12ನೇ ಅಂತಸ್ತಿನ ಬಾಲ್ಕನಿಯಿಂದ ಜಾರಿ ಬಿದ್ದ ಮಗುವನ್ನು ರಕ್ಷಿಸಿದ ಡೆಲಿವರಿ ಮ್ಯಾನ್; ವೀಡಿಯೋ ವೈರಲ್

Update: 2021-03-04 13:55 GMT

ಹೊಸದಿಲ್ಲಿ: ವಿಯೆಟ್ನಾಂ ದೇಶದ ಹನೋಯಿ ನಗರದಲ್ಲಿನ ವಸತಿ ಸಮುಚ್ಛಯವೊಂದರ 12ನೇ ಅಂತಸ್ತಿನ ಬಾಲ್ಕನಿಯಿಂದ ಆಕಸ್ಮತ್ತಾಗಿ ಕೆಳಕ್ಕೆ ಬಿದ್ದ ಎರಡು ವರ್ಷದ ಹೆಣ್ಣು ಮಗುವಿನ ಜೀವ ಉಳಿಸಿದ  ಡೆಲಿವರಿ ಮ್ಯಾನ್ ಒಬ್ಬನ  ಮಹತ್ಕಾರ್ಯವನ್ನು ಸಾಮಾಜಿಕ ಜಾಲತಾಣಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯುನಿಕಾಲ್ ಈ ಘಟನೆ ಕುರಿತು ಟ್ವೀಟ್ ಮಾಡಿದ ಕಿರು ವೀಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ.

ಕಳೆದ ಶನಿವಾರ  ಹನೋಯಿ ನಗರದಲ್ಲಿ ಪ್ಯಾಕೇಜ್ ಒಂದನ್ನು ಡೆಲಿವರಿ ಮಾಡಲು ಇದ್ದುದರಿಂದ ನಗುಯೆನ್ ನಗೊಕ್ ಎಂಬಾತ ತನ್ನ ಟ್ರಕ್‍ನಲ್ಲಿ ಕುಳಿತುಕೊಂಡಿದ್ದ ಸಂದರ್ಭ ಮಗುವೊಂದು 12ನೇ ಅಂತಸ್ತಿನ ಬಾಲ್ಕನಿಯ ಒಂದು ಅಂಚನ್ನು ಹಿಡಿದುಕೊಂಡು ನೇತಾಡುತ್ತಿರುವುದನ್ನು ಗಮನಿಸಿದ್ದಾನೆ. ತಕ್ಷಣ  ಆ ಕಟ್ಟಡದ ಕೆಳ ಭಾಗದಲ್ಲಿದ್ದ ಹಂಚಿನ ಛಾವಣಿಗೆ ಆತ ಹತ್ತಿದ್ದ. ಅತ್ತ ಮಗು ತನ್ನ ಕೈಜಾರಿ ಕೆಳಕ್ಕೆ ಬೀಳಲಿದ್ದಾಳೆಂದು ತಿಳಿದು ಹೌಹಾರಿ ಆಕೆಯ ತಾಯಿ ಬೊಬ್ಬೆಯಿಡುತ್ತಿದ್ದಂತೆ ಕೆಳಗೆ ನಿಂತಿದ್ದ ಡೆಲಿವರಿ ಮ್ಯಾನ್ ಆ ಮಗುವನ್ನು ಹಿಡಿದೇ ಬಿಟ್ಟಿದ್ದ. ಈ ವೀಡಿಯೋವನ್ನು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಮಗುವಿನ ಬಾಯಿಯಿಂದ ರಕ್ತ ಒಸರುತ್ತಿರುವುದನ್ನು ತಾನು ಗಮನಿಸಿದೆ ಎಂದು ಆತ ತಿಳಿಸಿದ್ದು ತಕ್ಷಣ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಕೆಯ ಪೃಷ್ಠ ಭಾಗದ ಮೂಳೆಗೆ ಉಂಟಾದ ಹಾನಿಗೆ ಚಿಕಿತ್ಸೆ ಲಭಿಸುವಂತೆ ಮಾಡಲಾಯಿತು. ಮಗುವನ್ನು ಹಿಡಿಯುವ ರಭಸಕ್ಕೆ ನಗುಯೆನ್ ಕೈಗೂ ಸ್ಪಲ್ಪ ನೋವಾಗಿದೆ.

"ಘಟನೆ ನಡೆದಾಗ ನಾನು ಹೆಚ್ಚೇನೂ ಯೋಚಿಸಲಿಲ್ಲ. ಆ ಮಗುವನ್ನು ನೋಡಿದಾಕ್ಷಣ ಮನೆಯಲ್ಲಿರುವ ನನ್ನ ಮಗಳ ನೆನಪಾಯಿತು ಹಾಗೂ ಆ ಮಗುವನ್ನು ಬಚಾವ್ ಮಾಡಲು ಧಾವಿಸಿದೆ. ಒಂದು ನಿಮಿಷದೊಳಗಾಗಿ ಎಲ್ಲವೂ ನಡೆದು ಹೋಯಿತು. ಆ ಮಗುವನ್ನು ಬಚಾವ್ ಮಾಡಿದೆ ಎಂದು ನನಗೇ ನಂಬಲಾಗುತ್ತಿಲ್ಲ" ಎಂದು ಆತ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News