ಸಾಗುತ್ತಿದ್ದಾಗ ಆತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಗ್ರಾಮದ ಮಹಿಳೆಯೊಬ್ಬಳು ದೂರಿದ ನಂತರ ಸೆಪ್ಟೆಂಬರ್ 16, 2000ರಂದು ಬಂಧಿತನಾಗಿದ್ದ ತಿವಾರಿ ವಿರುದ್ಧ ಅತ್ಯಾಚಾರ ಹಾಗೂ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯದ ವಿರುದ್ಧದ ಕಾಯಿದೆ ಹೇರಲಾಗಿತ್ತು. ಮೂರು ವರ್ಷ ವಿಚಾರಣೆಯ ನಂತರ ಲಲಿತಪುರ್ ನ್ಯಾಯಾಲಯವೊಂದು ಆತನಿಗೆ 10 ವರ್ಷ ಕಠಿಣ ಸಜೆ ವಿಧಿಸಿತ್ತು. ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯವೂ ಅಪರಾಧ ಸಾಬೀತುಗೊಂಡು ಆತನಿಗೆ ಜಿವಾವಧಿ ಶಿಕ್ಷೆ ವಿಧಿಸಲಾಗಿತ್ತು. ನಂತರ ಆತನನ್ನು ಆಗ್ರಾ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.

ಜೈಲಿನಿಂದ ಹೊರಬಂದ ನಂತರ ಆತ ತನಗೆ ಜೀವನದಲ್ಲಿ ಯಾವುದೇ ನಿರೀಕ್ಷೆಯಿರಲಿಲ್ಲ. ಕಿರಿಯ ಸೋದರನೊಬ್ಬನನ್ನು ಹೊರತು ಪಡಿಸಿ ಯಾರೂ ಇಲ್ಲ ಎಂದು ಹೇಳಿಕೊಂಡಿದ್ದಾನೆ. ಜೈಲಿನಿಂದ ತೆರಳುವಾಗ ನೀಡಲಾದ ರೂ. 600 ಹೊರತು ತನ್ನ ಬಳಿ ಏನೂ ಇಲ್ಲ ಎಂದು ಆತ ಹೇಳಿದ್ದಾನೆ.

ಜೈಲಿನಲ್ಲಿರುವಾಗ ಆತ ಉತ್ತಮ ನಡತೆ ತೋರಿದ್ದ ಹಾಗೂ ಅಡುಗೆಯಲ್ಲೂ ಆಸಕ್ತಿ ವಹಿಸಿದ್ದನೆನ್ನಲಾಗಿದೆ. ಇದೀಗ ಕೆಲ ವರ್ತಕರು ಹಾಗೂ ಆಗ್ರಾದ ಕೆಲ ದಾನಿಗಳು ಆತನಿಗೆ ಉದ್ಯೋಗ ಕೊಡಲು ಮುಂದೆ ಬಂದಿದ್ದಾರೆ. ಆತ ತಾನು ಮಾಡದ ತಪ್ಪಿಗೆ ಅನುಭವಿಸಿದ ಶಿಕ್ಷೆಗಾಗಿ ಆತನಿಗೆ ಪರಿಹಾರ ಒದಗಿಸಬೇಕೆಂದು ಕೋರಿ ಕೆಲ  ಮಾನವ ಹಕ್ಕು ಕಾರ್ಯಕರ್ತರು ಮಾನವ ಹಕ್ಕು ಆಯೋಗಕ್ಕೂ ಮನವಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News