ಸುಲಲಿತ ಜೀವನ ಸೂಚ್ಯಂಕದ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ

Update: 2021-03-04 15:43 GMT

ಹೊಸದಿಲ್ಲಿ, ಮಾ.4: ಕೇಂದ್ರ ಸರಕಾರ ಗುರುವಾರ ಬಿಡುಗಡೆಗೊಳಿಸಿದ ಸುಲಲಿತ ಜೀವನ ಸೂಚ್ಯಂಕದ ವಾಸಯೋಗ್ಯ 111 ನಗರಗಳ ಪಟ್ಟಿಯಲ್ಲಿ (ಒಂದು ಮಿಲಿಯನ್‌ಗೂ ಹೆಚ್ಚಿನ ಜನಸಂಖ್ಯೆ ಇರುವ ನಗರಗಳ ವಿಭಾಗದಲ್ಲಿ ) ಬೆಂಗಳೂರು ನಗರಕ್ಕೆ ಅಗ್ರಸ್ಥಾನ ದೊರಕಿದೆ.

ಪುಣೆ, ಅಹ್ಮದಾಬಾದ್, ಚೆನ್ನೈ, ಸೂರತ್, ನವಿ ಮುಂಬೈ, ಕೊಯಂಬತ್ತೂರು, ವಡೋದರ , ಇಂದೋರ್ ಮತ್ತು ಗ್ರೇಟರ್ ಮುಂಬೈ ಆ ಬಳಿಕದ ಸ್ಥಾನಗಳಲ್ಲಿವೆ. ಒಂದು ಮಿಲಿಯನ್‌ಗಿಂತ ಕಡಿಮೆ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಶಿಮ್ಲ ಪ್ರಥಮ ಸ್ಥಾನದಲ್ಲಿದೆ. ಭುವನೇಶ್ವರ, ಸಿಲ್ವಾಸ, ಕಾಕಿನಾಡ, ಸೇಲಂ, ವೆಲ್ಲೋರ್, ಗಾಂಧೀನಗರ, ಗುರುಗ್ರಾಮ, ದಾವಣಗೆರೆ ಮತ್ತು ತಿರುಚಿನಾಪಳ್ಳಿ ಆ ಬಳಿಕದ ಸ್ಥಾನದಲ್ಲಿವೆ.

ಕೇಂದ್ರ ವಸತಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಸುಲಲಿತ ಜೀವನ ನಗರಗಳ ಸೂಚ್ಯಾಂಕದಲ್ಲಿ ಒಂದು ಮಿಲಿಯನ್‌ಗಿಂತ ಅಧಿಕ ಜನಸಂಖ್ಯೆಯ ನಗರ ಹಾಗೂ ಒಂದು ಮಿಲಿಯನ್‌ಗಿಂತ ಕಡಿಮೆ ಜನಸಂಖ್ಯೆಯ ನಗರ ಎಂದು ಎರಡು ಹಂತವಿದೆ. ಇದೇ ರೀತಿ ಪುರಸಭೆ ಕಾರ್ಯಕ್ಷಮತೆ ಸೂಚ್ಯಂಕ ಪಟ್ಟಿಯಲ್ಲಿ ಒಂದು ಮಿಲಿಯನ್‌ಗಿಂತ ಕಡಿಮೆ ಜನಸಂಖ್ಯೆಯಿರುವ ವಿಭಾಗದಲ್ಲಿ ಹೊಸದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಅಗ್ರಸ್ಥಾನದಲ್ಲಿದ್ದರೆ ತಿರುಪತಿ ಮತ್ತು ಗಾಂಧೀನಗರ ಆ ಬಳಿಕದ ಸ್ಥಾನದಲ್ಲಿವೆ. ಮಿಲಿಯ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ವಿಭಾಗದ ಪುರಸಭೆ ಕಾರ್ಯಕ್ಷಮತೆ ಸೂಚ್ಯಂಕ ಪಟ್ಟಿಯಲ್ಲಿ ಇಂದೋರ್ ಪ್ರಥಮ ಸ್ಥಾನದಲ್ಲಿದ್ದು ಸೂರತ್ ಮತ್ತು ಭೋಪಾಲ ಆ ಬಳಿಕದ ಸ್ಥಾನದಲ್ಲಿವೆ.

ಸೇವೆ, ಹಣಕಾಸು, ಕಾರ್ಯನೀತಿ, ತಂತ್ರಜ್ಞಾನ ಮತ್ತು ಆಡಳಿತ- ಈ ಐದು ಕ್ಷೇತ್ರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ದೇಶದಾದ್ಯಂತ 111 ನಗರಗಳ ನಿವಾಸಿಗಳ ಅಭಿಪ್ರಾಯ, ಅನಿಸಿಕೆ ಸಂಗ್ರಹಿಸಿ ಸೂಚ್ಯಂಕ ಸಿದ್ಧಗೊಳಿಸಲಾಗಿದೆ ಎಂದು ಪ್ರೆಸ್ ಇನ್‌ಫಾರ್ಮೇಶನ್ ಬ್ಯೂರೊ (ಪಿಐಬಿ) ಹೇಳಿದೆ.

ಮೌಲ್ಯಮಾಪನ ಪ್ರಕ್ರಿಯೆ

ಸುಲಲಿತ ಜೀವನ ಸೂಚ್ಯಾಂಕವು ಒಂದು ಮೌಲ್ಯಮಾಪನ ಸಾಧನವಾಗಿದ್ದು ಅದು ಜೀವನದ ಗುಣಮಟ್ಟ ಮತ್ತು ನಗರ ಅಭಿವೃದ್ಧಿಗೆ ವಿವಿಧ ಉಪಕ್ರಮಗಳ ಪ್ರಭಾವವನ್ನು ಮೌಲ್ಯಮಾಪನ ಮಾಡುತ್ತದೆ. ದೇಶದಾದ್ಯಂತದ ನಗರಗಳ ಜೀವನದ ಗುಣಮಟ್ಟ, ನಗರದ ಆರ್ಥಿಕ ಸಾಮರ್ಥ್ಯ ಮತ್ತು ಅದರ ಸುಸ್ಥಿರತೆ, ಸ್ಥಿತಿಸ್ಥಾಪಕತ್ವವನ್ನು ಆಧರಿಸಿ ನಡೆಸುವ ಮೌಲ್ಯಮಾಪನವು ಸಮೀಕ್ಷೆಯಲ್ಲಿ ಭಾಗವಹಿಸುವ ನಗರಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಒದಗಿಸುತ್ತದೆ. ನಗರಾಡಳಿತ ಒದಗಿಸುವ ಸೇವೆಗಳ ಬಗ್ಗೆ ನಿವಾಸಿಗಳ ದೃಷ್ಟಿಕೋನವನ್ನು ನಾಗರಿಕ ಗ್ರಹಿಕೆ ಮೂಲಕ ಮೌಲ್ಯಮಾಪನ ನಡೆಸುವ ಪ್ರಕ್ರಿಯೆ ಇದಾಗಿದೆ ಎಂದು ಪಿಐಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News