ಭಾರತದಲ್ಲಿ ‘ಆಂಶಿಕ ಸ್ವಾತಂತ್ರ್ಯ’ ಮಾತ್ರ, ಪ್ರಜಾಪ್ರಭುತ್ವದ ಸ್ಥಾನಮಾನದಲ್ಲಿ ಕುಸಿತ: ಫ್ರೀಡಂ ಹೌಸ್ ವರದಿ

Update: 2021-03-04 15:54 GMT

ವಾಶಿಂಗ್ಟನ್, ಮಾ. 4: ಅಮೆರಿಕ ಸರಕಾರದಿಂದ ಅನುದಾನ ಪಡೆಯುತ್ತಿರುವ ಸಂಶೋಧನಾ ಗುಂಪು ‘ಫ್ರೀಡಂ ಹೌಸ್’ ಸಿದ್ಧಪಡಿಸುವ ಪ್ರಜಾಪ್ರಭುತ್ವ ದೇಶಗಳ ವಾರ್ಷಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸ್ಥಾನ ಕುಸಿದಿದೆ. ಭಾರತದಲ್ಲಿ ‘ಆಂಶಿಕ ಸ್ವಾತಂತ್ರ್ಯ’ ಮಾತ್ರವಿದೆ ಎಂಬುದಾಗಿ ವರದಿ ಹೇಳಿದ್ದು, 1997ರ ಬಳಿಕ ಮೊದಲ ಬಾರಿಗೆ ಪಟ್ಟಿಯಲ್ಲಿ ದೇಶದ ಸ್ಥಾನಮಾನ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ನಾಗರಿಕ ಹಕ್ಕುಗಳು ನಶಿಸುತ್ತಿವೆ ಎಂದು ‘ಫ್ರೀಡಂ ಹೌಸ್’ ಹೇಳಿದೆ.

ಮುಸ್ಲಿಮ್ ನಾಗರಿಕರ ವಿರುದ್ಧ ನಿರಂತರವಾಗಿ ನಡೆಸಲಾಗುತ್ತಿರುವ ತಾರತಮ್ಯ ಹಾಗೂ ಸರಕಾರದ ಟೀಕಾಕಾರರು ಮತ್ತು ಪತ್ರಕರ್ತರಿಗೆ ನೀಡಲಾಗುತ್ತಿರುವ ನಿರಂತರ ಕಿರುಕುಳಗಳಿಂದಾಗಿ ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆಯ ರ್ಯಾಂಕಿಂಗ್ ಈ ಬಾರಿ ಕುಸಿತ ಕಂಡಿದೆ ಎಂದು ಫ್ರೀಡಂ ಹೌಸ್ ಬಿಡುಗಡೆ ಮಾಡಿರುವ ‘ಫ್ರೀಡಂ ಇನ್ ದ ವರ್ಲ್ಡ್’ ಎಂಬ ಹೆಸರಿನ ವರದಿ ಹೇಳಿದೆ.

‘‘ಹಿಂದೂ ರಾಷ್ಟ್ರೀಯವಾದಿ ಸರಕಾರ ಮತ್ತು ಅದರ ಮಿತ್ರರ ನೇತೃತ್ವದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಹೆಚ್ಚಳವಾಗಿದೆ ಹಾಗೂ ನಿರಂತರವಾಗಿ ತಾರತಮ್ಯಕರ ನೀತಿಗಳನ್ನು ತರಲಾಗುತ್ತಿದೆ. ಈ ಮಾದರಿಯನ್ನು ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ’’ ಎಂದು ವರದಿ ಹೇಳಿದೆ.

ದಿಲ್ಲಿಯಲ್ಲಿ ನಡೆದ ಕೋಮುಗಲಭೆಗಳು, ಸರಕಾರದ ಟೀಕಾಕಾರರ ವಿರುದ್ಧ ದೇಶದ್ರೋಹದ ಕಾನೂನುಗಳ ಬಳಕೆ ಮತ್ತು ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ನಿಯಂತ್ರಿಸಲು ಪ್ರಧಾನಿ ಮೋದಿ ದಿಢೀರನೆ ಘೋಷಿಸಿದ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಅನುಭವಿಸಿದ ಸಂಕಷ್ಟಗಳು- ಮುಂತಾದ 2020ರ ಹಲವು ಘಟನೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ನಿರಾಕರಣೆಗಾಗಿ ರ್ಯಾಂಕಿಂಗ್‌ನಲ್ಲಿ ಕುಸಿತ ಕಂಡ 73 ದೇಶಗಳ ಪೈಕಿ ಭಾರತವೂ ಒಂದಾಗಿದೆ. ಈ ಪಟ್ಟಿಯಲ್ಲಿ 210 ದೇಶಗಳಿಗೆ ರ್ಯಾಂಕಿಂಗ್ ನೀಡಲಾಗುತ್ತದೆ. ‘ದಮನಿತ ಸ್ವಾತಂತ್ರ’ ಹೊಂದಿರುವ ದೇಶಗಳ ಸಂಖ್ಯೆ 2006ರ ಬಳಿಕ ಗರಿಷ್ಠ ಮಟ್ಟಕ್ಕೆ ಏರಿದೆ.

ಈ ಪಟ್ಟಿಯಲ್ಲಿ ಚೀನಾ, ಬೆಲಾರುಸ್ ಮತ್ತು ವೆನೆಝುವೆಲ ಮುಂತಾದ ನಿರಂಕುಶ ದೇಶಗಳು ಮಾತ್ರವಲ್ಲ, ಭಾರತದಂಥ ಪ್ರಜಾಪ್ರಭುತ್ವ ದೇಶಗಳೂ ಸ್ಥಾನ ಪಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News